ನಾನು ನೀರಿನಲ್ಲಿ ಯಾರಿಗೂ ಮೋಸ ಮಾಡಿಲ್ಲ-ಎಲ್ಲ ಅಪಪ್ರಚಾರ : ಎಚ್.ಡಿ.ದೇವೆಗೌಡ

ತಿಪಟೂರು

      ನೀರು ಪ್ರಕೃತಿ ದತ್ತವಾದುದು, ಅದು ಜೀವ ಜಲ. ನೀರಿನಲ್ಲಿ ಯಾರಿಗೂ ಮೋಸ ಮಾಡಲು ಸಾಧ್ಯವಿಲ್ಲ. ನಾನು ನೀರಿನಲ್ಲಿ ತುಮಕೂರು ಜಿಲ್ಲೆಗೆ ಮೋಸ ಮಾಡಿದ್ದೇನೆಂದು ಅಪಪ್ರಚಾರ ಮಾಡುತ್ತಿದ್ದಾರೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ತಿಳಿಸಿದರು.

       ನಗರದ ವಿನೋದ ಟಾಕೀಸ್ ಪಕ್ಕದ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನೀರಿನಲ್ಲಿ ತುಮಕೂರು ಜಿಲ್ಲೆಗೆ ಮೋಸ ಮಾಡಿದ್ದು, ಸರಿಯಾಗಿ ನೀರು ಬಿಡುತ್ತಿಲ್ಲವೆಂದು ನಮ್ಮ ಮೇಲೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದೇ ನಮಗೆ ವರದಾನವಾಗಿದ್ದು, ನಾನು ಇಲ್ಲಿಂದ ಚುನಾವಣೆಯಲ್ಲಿ ಗೆದ್ದರೆ ನನ್ನ ಮೊದಲ ಕರ್ತವ್ಯವೇ ತಿಪಟೂರು ತಾಲ್ಲೂಕಿನ ಮತ್ತು ತುಮಕೂರು ಜಿಲ್ಲೆಯ ಯಾವುದೇ ಹಳ್ಳಿಗಳಲ್ಲಿ ನೀರಿಗೆ ತತ್ವಾರವಾಗದಂತೆ ಮಾಡುವುದೆ ನನ್ನ ಮೊದಲ ಕರ್ತವ್ಯವೆಂದರು.

      ತುಮಕೂರು ಜಿಲ್ಲೆಯಲ್ಲಿ ಸಮಗ್ರ ನೀರಾವರಿಗಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ, ದೆಹಲಿಯಲ್ಲಿ ನಿಮ್ಮ ಪ್ರತಿನಿಧಿಯಾಗಿ ದೇವೆಗೌಡರನ್ನು ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಪತರು ಮತದಾರರಿಗೆ ಕರೆ ನೀಡಿದರು.

       ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವ ಬಿಜೆಪಿಯ 27 ಅಭ್ಯರ್ಥಿಗಳು ಕೇವಲ ಸುಳ್ಳುಗಾರ ಮೋದಿಯ ಮುಖವನ್ನು ನೋಡಿ ನಮಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಏಕೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿ ಗೆದ್ದಿದ್ದು, ಅವರು ರಾಜ್ಯಕ್ಕೆ ಮಾಡಿದ ಸಾಧನೆ, ಸೇವೆಯಾದರೂ ಏನು ಎಂಬುದು ಅವರಿಗೇ ಗೊತ್ತಿಲ್ಲ.

         ಜೊತೆಗೆ ನಾನು ನಿಮ್ಮ ಸೇವಕ ಎಂದು ಪ್ರಮಾಣ ಸ್ವೀಕರಿಸಿ ದೇಶದ ಜನರಿಗೆ ಮಂಕು ಬೂದಿ ಎರಚುತ್ತಿರುವ ಮಹಾನ್ ಸುಳ್ಳುಗಾರ ಮೋದಿಯನ್ನು ನೋಡಿ ನೀವು ಏಕೆ ಮತ ಹಾಕಬೇಕು? ಅವರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳೇನು ಎಂಬುದನ್ನು ನೀವು ಅರಿತು ಮತ ಹಾಕಬೇಕಾಗಿದೆ.

         ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡುವಂತೆ ಸರ್ವಪಕ್ಷ ನಿಯೋಗವನ್ನು ನಿಮ್ಮ ಪ್ರಧಾನ ಸೇವಕ ಮೋದಿಯವರ ಹತ್ತಿರ ಹೋದಾಗ ಅವರು ಆಗೋದೆ ಇಲ್ಲ ಎಂದು ಹೇಳಿದ ಸಂದರ್ಭದಲ್ಲಿ ಈ 17 ಜನ ಸಂಸದರು ಎಲಿ ್ಲಹೋಗಿದ್ದರು? ನಾನು ಅಲ್ಲಿಂದ ಬಂದ ತಕ್ಷಣ ಸಹಕಾರಿ ಬ್ಯಾಂಕ್‍ಗಳಲ್ಲಿದ್ದ ರೈತರ 8165 ಕೋಟಿ ರೂ.ಸಾಲವನ್ನು ಮನ್ನಾ ಮಾಡಿದೆ. ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲವನ್ನು ಮನ್ನಾ ಮಾಡಿದ್ದಾರೆ. ಅಂದು ನೀರಾವರಿ ಯೋಜನೆಗಾಗಿ ಎಚ್.ಡಿ.ದೇವೆಗೌಡರು, ನಾನು ಸೇರಿದಂತೆ ಮುನಿಯಪ್ಪ ಮುಂತಾದವರು ರಾಜೀನಾಮೆ ನೀಡಿದ್ದೇವೆ.

       ನಂತರ ಮುಖ್ಯಮಂತ್ರಿಯಾದ ದೇವೆಗೌಡರ ಕಾಲದಲ್ಲಿ 1000 ಕೋಟಿ ರೂ.ಗಳನ್ನು ನೀಡಿ ಆಲಮಟ್ಟಿ ಡ್ಯಾಂ ಅನ್ನು ಎತ್ತರಿಸಿ ರಾಯಚೂರು ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟೆವು. ನಿಮ್ಮ ತಾಲ್ಲೂಕಿಗೆ ಮತ್ತು ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಾಗಿ ನೀರಾವರಿ ಮತ್ತು ಅಭಿವೃದ್ಧಿಯ ಹರಿಕಾರ ಮತ್ತು ರಾಜಕೀಯ ತಜ್ಞ ದೇವೆಗೌಡರಿಗೆ ಮತ ನೀಡಿ ಮತ್ತು ರಾಷ್ಟ್ರದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಯಬೇಕಾದರೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಲು ರಾಷ್ಟ್ರದ ಕಾಂಗ್ರೆಸ್ ಮತ್ತು 21 ಪ್ರಾದೇಶಿಕ ಪಕ್ಷಗಳ ಮಹಾಘಟ ಬಂಧನ್‍ನ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡುವ ಕರ್ತವ್ಯ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಮತದಾರರಿಗೆ ಕರೆ ನೀಡಿದರು.

       ಮತದಾರರನ್ನು ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ, ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ನಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರೂ ಕೂಡ ನಾವು ಅವರನ್ನು ರಾಷ್ಟ್ರೀಯ ನಾಯಕರು ಮತ್ತು ರಾಜ್ಯನಾಯಕರು ಒಪ್ಪಿಸಿ ಜಿಲ್ಲೆಗೆ ಕರೆತಂದಿದ್ದು ಅಂತಹ ಹಿರಿಯ ರಾಜಕಾರಣಿಯಾದ ದೇವೆಗೌಡರನ್ನು ಕಲ್ಪತರು ನಾಡಿಗೆ ಕರೆತಂದಿದ್ದು ಇವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೈತ್ರಿಧರ್ಮಕ್ಕಿದೆ.

         ಆದ್ದರಿಂದ ನಾವೆಲ್ಲರೂ ಭಾರತೀಯರು ನಮಗೆ ಯಾವುದೆ ಭೇದಭಾವವಿಲ್ಲ. ನಾವೆಲ್ಲರೂ ಭಾರತೀಯರು ನಾವು ಸ್ವಾತಂತ್ರಕ್ಕಾಗಿ ಹೋರಾಡಿದ ಪಕ್ಷದವರು ಬಿ.ಜೆ.ಪಿ ಯಿಂದ ಯಾರು ರಾಷ್ಟ್ರಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ ಎಂಬುದನ್ನು ನೀವೆ ಯೋಚಿಸಿ ಇವರಿಂದ ನಾವು ರಾಷ್ಟ್ರಪ್ರೇಮವನ್ನು ಕಲಿಯಬೇಕಾಗಿಲ್ಲ.

         ಯು.ಪಿ.ಎ ಸರ್ಕಾರದ 125 ರಫೆಲ್ ಯುದ್ಧವಿಮಾನವನ್ನು ಖರೀದಿಸಲು 550 ಕೋಟಿಗೆ ಇದ್ದ ಒಂದು ವಿಮಾನದ ವೆಚ್ಚವನ್ನು ಇವರು ಬಂದ ಮೇಲೆ ಫ್ರಾನ್ಸ್‍ಗೆ ಹೋಗಿ ಅದೇ ಯುದ್ದವಿಮಾನಕ್ಕೆ 1660 ಕೋಟಿಗೆ ಒಂದು ಯುದ್ದವಿಮಾನದಂತೆ ಖರೀದಿಸಿದ ಇದರ ಹೆಚ್ಚುವರಿ ಮೊತ್ತ 30000 ಕೋಟಿ ಎಲ್ಲಿಹೋಯಿತು. ಇದರ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ತನಿಖೆಗೆ ಆದೇಶ ಹೊರಡಿಸಿದೆ. ಆದ್ದರಿಂದ ದೇಶದಲ್ಲಿ ದೀನದಲಿತರು, ಅಲ್ಪಸಂಖ್ಯಾತರು ಬದುಕಬೇಕೆಂದರೆ ನಮ್ಮ ಸರ್ಕಾರದಿಂದ ಮಾತ್ರ ಸಾಧ್ಯ. ಆದ್ದರಿಂದ ದೇವೇಗೌಡರನು ಗೆಲ್ಲಿಸುವ ಹೊಣೆ ನಮ್ಮ ಮೇಲಿದ್ದು ಅದನ್ನು ನೀವು ಈಡೇರಿಸುತ್ತೀರ ಎಂಬ ಭರವಸೆಯಿದೆ ಎಂದರು.

         ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಬಸವಣ್ಣನವರ ವಚನಗಳ ಮೂಲಕವೇ ಎನ್.ಡಿ.ಎ. ಸರ್ಕಾರವನ್ನು ತೆಗಳಿ ಕೇಂದ್ರದ ಯು.ಪಿ. ಸರ್ಕಾರದ ಸಾಧನೆ ಮತ್ತು ಮಾಜಿ ಪ್ರದಾನಿ ದೇವೇಗೌಡರು ನೀರಾವರಿಗಾಗಿ ಶ್ರಮಿಸಿದ್ದನ್ನು ಜನರಿಗೆ ತಿಳಿಸಿದ ಅವರು, ಮೋದಿಗೆ ಹಿಂದೆ ಇಲ್ಲ ಮುಂದೆ ಇಲ್ಲ ಅವರೇನು ಕುಟುಂಬ ರಾಜಕಾರಣ ಮಾಡುತ್ತಾರೆ. ಆದರೆ ಇಲ್ಲಿನ ಯಡಿಯೂರಪ್ಪ ಮಾಡುತ್ತಿರುವುದು ಕುಟುಂಬ ರಾಜಕಾರಣವಲ್ಲವೆ ? ಇವರಿಗೆ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವುದು ಏನಿದೆ? ಅಲ್ಲದೆ ಬಿ.ಜೆ.ಪಿಯಲ್ಲಿರುವ ಕೆ.ಎಸ್.ಈಶ್ವರಪ್ಪ ತಮ್ಮ ಹಿಂದುಳಿದವರಿಗೆ ಒಂದು ಸಂಸದರ ಸ್ಥಾನವನ್ನು ಪಡೆದುಕೊಳ್ಳಲು ಆಗಲಿಲ್ಲ. ಇನ್ನು ಆ ಪಕ್ಷದಲ್ಲಿ ಏನು ಪ್ರಯೋಜನ ಎಂದು ಬಿ.ಜೆ.ಪಿ ನಾಯಕರುಗಳನ್ನು ಜರಿದರು.

       ಕಾರ್ಯಕ್ರಮದಲ್ಲಿ ಬಸವರಾಜ್‍ಹೊರಟ್ಟಿ, ಸಚಿವ ಶ್ರೀನಿವಾಸ್, ಎಂ.ಎಲ್.ಸಿ ಚೌಡಾರೆಡ್ಡಿ, ಬೆಮೆಲ್ ಕಾಂತರಾಜು, ಶಾಸಕಿ ವಿದಿಷಾ, ಜಿ.ಪಂ, ತಾ.ಪಂ. ಅಧ್ಯಕ್ಷರುಗಳು, ಸದಸ್ಯರುಗಳು, ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap