ದಾವಣಗೆರೆ:
ಯುವ ಮತದಾರರನ್ನು ಸೆಳೆಯಲು ಸೇನಾ ಸಾಧನೆಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗವು ಸೇನೆಯ ವಿಚಾರವನ್ನು ಯಾವುದೇ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಬಳಸಬಾರದು ಎಂಬುದಾಗಿ ಸೂಚನೆ ನೀಡಿದ್ದರೂ ಸಹ, ನೆನ್ನೆ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿರುವ ಪ್ರಧಾನಿ ಮೋದಿಯವರು ಯುವ ಮತದಾರರು ಈ ಬಾರಿಯ ಮತದಾನವನ್ನು ಸೇನೆಗೆ ಅರ್ಪಿಸಬೇಕೆಂಬುದಾಗಿ ಹೇಳುವ ಮೂಲಕ ಚುನಾವಣಾ ಆಯೋಗದ ಸೂಚನೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.
ಚುನಾವಣಾ ಆಯೋಗದ ಮೇಲೂ ಮೋದಿ ಸರ್ಕಾರ ಹತೋಟಿಯನ್ನು ಸಾಧಿಸಿದ್ದು, ಅದು ಸಹ ಬಿಜೆಪಿಯ ಅಂಗ ಸಂಸ್ಥೆಯಾಗಿ ಕೆಲಸ ಮಾಡುತ್ತಿರುವುದರಿಂದ ನಮಗೆ ನ್ಯಾಯ ಸಿಗುತ್ತದೆ ಎಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
ಬಿಜೆಪಿ ಭ್ರಮೆ ಸೃಷ್ಟಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಮತ ಸೆಳೆಯಲು ಪ್ರಯತ್ನಿಸುತ್ತಿದೆ. ಆದರೆ, ಹಿಂದೆ ಉದ್ಯೋಗ ಕೋಡ್ತಿವಿ, ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ಜಮೆ ಮಾಡ್ತಿವಿ ಅಂದಿದ್ದರು. ಅದರ ಬಗ್ಗೆ ಯಾವ ಪ್ರಚಾರ ಸಭೆಯಲ್ಲೂ ಮಾತನಾಡುತ್ತಿಲ್ಲ. ಮೋದಿಯವರ ಪ್ರತಿ ಭಾಷಣದಲ್ಲೂ 10 ಬಾರಿ ಪಾಕಿಸ್ತಾನದ ಹೆಸರು ಪ್ರಸ್ತಾಪವಾಗುತ್ತಿದೆ. ಹೀಗಾಗಿ ಚುನಾವಣೆ ನಡೆಯುತ್ತಿರುವುದು ಹಿಂದೂಸ್ತಾನದಲ್ಲೋ, ಪಾಕಿಸ್ತಾನದಲ್ಲೋ ಎಂಬುದನ್ನು ಅವರು ಸಾಬೀತು ಪಡೆಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಮತ ಸೆಳೆಯಲು ಸಕಾರಾತ್ಮಕ ಪ್ರಯತ್ನ ಮಾಡುತ್ತಿಲ್ಲ. ಬದಲಿಗೆ ಭಾವನಾತ್ಮಕ ವಿಷಯದ ಮೇಲೆ ಮತ ಪಡೆಯಲು ಹವಣಿಸುತ್ತಿದ್ದು, ಈಗಾಗಲೇ ಬಿಜೆಪಿಗೆ ಕೆಟ್ಟ ಕಾಲ ಆರಂಭವಾಗಿದ್ದು, ದೇಶದಲ್ಲಿ ಈ ಬಾರಿ ಬಿಜೆಪಿಗೆ ಬದಲಾಗಿ ಪರ್ಯಾಯ ಸರ್ಕಾರ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಯಾವ ಸಂಸದರೂ ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಬರೀ ಪ್ರಚೋದನಕಾರಿ ಭಾಷಣದ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರನ್ನು ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಧಾರ್ಮಿಕ ಭಾವನೆ ಕೆರಳಿಸಿ ಮತ ಪಡೆಯುವುದು ಇನ್ನೂ ಮುಂದೆ ನಡೆಯುವುದಿಲ್ಲ ಎಂದು ಹೇಳಿದರು.
ಈಗಾಗಲೇ ಸುಪ್ರೀಂ ಕೋರ್ಟ್ ರಫೇಲ್ ಡೀಲ್ ಬಗ್ಗೆ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಈ ರಫೇಲ್ ಹಗರಣದಲ್ಲಿ ಮೋದಿಯೇ ರಿಲಾಯನ್ಸ್ ಕಂಪೆನಿಯ ಪರವಾಗಿ ಮಧ್ಯವರ್ತಿಯಾಗಿ ಕೆಲಸ ಮಾಡಿ, ಏರ್ಕ್ರಾಫ್ಟ್ನ ಒಂದು ಬೋಲ್ಟು-ನಟ್ಟು ತಯಾರಿಸಿಯೂ ಅನುಭವವಿಲ್ಲದ ರಿಲಾಯನ್ಸ್ಗೆ ರಫೇಲ್ ಯುದ್ಧ ವಿಮಾನ ತಯಾರಿಕೆಗೆ ಗುತ್ತಿಗೆ ಕೊಡಿಸಿದ್ದು, ಈ ಹಗರಣದಲ್ಲಿ ಮೋದಿ ಜೈಲುಪಾಲು ಆಗುವ ಕಾಲ ಇನ್ನೂ ದೂರವಿಲ್ಲ ಎಂದರು.
10ರಿಂದ 30 ಕೋಟಿಯ ರೂಪಾಯಿಗಳ ವರೆಗೆ ಹಣ ನೀಡಿ, ಶಾಸಕರನ್ನು ಖರೀದಿಸಿ, ಆಪರೇಷನ್ ಕಮಲ ನಡೆಸಲು ಪ್ರಯತ್ನಿಸಿದ ಬಿ.ಎಸ್.ಯಡಿಯೂರಪ್ಪನವರನ್ನು ಪಕ್ಕದಲ್ಲಿ ಇಟ್ಟುಕೊಂಡು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಮಾತನಾಡುವ ಮೋದಿಯ ನಡೆ ಅತ್ಯಂತ ಹಾಸ್ಯಸ್ಪದದಿಂದ ಕೂಡಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಲವು ಹಗರಣಗಳು ನಡೆದಿವೆ. ಬಿರ್ಲಾ ಸಹರ ಡೈರಿಯಲ್ಲಿ ನರೇಂದ್ರ ಮೋದಿ ಅವರಿಗೇ ಹಣ ನೀಡಿರುವ ಬಗ್ಗೆ ದಾಖಲೆಗಳಿದ್ದವು, ಆದರೆ, ಪ್ರಧಾನಿ ಮೋದಿ ತಮ್ಮ ಪ್ರಭಾವವನ್ನು ಬಳಿಸಿ ಆ ಪ್ರಕರಣವನ್ನೇ ಮುಚ್ಚಿ ಹಾಕಿದರು. ಒಟ್ಟಿನಲ್ಲಿ ಮೋದಿ ತನ್ನ ಪ್ರಭಾವ ಬಳಸಿ ತನಿಖಾ ಸಂಸ್ಥೆಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ ಟಿ. ದಾಸಕರಿಯಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ವೀಕ್ಷಕಿ ಬಲ್ಕಿಶ್ ಭಾನು, ಮುಖಂಡರಾದ ಸೈಯದ್ ಸೈಫುಲ್ಲಾ, ದಿನೇಶ್ ಕೆ. ಶೆಟ್ಟಿ, ಎ.ನಾಗರಾಜ್, ಪಿ.ರಾಜಕುಮಾರ್, ಅಯೂಬ್ ಪೈಲ್ವಾನ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
