ತಾಲ್ಲೂಕಿನಾದ್ಯಂತ ಅಕ್ರಮ ಮರಳು ದಂಧೆಗೆ ಸಂಪೂರ್ಣ ಮಂಗಳ ಹಾಡಿದ ಪೊಲೀಸ್ ಇಲಾಖೆ

0
16

 ಚಳ್ಳಕೆರೆ

      ತಾಲ್ಲೂಕಿನ ವಿವಿಧೆಡೆ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಪೊಲೀಸ್ ಇಲಾಖೆಯ ದಿಟ್ಟ ಕ್ರಮ ಫಲನೀಡಿದ್ದು, ತಾಲ್ಲೂಕಿನ ಬಹುತೇಕ ಕಡೆ ಅಕ್ರಮ ಮರಳು ದಂಧೆಕೋರರು ಭಯಭೀತರಾಗಿದ್ದು, ಇದರಿಂದ ಆಗುವ ಕಾನೂನು ಕ್ರಮಗಳಿಗೆ ಹೆದರಿ ಮರಳು ದಂಧೆಯನ್ನು ತಟಸ್ಥಗೊಳಿಸಿದ್ದಾರೆ.

       ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್, ಹೆಚ್ಚುವರಿ ರಕ್ಷಣಾಧಿಕಾರಿ ರಾಮಲಕ್ಷ್ಮಣ್ ವರಸಿದ್ದಿ, ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮತ್ತು ಸಿಬ್ಬಂದಿ ವರ್ಗ ಪಿಎಸ್‍ಐ ಸತೀಶ್‍ನಾಯ್ಕ ದೊಡ್ಡೇರಿ ಗ್ರಾಮದ ಹೊರವಲಯದಲ್ಲಿ ದಾಸ್ತಾನು ಮಾಡಿದ್ದ ಸುಮಾರು 40ಕ್ಕೂ ಹೆಚ್ಚು ಟ್ರ್ಯಾಕ್ಟರ್ ಲೋಡ್ ಮರಳನ್ನು ಗುರುವಾರ ನಡುರಾತ್ರಿ ಪತ್ತೆ ಹಚ್ಚಿ ವಶಪಡಿಸಿಕೊಂಡಿರುತ್ತಾರೆ.

        ರಾತ್ರಿ ವೇಳೆ ದಾಳಿ ನಡೆಸಿದ ಸಂದರ್ಭದಲ್ಲಿ ದಾಸ್ತಾನು ಮಾಡಿದ್ದ ಜಾಗದಲ್ಲಿ ಯಾರೂ ಇಲ್ಲದೇ ಇರುವುದು ಕಂಡು ಬಂದಿದೆ. ಆದರೂ ಸಹ ಅಕ್ರಮ ಮರಳನ್ನು ವಶಪಡಿಸಿಕೊಂಡಿರುವ ವೃತ್ತ ನಿರೀಕ್ಷಕರು ಮರಳು ದಾಸ್ತಾನುದಾರರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಶೀಘ್ರದಲ್ಲೇ ಮರಳು ದಂಧೆಕೋರರನ್ನು ಪತ್ತೆ ಹಚ್ಚಲಾಗುವುದು ಎಂದಿದ್ಧಾರೆ.

        ಕಳೆದವಾರಷ್ಟೇ ಜಿಲ್ಲಾ ರಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಡಾ.ಕೆ.ಅರುಣ್ ಹಿರಿಯೂರು ಬಳಿಯ ಅಕ್ರಮಮರಳು ದಂಧೆ ನಿಯಂತ್ರಣ ಹಿನ್ನೆಲೆಯಲ್ಲಿ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ಬೆನ್ನಹಿಂದೆಯೇ ಚಳ್ಳಕೆರೆ ಪೊಲೀಸರೂ ಸಹ ಅಕ್ರಮ ಮರಳು ದಂಧೆ ನಿಯಂತ್ರಿಸುವಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ವೇದಾವತಿ ನದಿ ದಡದಲ್ಲಿ ಬರುವ ಗ್ರಾಮಗಳಿಗೆ ನಿರಂತರ ಭೇಟಿ ನೀಡುತ್ತಿರುವ ಪೊಲೀಸ್ ಅಧಿಕಾರಿಗಳು ಯಾವುದಾದರೂ ಅಪರಿಚಿತ ವಾಹನ ಓಡಾಟ ನಡೆಸಿದಲ್ಲಿ ಅವುಗಳನ್ನು ವಶಕ್ಕೆ ಪಡೆದುಕೊಂಡು ಮಾಹಿತಿಯನ್ನು ಪಡೆದು ಸೂಕ್ತವೆನ್ನಿಸಿದಲ್ಲಿ ಮಾತ್ರ ಬಿಡುಗಡೆಗೊಳಿಸುತ್ತಿದ್ದಾರೆ.

         ಇತ್ತೀಚೆಗೆ ತಾನೇ ಸಾಣಿಕೆರೆ ಬಳಿ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಒಂದು ಮರಳಿನ ಲಾರಿ, ಜೆಸಿಬಿಯನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಅಕ್ರಮ ಮರಳು ಸಾಗಾಣಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎನ್ನಲಾಗಿದೆ.

         ಒಟ್ಟಿನಲ್ಲಿ ಕಳೆದ ಸುಮಾರು ಎರಡು ವರ್ಷಗಳಿಂದ ತಾಲ್ಲೂಕಿನ ರೈತ ಸಮುದಾಯ ಹಾಗೂ ಸಾರ್ವಜನಿಕರಿಗೆ ಕಂಟಕ ಪ್ರಾಯವಾಗಿದ್ದ ಅಕ್ರಮ ಮರಳು ದಂಧೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಪೊಲೀಸ್ ಇಲಾಖೆಯನ್ನು ಜಾಗ್ರತೆಗೊಳಿಸಿದ ಜಿಲ್ಲಾ ರಕ್ಷಣಾಧಿಕಾರಿಗಳ ಕ್ರಮವನ್ನು ರೈತರು ಮತ್ತು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಜಿಲ್ಲೆಯಲ್ಲಿ ಯಾವ ಭಾಗದಲ್ಲಾಗಲಿ ಅಕ್ರಮ ಮರಳು ದಂಧೆ ನಡೆದಲ್ಲಿ ನೇರವಾಗಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here