ಚಳ್ಳಕೆರೆ
ಏಪ್ರಿಲ್-18ರಂದು ನಡೆಯುವ ಲೋಕಸಭಾ ಚುನಾವಣೆಗೆ ನಗರದ ಪ್ರತಿಯೊಬ್ಬ ಮತದಾರರನ್ನು ತಪ್ಪದೆ ತನ್ನ ಮತವನ್ನು ಚಲಾಯಿಸುವಂತೆ ಪೌರಕಾರ್ಮಿಕರು ಹಾಗೂ ವಿಕಲಾಂಗಚೇತನರು ಜಾಗೃತಿ ಜಾಥ ನಡೆಸಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಾಲ್ಲೂಕು ಸ್ಪೀಫ್ ಸಮಿತಿ ನಿರ್ದೇಶಕರು, ಪೌರಾಯುಕ್ತರಾದ ಪರಮೇಶ್ವರಪ್ಪ ನೇತೃತ್ವದಲ್ಲಿ ಇಲ್ಲಿನ ನಗರಸಭೆ ಆವರಣದಿಂದ ಜಾಗೃತಿ ಜಾಥ ಹೊರಟು ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಜಾಗೃತಿ ಜಾಥವನ್ನು ಅಂತಿಮಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತರ ಪರಮೇಶ್ವರಪ್ಪ, ಏ.18ರ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರದಿಂದ ಶೇ.100ರ ಮತದಾನ ಮಾಡುವ ನಿಟ್ಟಿನಲ್ಲಿ ಈಗಾಗಲೇ ತಾಲ್ಲೂಕು ಸ್ಪೀಫ್ ಸಮಿತಿ ಹಂತ ಹಂತವಾಗಿ ಮತದಾರರನ್ನು ಜಾಗೃತಿಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪೌರಕಾರ್ಮಿಕರು, ಇಲಾಖೆ ಸಿಬ್ಬಂದಿ, ಇಲಾಖೆ ಅಧಿಕಾರಿ ವರ್ಗ ಹಾಗೂ ತಾಲ್ಲೂಕು ಅಂಗವಿಕಲರ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಏ.18ರಂದು ತಪ್ಪದೆ ಮತದಾನ ಮಾಡುವ ಮೂಲಕ ಪ್ರತಿಯೊಬ್ಬ ಮತದಾರ ತಮ್ಮ ಹಕ್ಕು ಚಲಾಯಿಸಬೇಕು. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಮಾತ್ರ ಸುಭದ್ರ ಸರ್ಕಾರ ಆಡಳಿತಕ್ಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಏ.18ರಂದು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ತಪ್ಪದೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ಯಾಮಲ, ವಿನಯ್, ಲೋಕೇಶ್, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಕಂದಾಯಾಧಿಕಾರಿ ವಿ.ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಗಣೇಶ್, ನಿರ್ಮಲ, ಹರೀಶ್, ಮಂಜುನಾಥ, ಓಬಣ್ಣ, ತಿಪ್ಪೇಸ್ವಾಮಿ, ಪಾಲಯ್ಯ, ವಿಶ್ವನಾಥ ಮುಂತಾದವರು ಜಾಗೃತಿ ಜಾಥದಲ್ಲಿ ಭಾಗವಹಿಸಿದ್ದರು.
ತಾಲ್ಲೂಕು ಅಂಗವಿಕಲ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ವಿಕಲಚೇತನರು ಭಾಗವಹಿಸಿದ್ದಾರೆ. ಮತದಾನದಲ್ಲಿ ತಪ್ಪದೆ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ದ್ವಿಚಕ್ರ ಬೈಕ್ಗಳಲ್ಲಿ ಚಲಿಸಿ ಜನಸಾಮಾನ್ಯರ ಗಮನವನ್ನು ಸೆಳೆಯಲಾಗಿದೆ.
ಪ್ರತಿಯೊಬ್ಬ ಮತದಾರರನ್ನು ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿರ್ಭಿತಿ, ಪ್ರಾಮಾಣಿಕತೆಯಿಂದ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಂತೆ ವಿನಂತಿಸಲಾಗಿದೆ. ತಾಲ್ಲೂಕಿನ ಎಲ್ಲಾ ವಿಕಲಚೇತರು ಈ ಜಾಗೃತಿ ಜಾಥದಲ್ಲಿ ಭಾಗವಹಿಸಿದ್ದರು. ನಮಗೆ ಜಾಥದಲ್ಲಿ ಭಾಗವಹಿಸಲು ಅವಕಾಶ ನೀಡಿದ ತಾಲ್ಲೂಕು ಸ್ಪೀಫ್ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಸೇರಿದಂತೆ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.