ದಾವಣಗೆರೆ:
ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಜೊತೆಯಲ್ಲೇ ಇದ್ದು, ಅವರ ರಕ್ತದಲ್ಲೇ ಕಾಂಗ್ರೆಸ್ ಇದೆ. ಅವರ ಬೇಸರವನ್ನು ಕಾಂಗ್ರೆಸ್ ಕುಟುಂಬ ಒಂದೆಡೆ ಕುಳಿತು ಶಮನ ಮಾಡಲಿದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದ ಬೂದಾಳ್ ರಸ್ತೆಯ ತಾಜ್ ಪ್ಯಾಲೇಸ್‍ನಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಸ್ಥಾನದಿಂದ ನನ್ನನ್ನು ಕೈಬಿಟ್ಟರೂ ಹೇಗೆ ಬೇಜಾರಾಗುತ್ತೇನೆಯೋ, ಅದೇರೀತಿ ರಮೇಶ್ ಜಾರಕಿಹೊಳಿ ಸಹ ಸಚಿವ ಸ್ಥಾನ ವಾಪಾಸ್ಸು ಪಡೆದ ಕಾರಣಕ್ಕೆ ಬೇಜಾರಾಗಿದ್ದಾರಷ್ಟೇ. ಕುಟುಂಬವೆಂದ ಮೇಲೆ ಜಗಳ ಸಾಮಾನ್ಯ. ಜಾರಕಿಹೊಳಿ ಸಹೋದರರದ್ದು ಬಹಿರಂಗ ಕಿತ್ತಾಟವಲ್ಲ. ಅದು ಅಣ್ಣ-ತಮ್ಮನ ಪ್ರೀತಿಯಿಂದ ಜಗಳವಷ್ಟೇ ಎಂದರು.
ದೇಶ ಸುರಕ್ಷಿತವಾಗಿರಬೇಕೆಂದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ದೇಶದ ಜನತೆಯೂ ಅದನ್ನೇ ಬಯಸುತ್ತಿದ್ದಾರೆ. ಮೇ.23ರ ನಂತರ ಸ್ಪಷ್ಟ ಚಿತ್ರಣವೂ ಗೊತ್ತಾಗಲಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ದೇಶದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ತಪಾಸಣೆ ಮಾಡಿದರೆಂಬ ಕಾರಣಕ್ಕೆ ಕರ್ನಾಟಕ ಮೂಲದ ಒರಿಸ್ಸಾದ ಐಎಎಸ್ ಅಧಿಕಾರಿ ಮಹಮ್ಮದ್ ಮೊಹ್ಸಿನ್ ಅವರನ್ನು ಅಮಾನತು ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ನರೇಂದ್ರ ಮೋದಿ ಏನು ಮೇಲಿನಿಂದ ಇಳಿದು ಬಂದಿದ್ದಾರಾ? ಜನರೇ ಆಯ್ಕೆ ಮಾಡಿ ಪ್ರಧಾನಿ ಹುದ್ದೆಗೆ ಕೂಡಿಸಿದ್ದಾರರಷ್ಟೇ. ಹೀಗಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
