ಮೋದಿ ಮತ್ತೆ ಪ್ರಧಾನಿಯಾದರೆ ದಲಿತರ ರಕ್ಷಣೆ ಕಷ್ಟ

ಚಿತ್ರದುರ್ಗ:

       ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವ ಕೋಮುವಾದಿ ಬಿಜೆಪಿ.ಗೆ ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಅಧಿಕಾರದಿಂದ ಓಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.

       ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಲ್ಕುವರೆ ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರಮೋದಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರ ಅಭಿವೃದ್ದಿಗೆ ಚಿಂತನೆ ಮಾಡುವ ಬದಲು ಕಾರ್ಪೊರೇಟರ್, ಉದ್ಯಮಿ, ಬಂಡವಾಳ ಶಾಹಿಗಳ ಪರವಾಗಿ ನಿಂತಿದ್ದಾರೆ. ಇಲ್ಲಿಯವರೆಗೂ ದೇಶವನ್ನಾಳಿದ ಬೇರೆ ಯಾವ ಪಕ್ಷಗಳು ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳಲಿಲ್ಲ.

        ಆದರೆ ಪ್ರಧಾನಿ ಮೋದಿ ಹಿಂದುತ್ವದ ಹೆಸರಿನಲ್ಲಿ ಜಾತಿ ಧರ್ಮಗಳ ನಡುವೆ ಗಲಭೆ ಸೃಷ್ಟಿಸಿ ಮತಗಳನ್ನು ಕಬಳಿಸುವ ತಂತ್ರಗಾರಿಕೆ ನಡೆಸುತ್ತಿರುವುದರ ವಿರುದ್ದ ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಂಡು ಬರುವ ಹದಿನೆಂಟರಂದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ವಿನಂತಿಸಿದರು.

        ಐವತ್ತರ ದಶಕದಲ್ಲಿ ಹುಟ್ಟಿಕೊಂಡ ಜನಸಂಘ ರಾಜಕೀಯ ಪಕ್ಷದ ಪುನರವತಾರವೇ ಈಗಿನ ಬಿಜಪಿ.1925 ರ ವಿಜಯದಶಮಿಯಂದು ಅಸ್ತಿತ್ವಕ್ಕೆ ಬಂದ ಮನುವಾದಿ ಪ್ಯಾಶಿಸ್ಟ್ ಸಂಘಟನೆ ಆರ್.ಎಸ್.ಎಸ್.ನ ರಾಜಕೀಯ ಏಜೆಂಟರಂತೆ ಕೆಲಸ ಮಾಡುತ್ತಿರುವ ಬಿಜೆಪಿ.ಯ ನರೇಂದ್ರಮೋದಿಯಿಂದ ದೇಶದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರಿಗೆ ಎಂದಿಗೂ ರಕ್ಷಣೆ ಸಿಗುವುದಿಲ್ಲ. ಆ ಕಾರಣಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ನೀಡಿ ಕೋಮುವಾದಿ ಬಿಜೆಪಿ.ಯನ್ನು ಅಧಿಕಾರದಿಂದ ದೂರವಿಡಬೇಕಾಗಿದೆ ಎಂದು ಮತದಾರರಲ್ಲಿ ಕೋರಿದರು.

         ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನೇಕಲ್ ನಾರಾಯಣಸ್ವಾಮಿ ಅವರ ಕ್ಷೇತ್ರವನ್ನು ಯಾವ ರೀತಿಯಲ್ಲಿಯೂ ಅಭಿವೃದ್ದಿಪಡಿಸಿಲ್ಲ. ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಸಮಸ್ಯೆಗಳ ಅರಿವು ಅವರಿಗಿಲ್ಲ. ಮನುವಾದಿ ಪಕ್ಷದಿಂದ ಸ್ಪರ್ಧಿಸಿರುವ ಅವರನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಬಾರದು ಎಂದು ಮತದಾರರಲ್ಲಿ ಜಾಗೃತಿಗೊಳಿಸಿದರು.

         ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ ಮಾತನಾಡಿ ಅರವತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‍ನವರು ಎಂದಿಗೂ ಸಂವಿಧಾನವನ್ನು ಬದಲಾಯಿಸುವ ಮಾತನ್ನಾಡಿಲ್ಲ. ಬ್ರಾಹ್ಮಣ್ಯಶಾಹಿ ದೇಶದ ಪ್ರಧಾನಿ ನರೇಂದ್ರಮೋದಿ ಸಂವಿಧಾನವನ್ನು ಬದಲಾಯಿಸಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಆಶಯಗಳನ್ನು ಮಣ್ಣುಪಾಲು ಮಾಡಲು ಹೊರಟಿದ್ದಾರೆ. ಎರಡನೆ ಬಾರಿಗೆ ಯಾವುದೇ ಕಾರಣಕ್ಕೂ ಮೋದಿ ಪ್ರಧಾನಿಯಾಗಲು ಬಿಡಬಾರದೆಂದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಲೇಬೇಕು ಎಂದು ಕ್ಷೇತ್ರದ ಮತದಾರರನ್ನು ಎಚ್ಚರಿಸಿದರು.

         ನಾಲ್ಕುವರೆ ವರ್ಷಗಳ ಕಾಲ ದೇಶವನ್ನಾಳಿದ ಪ್ರಧಾನಿ ಮೋದಿ ಐದುನೂರು ಹಾಗೂ ಒಂದು ಸಾವಿರ ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದಲ್ಲದೆ ಜಿ.ಎಸ್.ಟಿ.ಜಾರಿಗೆ ತಂದರು ಹಿಟ್ಲರ್ ಸಂಸ್ಕತಿಯ ಇಂತಹ ಪ್ರಧಾನಿಯಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ. ದೇಶದ ಜನರಿಂದ ಮತಪಡೆದು ಆಯ್ಕೆಯಾಗಿರುವ ನರೇಂದ್ರಮೋದಿ ದೇಶದ ಪ್ರಧಾನಿ ಎನ್ನುವುದನ್ನು ಮರೆತು ಚೌಕಿದಾರ ಎನ್ನುವ ಪದ ಬಳಸುತ್ತಿರುವುದು ಅಸಂವಿಧಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ರಾಜ್ಯ ಸಂಘಟನಾ ಸಂಚಾಲಕರುಗಳಾದ ಎಸ್.ಎನ್.ಮಲ್ಲಪ್ಪ, ಸತ್ಯ ಭದ್ರಾವತಿ, ನಾಗಭೂಷಣ್, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ದಿವಾಕರ್, ಪ್ರಸನ್ನಕುಮಾರ್, ರಘುನಾಥ್, ಹೆಚ್.ಆರ್.ಮಹಮದ್ ಆಲಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap