ದೇಶದ ಹಿತ ಕಾಯುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ : ಬಿ.ಕೆ.ಹರಿಪ್ರಸಾದ್

ಬೆಂಗಳೂರು

        ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಬೇಕೋ ಬೇಡವೋ ಎಂಬುದು ಮುಖ್ಯಪ್ರಶ್ನೆಯಲ್ಲ.ಬದಲಿಗೆ ಸಂವಿಧಾನ ಬೇಕೋ ಬೇಡವೋ ಎಂಬುದು ಮುಖ್ಯ ಪ್ರಶ್ನೆಎಂದು ಕಾಂಗ್ರೆಸ್ ನಾಯಕ,ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. 

        ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಇವತ್ತು ನರೇಂದ್ರಮೋದಿ ಅವರು ಬೇಕೋ ಬೇಡವೋ ಎಂಬುದು ಪ್ರಶ್ನೆಯಲ್ಲ.ಯಾಕೆಂದರೆ ನರೇಂದ್ರಮೋದಿ ಅವರ ಹಿಂದಿರುವ ಶಕ್ತಿಗಳಿಗೆ ಸಂವಿಧಾನ ಬೇಕಿಲ್ಲ.ಹೀಗಾಗಿ ಮೋದಿ ಅವರ ಕೈಗೊಂಬೆ ಅಷ್ಟೇ ಎಂದರು.

         ಇತ್ತೀಚೆಗೆ ಸಾಕ್ಷಿ ಮಹಾರಾಜ್ ಎಂಬುವವರು ಈ ಬಾರಿ ಬಿಜೆಪಿ ಗೆದ್ದರೆ ಮುಂದಿನ ಬಾರಿ ಚುನಾವಣೆ ನಡೆಯುವುದೇ ಇಲ್ಲ ಎಂದಿದ್ದಾರೆ.ಇದನ್ನೇನೂ ಹುಚ್ಚಾಟದ ಹೇಳಿಕೆ ಎಂದುಕೊಳ್ಳಬೇಡಿ.ಇದು ನಿಜಕ್ಕೂ ಗಂಭೀರ ವಿಷಯ.ಯಾಕೆಂದರೆ ಇದರ ಹಿಂದಿರುವ ಸಂಘಟನೆಯ ಉದ್ದೇಶವೇ ಅದು ಎಂದು ಮಾರ್ಮಿಕವಾಗಿ ಎಚ್ಚರಿಕೆ ನೀಡಿದರು.

         ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯಾಗಿ ನರೇಂದ್ರಮೋದಿ ಅವರು ಮಾಡಿದ ಸಾಧನೆ ಏನು?ಎಂದು ಪ್ರಶ್ನಿಸಿದ ಅವರು ,ಭಯೋತ್ಪಾದಕತೆಯಂತಹ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ನಿಜವಾದ ಚರ್ಚೆಯೇ ಸಾಧ್ಯವಿಲ್ಲದಂತೆ ಮಾಡಿದವರು ಅವರು ಎಂದರು.

          ದೇಶದ ಸೇನಾನೆಲೆಯ ಮೇಲೆ ನಡೆಯುವ ಧಾಳಿಯಿಂದ ಹಿಡಿದು ಪುಲ್ವಾಮ ಘಟನೆಯ ತನಕ ಯಾವುದೇ ಹಂತದಲ್ಲಿ ನೋಡಿ.ಮೋದಿ ನೇತೃತ್ವದ ಸರ್ಕಾರ ದೇಶದ ಹಿತ ಕಾಯುವ ವಿಷಯದಲ್ಲಿ ಸಫಲವಾಗಿಲ್ಲ.ಹೀಗಾಗಿ ನಾನೇನು ಸಾಧನೆ ಮಾಡಿದೆ?ಎಂದವರು ಹದಿನೈದು ನಿಮಿಷಗಳ ಒಂದು ಮಾಧ್ಯಮ ಗೋಷ್ಟಿ ನಡೆಸಿ ಹೇಳಿದರೆ ಸಾಕು ಅವರನ್ನು ಬೆಂಬಲಿಸಬಹುದು ಎಂದರು.

         ಎಪ್ಪತ್ತು ವರ್ಷಗಳಲ್ಲಿ ಈ ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ?ಎಂದು ಕೇಳುವ ಬಿಜೆಪಿ ಮೊದಲು ತಾನೇನು ಮಾಡಿದೆ?ಎಂಬುದನ್ನು ಹೇಳಲಿ.ನಾವು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ದೇಶ ಒಡೆಯದಂತೆ ನೋಡಿಕೊಂಡಿದ್ದೇವೆ.ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸಿದ್ದೇವೆ ಎಂದರು.

        ಬಿಜೆಪಿಯ ಹಿಂದುತ್ವಕ್ಕೂ,ಹಿಂದೂ ಧರ್ಮಕ್ಕೂ ಸಂಬಂಧವೇ ಇಲ್ಲ.ಅವರದು ಗೋಳ್ವಾಲ್ಕರ್,ಸಾವರ್ಕರ್ ರಚಿತ ಹಿಂದುತ್ವ.ನಮ್ಮದು ಗಾಂಧಿಯಂತಹ ನಾಯಕರ ಹಿಂದುತ್ವ.ಇವರು ಸ್ವಾತಂತ್ರ್ಯ ಪೂರ್ವದಲ್ಲಿ ತಮ್ಮ ಹಿಂದುತ್ವ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಈಗ ಜಾರಿಗೆ ತರಲು ಹೊರಟಿದ್ದಾರೆ.ಹೀಗಾಗಿ ಅವರನ್ನು ತಡೆಗಟ್ಟಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

        ಇವರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಬ್ರಿಟಿಷರ ಜತೆಗಿದ್ದವರು.ಈಗ ನಕಲಿ ದೇಶಭಕ್ತರಾಗಿ ಸರ್ಟಿಫಿಕೇಟ್ ವಿತರಿಸುತ್ತಿದ್ದಾರೆ ಎಂದು ಟೀಕಿಸಿದ ಅವರು ಬಿಜೆಪಿಯವರಿಂದ ಯಾರೂ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದರು.

       ದೇಶಕ್ಕೆ,ಈ ರಾಜ್ಯಕ್ಕೆ ಕಾಂಗ್ರೆಸ್ ಹಾಗೂ ಜನತಾದಳದ ಕೊಡುಗೆ ಇದೆ.ಆದರೆ ಬಿಜೆಪಿ ಕೊಡುಗೆ ಶೂನ್ಯ ಎಂದು ಬಣ್ಣಿಸಿದ ಅವರು ಇವತ್ತು ಕರ್ನಾಟಕ ಇಪ್ಪತ್ತೊಂದನೇ ಶತಮಾನದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರಣ ಎಂದು ವಿವರಿಸಿದರು.

       ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ನಡುವೆ ಸಮನ್ವಯತೆ ಸಾಧ್ಯವಾಗಿಲ್ಲ ಎಂಬ ಮಾತಿಗೆ ಉತ್ತರಿಸಿದ ಅವರು,ಇದು ತಂತ್ರದ ಮಾತಲ್ಲ,ಕುತಂತ್ರದ ಮಾತು ಎಂದು ಹೇಳಿದರು.

        ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿರುವ ತಾವು ಗೆಲ್ಲುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು,ಈ ಬಾರಿಯ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.

         ಬೆಂಗಳೂರಿನಲ್ಲಿ ಲಾಲ್ ಭಾಗ್,ಕಬ್ಬನ್ ಪಾರ್ಕ್ ತರದ ಮತ್ತೊಂದು ಬೃಹತ್ ಪಾರ್ಕ್ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂಬ ಕನಸು ತಮಗಿದೆ.ಅದೇ ರೀತಿ ಕುಡಿಯುವ ನೀರಿನ ಸಮಸ್ಯೆಯನ್ನು ಮೇಕೆದಾಟು ಯೋಜನೆಯ ಮೂಲಕ ಪರಿಹರಿಸಬೇಕು ಎಂಬ ಉದ್ದೇಶವಿದೆ ಎಂದರು.

         ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸದಾಶಿವ ಶೆಣೈ,ಪ್ರಧಾನ ಕಾರ್ಯದರ್ಶಿ ಕಿರಣ್,ವರದಿಗಾರರ ಕೂಟದ ಉಪಾಧ್ಯಕ್ಷ ಆರ್.ಟಿ.ವಿಠ್ಠಲಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link