ಜಿಲ್ಲೆಯಲ್ಲಿ ಸರಿಯಾದ ಮಳೆಯಿಲ್ಲದೆ ಕೆರೆಕಟ್ಟೆಗಳು ಬತ್ತಿಹೋಗಿವೆ:ಆರ್.ವಿ.ಪುಟ್ಟಕಾಮಣ್ಣ

ತುಮಕೂರು

       ಪ್ರಕೃತಿ ವಿಕೋಪದಿಂದ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಸರಿಯಾದ ಮಳೆಯಿಲ್ಲದೆ ಕೆರೆಕಟ್ಟೆಗಳು ಬತ್ತಿಹೋಗಿವೆ. ತೆಂಗು, ಅಡಕೆ ಮರಗಳು ಒಣಗಿ ಹೋಗುತ್ತಿವೆ. ಜನಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ಪರದಾಡುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ಇದರ ಬಗ್ಗೆ ಚರ್ಚೆ ಮಾಡದೇ ಇರುವುದಕ್ಕೆ ಆಕ್ರೋಶಗೊಂಡ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಸಾರ್ವಜನಿಕರು ಮತದಾನ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಆರ್.ವಿ.ಪುಟ್ಟಕಾಮಣ್ಣ ತಿಳಿಸಿದರು.

       ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಗಳ ಇಚ್ಚಾಶಕ್ತಿಯ ಕೊರತೆಯಿಂದ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಅತಂತ್ರವಾಗಿ, ಅನಾಥವಾಗಿ ಉಳಿದಿದೆ. ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಅನೇಕ ಸಮಸ್ಯೆಗಳಿಂದ ಪರದಾಡುತ್ತಿದ್ದರೂ ಈ ಬಗ್ಗೆ ಯಾರೂ ಗಮನ ಹರಿಸಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಮತ ನೀಡಬೇಕಾ ಬೇಡವಾ ಎಂಬುದರ ಬನಗ್ಗೆ ಗ್ರಾಮದ ಸಾರ್ವಜನಿಕರು ಎಲ್ಲಾ ಸೇರಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

      ನೀರಾವರಿ ಹೋರಾಟ ಸಮಿತಿಯ ರಘುರಾವ್ ಮಾತನಾಡಿ, ಶಿರಾದ ಬುಕ್ಕಾ ಪಟ್ಟಣ ಹೋಬಳಿಯ ಮೂಲಕ ಭದ್ರಾ ಮೇಲ್ದಾಂಡೆ ಯೋಜನೆಯ ಚಾನಲ್ 17 ಕಿಮೀ ಹಾದು ಹೋದರೂ ಅದರಿಂದ ಬುಕ್ಕಾಪಟ್ಟಣ ಹೋಬಳಿಗೆ ಕುಡಿಯುವ ನೀರಿನ ಹಂಚಿಕೆ ಮಾಡಿಲ್ಲ. ಕಳೆದ 50 ವರ್ಷಗಳಿಂದಲೂ ಈ ಯೋಜನೆಯನ್ನು ಪೂರ್ಣಗೊಳಿಸಲು ಆಗಲಿಲ್ಲ. ತಮ್ಮ ಪಕ್ಷಗಳೇ ಅಧಿಕಾರದಲ್ಲಿದ್ದಾಗಲೂ ಯಾವುದೇ ಕೆಲಸ ಆಗಲಿಲ್ಲ. ನಾಲ್ಕು ಜಿಲ್ಲೆಗಳ ಮುಖಂಡರೊಂದಿಗೆ ಚರ್ಚೆ ಮಾಡಿ ಉಪವಾಸ ಸತ್ಯಾಗ್ರಹ ಮಾಡುವುದಕ್ಕೂ ಸಿದ್ದರಿದ್ದೇವೆ ಎಂದರು.

       1969ರಲ್ಲಿ ಪ್ರಾರಂಭವಾದ ಭದ್ರಾ ಮೇಲ್ದಂಡೆ ಯೋಜನೆಯ ಉದ್ದೇಶ ಹಿಂದುಳಿದ ಪ್ರದೇಶಗಳಾದ ತುಮಕೂರು, ಚಿತ್ರದುರ್ಗ, ದಾವಣೆಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವುದು. ಇದು ಅಂದಿನ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರ ಮಹತ್ವಾಕಾಂಕ್ಷೆ ಯೋಜನೆಯಾಗಿತ್ತು. ಆದರೆ ಈ ಯೋಜನೆಯನ್ನು ಪೂರ್ಣಗೊಳಿಸಲು ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ. ಶಿವಮೊಗ್ಗಾ ಜಿಲ್ಲೆಯ ಲಕ್ಕವಳ್ಳಿ ಡ್ಯಾಂ ನಿಂದ ಶಿರಾದ ಕಳ್ಳಂಬೆಳ್ಳ ಕೆರೆಗೆ ನೀರು ತುಂಬಿಸಲು 159 ಕಿಮೀ ಕ್ರಮಿಸಬೇಕು. ಈ 159 ಕಿಮೀ ಅಳತೆಯ ಕಾಮಗಾರಿ ಮುಗಿಸಲು 49 ವರ್ಷ ತೆಗೆದುಕೊಂಡಿರುವುದು ನೋವಿನ ಸಂಗತಿಯಾಗಿದೆ. ಇಂತಹ ಯೋಜನೆ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಮೀನಾಮೇಷ ಎಣಿಸುತ್ತಿರುವುದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ನಾಲ್ಕು ಜಿಲ್ಲೆಗಳ ಮುಖಂಡರೊಂದಿಗೆ ಉಗ್ರ ಹೋರಾಟ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.

      ಬುಕ್ಕಾಪಟ್ಟಣ ಭಾಗಕ್ಕೆ ಶಾಶ್ವತ ನೀರಾವರಿ ನದಿ ಮೂಲಗಳಿಂದ ನೀರು ಒದಗಿಸಬೇಕು. ಅಂತರ್ಜಲ ಅಭಿವೃದ್ಧಿಗಾಗಿ ಮಳೆ ನೀರು ಕೊಯ್ಲು ಪದ್ಧತಿ ಹಾಗೂ ಚೆಕ್‍ಡ್ಯಾಂಗಳ ನಿರ್ಮಾಣ ಮಾಡಬೇಕು. ಪರಿಸರ ಸಮತೋಲನ ಕಾಪಾಡಲು ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವುದು. ವ್ಯವಸಾಯ ಪೂರಕವಾದ ಉದ್ಯೋಗಗಳನ್ನು ಸೃಷ್ಠಿ ಮಾಡುವುದು ಹಾಗೂ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವಂತೆ ಒತ್ತಾಯಿಸುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಾಂತರಾಜು, ವೈ.ಸಿ.ಲಿಂಗಪ್ಪ, ಲಕ್ಷ್ಮಣಸಾಗರ್, ವೈ.ಜೆ.ಕಾಂತರಾಜು, ರಂಗನಾಥ್ ಎಂ.ಆರ್. ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link