ಹಾವೇರಿ

ನಿಮಗೆ ವೋಟ್ ಇದೆಯಾ? ವೋಟ್ ಹಾಕುವ ದಿನಾಂಕ ಗೊತ್ತಾ? ವೋಟ್ ಮಾಡಿ! ತಪ್ಪಿಸಬೇಡಿ!! ನಿಮ್ಮದು ಯಾವೂರು…? ಹೀಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರನ್ನು ಆತ್ಮೀಯವಾಗಿ ಮಾತನಾಡಿಸುತ್ತಾ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ಮತದಾನ ಜಾಗೃತಿ ಮೂಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಲಾದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಿವಿಧ ಊರುಗಳಿಗೆ ತೆರಳಲು ನೆರೆದಿದ್ದ ಯುವಕರು, ವೃದ್ಧರು ಹಾಗೂ ಮಹಿಳಾ ಪ್ರಯಾಣಿಕರಿಗೆ ಕರಪತ್ರ ನೀಡಿ ಮತದಾನ ಜಾಗೃತಿ ಮೂಡಿಸಿದರು.
ಸಾರಿಗೆ ಬಸ್ ಏರಿದ ಅವರು ಯಾವ ಊರಿಗೆ ಹೊರಟಿದ್ದೀರಿ, ನಿಮ್ಮ ವೋಟ್ ಯಾವ ಊರಲ್ಲಿದೆ, ಯಾವ ದಿನಾಂಕದಂದು ಮತದಾನವಾಗುತ್ತದೆ ಎಂದು ವಿಚಾರಿಸುತ್ತಾ ಈ ಬಗ್ಗೆ ಉತ್ತರಿಸಲು ತಡವರಿಸಿದ ಪ್ರಯಾಣಿಕರಿಗೆ ಮತದಾನದ ದಿನಾಂಕ, ಸಮಯ ಹಾಗೂ ಮತದಾನದ ಮಹತ್ವ ಕುರಿತಂತೆ ವಿವರಿಸಿದ ಜಿಲ್ಲಾಧಿಕಾರಿಗಳು ತಪ್ಪದೇ ಮತದಾನ ಮಾಡಿ ಎಂದು ಪ್ರಯಾಣಿಕರ ಕೈಗೆ ಕರಪತ್ರ ನೀಡಿ ಮನವಿ ಮಾಡಿಕೊಂಡರು.
ಮತದಾರರ ಜಾಗೃತಿಯಲ್ಲಿ ತೊಡಗಿದ ಜಿಲ್ಲಾಧಿಕಾರಿಗಳ ಕೃಷ್ಣ ಬಾಜಪೇಯಿ ಅವರ ಸುತ್ತುವರಿದ ಯುವಕರ ತಂಡ ಸೆಲ್ಫಿಗಾಗಿ ಮುಗಿಬಿದ್ದಿತು. ಸೆಲ್ಫಿ ತೆಗೆಸಿಕೊಳ್ಳುವ ಮುನ್ನ ನಿಮಗೆ 18 ವರ್ಷ ತುಂಬಿದೆಯಾ, ಮತದಾರರ ಪಟ್ಟಿಯಲ್ಲಿ ಹೆಸರಿದೆಯಾ? ಮತದಾನದ ದಿನಾಂಕ ಗೊತ್ತಾ, ಮತದಾನ ಮಾಡಬೇಕು ಎಂದು ಮೆಲು ಧ್ವನಿಯಲ್ಲಿ ನುಡಿಯುತ್ತಲೇ ಸೆಲ್ಫಿಗಾಗಿ ಫೋಜ್ ನೀಡಿ ಎಲ್ಲರ ಗಮನ ಸೆಳೆದರು.
ಬಸ್ಗಾಗಿ ಕಾಯುತ್ತಿದ್ದ ಕುಳಿತಿದ್ದ ಯುವ ಸಮೂಹದತ್ತ ತೆರಳಿದ ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಳು ಮತದಾನದ ಜಾಗೃತಿಯ ಜೊತೆಗೆ ಸಿವಿಜಲ್ ಆಪ್ ಬಗ್ಗೆ ಮಾಹಿತಿ ನಿಮಗೆ ಇದೆಯಾ ಎಂದು ಪ್ರಶ್ನೆ ಹಾಕಿ ಸಿವಿಜಲ್ ಬಗ್ಗೆ ಮಾಹಿತಿ ನೀಡುತ್ತ ನಿಮ್ಮೂರಲ್ಲಿ ಚುನಾವಣಾ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಈ ಆಪ್ ಮೂಲಕ ಫೋಟೋ ಅಥವಾ ವಿಡಿಯೋ ತುಣುಕು ಕಳುಹಿಸಿ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿಗಳಿಗೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಸಾಥ್ ನೀಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








