ದಾವಣಗೆರೆ:
ನೈತಿಕ ಶಿಕ್ಷಣದ ಕೊರತೆಯಿಂದಾಗಿ ಭಾರತವು ಸುಸಜ್ಜಿತವಾಗುತ್ತಿದೆಯೇ ಹೊರತು, ಸುಸಂಸ್ಕೃತವಾಗುತ್ತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ ವಿಷಾದ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಸುಶ್ರಾವ್ಯ ಸಂಗೀತ ವಿದ್ಯಾಲಯವು ಕಸಾಪ ಜಿಲ್ಲಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಹಿರಿಯ ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಗೀತೆಗಳ ಗಾಯನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದುಶ್ಚಟ, ಮಾದಕ ವಸ್ತುಗಳ ದಾಸರಾಗುತ್ತಿರುವ ಯುವಜನರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದರ ಜೊತೆಗೆ ಭಯವನ್ನು ಹುಟ್ಟಿಸುವಂತಹ ಭಯೋತ್ಪಾದಕರಾಗುತ್ತಿದ್ದಾರೆ. ಹೀಗಾಗಿ ಯುವಜನತೆಗೆ ನೈತಿಕ ಶಿಕ್ಷಣ ನೀಡುವ ಮೂಲಕ ಸಂಸ್ಕಾರ ತುಂಬಬೇಕಾದ ಜರೂರಿದೆ ಎಂದು ಹೇಳಿದರು.
ಪ್ರಸ್ತುತ ಪ್ರಜ್ಞಾವಂತಿಕೆ ಇಲ್ಲದ ಸಂಸ್ಕಾರವಿಲ್ಲದ ವಿದ್ಯಾವಂತರನ್ನು ಕಾಣುತ್ತಿದ್ದೇವೆ. ಆದರೆ, ನಮ್ಮ ದೇಶಕ್ಕೆ ಸುಸಂಸ್ಕøತರಿಂದ ಕೂಡಿದ ಸುಶಿಕ್ಷಿತ ಯುವ ಜನಾಂಗ ಬೇಕಾಗಿದೆ. ಸಾಹಿತ್ಯ, ಸಂಗೀತವು ವ್ಯಕ್ತಿಯನ್ನು ಸುಸಂಸ್ಕೃತರನ್ನಾಗಿಸುವುದರ ಜೊತೆಗೆ ಮೃಧುತ್ವ ಬೆಳೆಸಲಿದೆ ಎಂದರು.
ಶಿಕ್ಷಣದ ಮೂಲಕ ಭಾರತೀಯ ಸಂಸ್ಕೃತಿ, ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ನಡೆಯಬೇಕಾಗಿದೆ. ನಮ್ಮ ಪರಂಪರೆಯ ಸಾಂಸ್ಕೃತಿಕ ಶ್ರೀಮಂತಿಕೆ, ಸಂಪತ್ತನ್ನು ಮಕ್ಕಳಿಗೆ ಪರಿಚಯಿಸಬೇಕಿದೆ. ನಮ್ಮ ದೇಶಕ್ಕೆ ಇಂದು ಸುಸಂಸ್ಕೃತರು ಬೇಕಾಗಿದ್ದಾರೆ. ಇಂತಹ ಸುಸಂಸ್ಕೃತರೇ ನಮ್ಮ ಶ್ರೀಮಂತ ಸಾಂಸ್ಕೃತಿಕ ಸಂಸ್ಥೆಯಿಂದಲೇ ಭಾರತ ಗುರುತಿಸಿಕೊಂಡಿದೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರವನ್ನೂ ಮೀರಿ ಬೆಳೆಯುತ್ತಿದೆ ಎಂದು ಹೇಳಿದರು.
ಅಮೇರಿಕಾದಲ್ಲೇ ಹುಟ್ಟಿದ ರಿಯಾಲಿಟಿ ಶೋಗಳು ನಮ್ಮ ಮಕ್ಕಳು, ಯುವ ಪೀಳಿಗೆಯ ಪ್ರತಿಭೆ ಪ್ರೋತ್ಸಾಹಿಸುವುದರ ಬದಲಾಗಿ ಮಾರುಕಟ್ಟೆ ಸಂಸ್ಕೃತಿಯು ವಿಜೃಂಭಿಸುವಂತೆ ಮಾಡುತ್ತಿವೆ. ಮಾರುಕಟ್ಟೆ ಸಂಸ್ಕೃತಿಯ ಈಗಿನ ಕಾಲಘಟ್ಟದಲ್ಲಿ ಮಂಗನಿಂದ ಮಾನವನಾಗಿದ್ದ ಮನುಷ್ಯ ಮತ್ತೆ ಮನುಷ್ಯನಿಂದ ಮಂಗವಾಗುತ್ತಿದ್ದಾನೆ ಎಂದರು.
ಶಿಬಿರ ಉದ್ಘಾಟಿಸಿದ ಹಿಂದುಸ್ತಾನಿ ಸಂಗೀತ ಶಿಕ್ಷಕ ಅಜಯ್ ನಾರಾಯಣ ಮಾತನಾಡಿ, ದಾವಣಗೆರೆ ಜಿಲ್ಲೆಯ ಸಾಹಿತಿಗಳ ಉತ್ತಮ ಕವಿತೆಗಳಿಗೆ ರಾಗ ಸಂಯೋಜಿಸಿ, ಮಕ್ಕಳಿಗೆ ಕಲಿಸಿದರೆ ಸ್ಥಳೀಯವಾಗಿಯೇ ಸಾಹಿತ್ಯ ಕೃಷಿ ಮತ್ತಷ್ಟು ಬೆಳೆಯಲು ಪೂರಕವಾಗುತ್ತದೆ. ಸಾಹಿತ್ಯ ಪರಿಷತ್ ಜೊತೆಗೆ ಗುರುತಿಸಿಕೊಂಡ ಅದೆಷ್ಟೋ ಸಾಹಿತಿಗಳು ಕವಿತೆಗಳನ್ನು ರಚಿಸಿದ್ದಾರೆ. ಅಂತಹವರ ಕವಿತೆಗಳ ಪೈಕಿ ಉತ್ತಮವಾಗಿರುವುದನ್ನು ಆಯ್ಕೆ ಮಾಡಿ, ಮಕ್ಕಳಿಗೆ ಹಾಡುವುದಕ್ಕೆ ಕಲಿಸಬೇಕೆಂದು ಸಲಹೆ ನೀಡಿದರು.
ಸಂಸ್ಥೆ ನಿರ್ದೇಶಕಿ, ಹಿರಿಯ ಗಾಯಕಿ ಯಶಾ ದಿನೇಶ ಮಾತನಾಡಿ, ಕವಿ ಲಕ್ಷ್ಮೀನಾರಾಯಣ ಭಟ್ಟರು 400ಕ್ಕೂ ಹೆಚ್ಚು ಗೀತೆ ರಚಿಸಿದ್ದು, ಭಟ್ಟರ ಕಾವ್ಯ ರಚನೆ ಹೇಗೆ ಉನ್ನತವಾಗಿದೆಯೋ ಅದೇರೀತಿ ಅವರ ವ್ಯಕ್ತಿತ್ವವೂ ಶ್ರೇಷ್ಠವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಿಬಿರದ ಸಂಚಾಲಕರಾದ ಜಿ.ಎಸ್.ಪ್ರೇಮಾ, ವಿ.ಡಿ.ತ್ರಿವೇಣಿ, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.