ಅವಳಿ ಜಿಲ್ಲೆಯ 207 ಖಾತೆಗಳ ಬ್ಯಾಂಕ್ ವಹಿವಾಟಿನ ತನಿಖೆ ಪ್ರಗತಿಯಲ್ಲಿ : ಹಸನ್ ಅಹ್ಮದ್

ಹಾವೇರಿ

       ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಂಟಿನ ವ್ಯವಹಾರಗಳು, ವಹಿವಾಟಿನ ಮೇಲೆ ಬ್ಯಾಂಕ್ ಅಧಿಕಾರಿಗಳು, ವಾಣಿಜ್ಯ ತೆರಿಗೆ ಅಧಿಕಾರಿಗಳು, ಆದಾಯ ತೆರಿಗೆ ಅಧಿಕಾರಿಗಳು ನಿಗಾವಹಿಸಲು ಹಾವೇರಿ ಲೋಕಸಭಾ ಕ್ಷೇತ್ರದ ಕೇಂದ್ರ ಚುನಾವಣಾ ವೆಚ್ಚ ವೀಕ್ಷಕರಾದ ಹಸನ್ ಅಹ್ಮದ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

        ಗುರುವಾರ ಸಂಜೆ ಚುನಾವಣಾ ವೆಚ್ಚ ನಿರ್ವಹಣೆ ಮತ್ತು ಸಂಶಯಾಸ್ಪದ ಹಣಕಾಸಿನ ವಹಿವಾಟುಗಳ ಕುರಿತಂತೆ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು ನಿರಂತರವಾಗಿ ಒಂದೇ ಖಾತೆಯಿಂದ ಹಣ ಸೆಳೆದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ರಾಜಕೀಯ ನಂಟಿನ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಬ್ಯಾಂಕ್ ಖಾತೆಗಳ ಹಣ ಸೆಳೆಯುವ ಮತ್ತು ಜಮಾ ಕುರಿತ ವಿವರಗಳನ್ನು ಕೂಲಕುಂಷವಾಗಿ ಪರಿಶೀಲಿಸುವಂತೆ ಸಲಹೆ ನೀಡಿದರು.

        ಸೀರೆ, ಬಟ್ಟೆ ಅಂಗಡಿ, ನಿತ್ಯ ಗೃಹಬಳಕೆಯ ವಸ್ತುಗಳ ಖರೀದಿ ಮತ್ತು ಮಾರಾಟದ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ವಹಿವಾಟುಗಳನ್ನು ಗಮನಿಸಿ ತೆರಿಗೆ ರಹಿತ ವಹಿವಾಟುಗಳ ಕುರಿತಂತೆ ಗಮನ ಹರಿಸಿ ಎಂದು ತಿಳಿಸಿದರು.

        ಮತದಾರರಿಗೆ ಆಮಿಷ ಒಡ್ಡಲು ಹಣ, ಮದ್ಯ, ವಸ್ತುಗಳು, ಸೀರೆ, ಬೆಳ್ಳಿಯ ಗೃಹ ಬಳಕೆಯ ಸಾಮಗ್ರಿಗಳು ಒಳಗೊಂಡಂತೆ ಮತದಾರರಿಗೆ ಹಂಚಿಕೆ ಮಾಡುವ ಕುರಿತಂತೆ ಪೂರ್ವಭಾವಿಯಾಗಿ ಮಾಹಿತಿ ಸಂಗ್ರಹಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಖರ ಮಾಹಿತಿಯೊಂದಿಗೆ ಇಂತಹ ಚಟುವಟಿಕೆಗಳ ಪ್ರತಿಬಂಧಿಸಲು ಕ್ರಮವಹಿಸಿ ಎಂದು ಹೇಳಿದರು.

         ಅಭ್ಯರ್ಥಿಗಳ ಚುನವಣಾ ವೆಚ್ಚಗಳ ಕುರಿತಂತೆ ಆಯೋಗದ ಮಾರ್ಗ ಸೂಚಿಯಂತೆ ದಾಖಲಿಸಿ ಕಾಲಕಾಲಕ್ಕೆ ವರದಿ ನೀಡಿ. ಜಿಲ್ಲಾ ಚುನಾವಣಾಧಿಕಾರಿಗಳು ನಿಗಧಿಪಡಿಸಿದ ದರಪಟ್ಟಿಯಂತೆ ಪ್ರಚಾರ ಸಾಮಗ್ರಿಗಳು, ಕಾರ್ಯಕ್ರಮಗಳಲ್ಲಿ ಬಳಕೆಮಾಡಿರುವ ಎಲ್ಲ ತರದ ಪರಿಕರಗಳು, ಬಳಕೆಮಾಡಿದ ವಾಹನ, ಪತ್ರಿಕಾ ಹಾಗೂ ವಿದ್ಯುನ್ಮಾನ ಜಾಹೀರಾತುಗಳ ವಿವರವನ್ನು ಆಯಾ ತಂಡ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ ವೆಚ್ಚವನ್ನು ದಾಖಲಿಸಬೇಕು. ಅಭ್ಯರ್ಥಿಗಳು ಶ್ಯಾಡೋ ರಿಜಿಸ್ಟರ್‍ನಲ್ಲಿ ಚುನಾವಣಾ ವೆಚ್ಚಗಳನ್ನು ದಾಖಲಿಸಿರುವ ಕುರಿತಂತೆ ಪರಿಶೀಲಿಸಬೇಕು ಎಂದು ತಿಳಿಸಿದರು.

        ಚುನಾವಣೆ ಕರ್ತವ್ಯವೆಂದರೆ ಪವಿತ್ರವಾದ ಕಾರ್ಯ. ದೇಶ ಸೇವೆಗೆ ದೊರೆತಿರುವ ಅವಕಾಶವಿದು ಎಂದು ಭಾವಿಸಿ. ಆಯೋಗದ ಮಾರ್ಗಸೂಚಿಯಂತೆ ತಮ್ಮ ಅಧಿಕಾರವನ್ನು ಧೈರ್ಯವಾಗಿ ಚಲಾಯಿಸಿ ನ್ಯಾಯ ಸಮ್ಮತ ಚುನಾವಣೆ ನಡೆಸೋಣ ಎಂದು ಉತ್ತೇಜಕ ಮಾತುಗಳನ್ನು ಕೇಂದ್ರ ಚುನಾವಣಾ ವೆಚ್ಚ ವೀಕ್ಷಕರಾದ ಹಸನ್ ಅಹ್ಮದ್ ಅವರು ನುಡಿದರು.

         ಇದೇ ಸಂದರ್ಭದಲ್ಲಿ ವಿವಿಧ ತಂಡಗಳ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ಪಡೆದರು. ಚುನಾವಣಾ ಅಕ್ರಮ ವೆಚ್ಚಗಳ ಬಗ್ಗೆ ಕಾರ್ಯ ಯೋಜನೆ ಕುರಿತಂತೆ ವಿವಿಧ ತಂಡಗಳ ಮುಖ್ಯಸ್ಥರಿಂದ ಅಭಿಪ್ರಾಯ ಸಂಗ್ರಹಿಸಿದರು. ತಂಡದ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿದರು.

         ಹೆಚ್ಚಿನ ಸಿಬ್ಬಂದಿ ಅಥವಾ ಪೊಲೀಸ್ ರಕ್ಷಣೆ ಮೂಲಭೂತ ಸೌಕರ್ಯಗಳ ಅಗತ್ಯ ಕುರಿತಂತೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ವೆಚ್ಚ ನಿರ್ವಹಣಾ ತಂಡದ ಮುಖ್ಯಸ್ಥರು ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ 207 ಖಾತೆಗಳಿಂದ 10 ಲಕ್ಷ ರೂ. ಹಣಕ್ಕಿಂತ ಹೆಚ್ಚು ವಹಿವಾಟು ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ನಡೆದಿದೆ. ವಿವಿಧೆಡೆ ಜಿಲ್ಲೆಯಲ್ಲಿ ವಿವಿಧಡೆ 27.40 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. 13.90 ಲಕ್ಷ ರೂ. ಮೊತ್ತದ 2334.51 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

         ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಮಾತನಾಡಿ, ಅಗತ್ಯಬಿದ್ದರೆ ಹೆಚ್ಚಿನ ಪೊಲೀಸ್ ರಕ್ಷಣೆ ಒದಗಿಸಲಾಗುವುದು. ಕ್ಷೇತ್ರ ಮಟ್ಟದಲ್ಲಿ ಚುನಾವಣಾ ಅಕ್ರಮ ತಡೆಯುವ ಸಂದರ್ಭದಲ್ಲಿ ಯಾವುದೇ ಬೆದರಿಕೆ ಹಾಗೂ ಪ್ರತಿಬಂಧ ಕಂಡುಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯ ನೆರವು ಪಡೆಯಿರಿ ಅಥವಾ ಮೊಬೈಲ್ ಸಂಖ್ಯೆ 9480804500 ಅಥವಾ 9480804400 ಗೆ ಕರೆಮಾಡಲು ಅಥವಾ ಮೆಸೆಜ್ ಅಥವಾ ವಾಟ್ಸಾಪ್ ಮೂಲಕ ಮಾಹಿತಿ ನೀಡಿ. ಸಾರ್ವಜನಿಕರು ಈ ಸಂಖ್ಯೆಗಳಿಗೆ ಮಾಹಿತಿ ನೀಡುವುದರ ಮೂಲಕ ಚುನಾವಣೆ ಅಕ್ರಮಗಳ ತಡೆಗೆ ಸಹಕರಿಸುವಂತೆ ಕೋರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link