ಹಾನಗಲ್ಲ :
ಭಾರತದ ರಾಜಕೀಯ ಇತಿಹಾಸದಲ್ಲಿ ಜಾತ್ಯಾತೀತವಾಗಿ ದೇಶವನ್ನು ಕಟ್ಟುವ ಸಮರ್ಥ ನೇತೃತ್ವ ಹೊಂದಿದ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮೂಲಕ 12 ನೇ ಶತಮಾನದ ಸಾಮಾಜಿಕ ನ್ಯಾಯವನ್ನು ದೇಶಾದ್ಯಂತ ಸಾಕಾರಗೊಳಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಆದಿ ಜಾಂಬವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಮಾಳಗಿ ಕರೆ ನೀಡಿದರು.
ಮಂಗಳವಾರ ಹಾನಗಲ್ಲಿನಲ್ಲಿ ಪೌರಕಾರ್ಮಿಕರು ಹಾಗೂ ಮಾದಿಗ ಸಮುದಾಯದ ಮತದಾರರನ್ನು ಭೆಟಿ ಮಾಡಿ ಬಿಜೆಪಿ ಪರ ಮತಯಾಚಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೂರುವರೆ ಲಕ್ಷ ಮಾದಿಗ ಜನಾಂಗದ ಮತದಾರರಿದ್ದಾರೆ. ಆದರೆ ಕಾಂಗ್ರೇಸ್ ಪಕ್ಷ ಹಿಂದುಳಿದ ವರ್ಗದವರ ಹೆಸರಿನಿಂದ ಅಧಿಕಾರ ದೋಚುತ್ತಲೇ ಬಂದಿದ್ದು, ಮಾದಿಗ ಸಮುದಾಯಕ್ಕೆ ಮಾತ್ರ ಎಲ್ಲ ಹಂತದಲ್ಲಿ ಘೋರ ಅನ್ಯಾಯ ಮಾಡಿದೆ. ಎಡಗೈ, ಬಲಗೈ ಎಂದು ಬೇಧ ಮಾಡಿ ಅದರಲ್ಲೂ ಮಾದಿಗ ಸಮುದಾಯವನ್ನು ನಿರ್ಲಕ್ಷಿಸಿದೆ. ಸದಾಶಿವ ಆಯೋಗದ ವರದಿಯೂ ಕೂಡ ನಮ್ಮ ಪಾಲಿಗೆ ಫಲಪ್ರದವಾಗಲಿಲ್ಲ. ನಮ್ಮ ಸಮುದಾಯಕ್ಕೆ ಎಮ್‍ಎಲ್‍ಎ, ಎಂಎಲ್‍ಸಿ, ರಾಜ್ಯಸಭೆ, ಬೋರ್ಡ, ನಿಗಮ ಇಂತಹ ಯಾವುದೇ ಜವಾಬ್ದಾರಿಗಳನ್ನು ನೀಡದೆ ಕಾಂಗ್ರೇಸ್ ನಮ್ಮ ಸಮುದಾಯವನ್ನು ತಿರಸ್ಕರಿಸುತ್ತಲೆ ಬಂದಿರುವುದು ಈಗ ನಾವು ಸಿಡಿದೇಳುವ ಅನಿವಾರ್ಯತೆ ಬಂದಿದೆ ಎಂದರು.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮಾತನಾಡಿ, ಹಾವೇರಿ ಮೀಸಲು ಕ್ಷೇತ್ರದಲ್ಲಿ ಮಾದಿಗ ಜನಾಂಗಕ್ಕೆ ಅಭ್ಯರ್ಥಿಯನ್ನಾಗಿ ಮಾಡುವ ಪೂರ್ಣ ಮನಸ್ಸು ಬಿಜೆಪಿಗಿತ್ತಾದರೂ ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚುಪಾಲು ಗುರುತಿಸಿಕೊಂಡ ನಮ್ಮ ಸಮುದಾಯ ಕಾಂಗ್ರೇಸ್ಸಿನಿಂದ ವಂಚನೆಗೊಳಗಾದರೂ ಮುಂಬರುವ ದಿನಗಳಲ್ಲಿ ಬಿಜೆಪಿ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡುತ್ತದೆ ಎಂಬ ಭರವಸೆ ಇದೆ. ನಾವು ಮೋದಿ ನೇತೃತ್ವ ಹಾಗೂ ರಾಷ್ಟ್ರೀಯ ವಿಚಾರಧಾರೆಗಳನ್ನು ಇಟ್ಟುಕೊಂಡು ಈ ಬಾರಿ ಬಿಜೆಪಿಗೆ ಬೆಂಬಲಿಸಲು ಮುಂದಾಗಿದ್ದೇವೆ. ನರೇಂದ್ರ ಮೋದಿ ದುಡಿಯುವ ವರ್ಗಕ್ಕೆ, ಹಿಂದುಳಿದ ವರ್ಗಕ್ಕೆ ನೀಡುತ್ತಿರುವ ಅವಕಾಶ ಹಾಗೂ ಗೌರವಗಳು ಭವಿಷ್ಯದ ಭಾರತದಲ್ಲಿ ಸರ್ವೇ ಜನಃ ಸುಖಿನೋಭವಂತು ಎಂಬ ಸತ್ಯ ಸಾಕ್ಷಾತ್ಕಾರವಾಗುತ್ತಿದೆ. ಹೀಗಾಗಿ ಇಡೀ ನಮ್ಮ ಸಮುದಾಯ ಬೇಷರತ್ ಮೋದಿ ಅವರಿಗೆ ಬೆಂಬಲಿಸುತ್ತದೆ ಎಂದರು,
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತನಾಡಿ, ಎಲ್ಲ ರಂಗಗಳಲ್ಲಿ ಅಭಿವೃದ್ಧಿಯ ಮಂತ್ರ ಕಾರ್ಯರೂಪಕ್ಕೆ ಬರುತ್ತಿದ್ದು, ರಾಷ್ಟ್ರ ಹಿತದ ಜೀವಕಳೆ ಹೊಂದಿರುವ ಧೀಮಂತ ನಾಯಕ ನರೇಂದ್ರ ಮೋದಿಯವರ ನಾಯಕತ್ವದಿಂದ ಈ ದೇಶದ ಯಾವುದೇ ಜನಾಂಗಕ್ಕೆ ಅನ್ಯಾಯವಾಗುವುದಿಲ್ಲ ಎಂಬ ಭರವಸೆ ಇದೆ. ಶಿವಶರಣ ಮಾದಾರ ಚನ್ನಯ್ಯನ ಆಶೀರ್ವಾದ ಕೇಳಿದ ನರೇಂದ್ರ ಮೋದಿ ಯಾವ ಸಮುದಾಯವನ್ನೂ ಮರೆತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಉತ್ತರ ಭಾರತದಲ್ಲಿ ಶ್ರೇಷ್ಠ ಸಂತ ರವಿದಾಸರವರ ಜಯಂತಿ ಆರಂಭ ಮಾಡಿದವರು ನರೇಂದ್ರ ಮೋದಿ, ನಿರ್ಲಕ್ಷಿತ ಸಮುದಾಯಗಳ ಹಿತಕ್ಕೆ ಮೋದಿ ಶ್ರಮ ಸಾರ್ಥಕವಾಗುತ್ತಿದೆ. ಪೌರಕಾರ್ಮಿಕರ ಪಾದಪೂಜೆ ಮಾಡಿದ ಈ ದೇಶದ ಆದರ್ಶ ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತಿನ ಮನಸ್ಸನ್ನು ಗೆದ್ದಿರುವ ಮಹಾನ್ ನಾಯಕ. ಅವರ ಆಡಳಿತ ಈ ದೇಶಕ್ಕೆ ಅಗತ್ಯ ಹಾಗೂ ಅನಿವಾರ್ಯ, ನಮ್ಮ ಬೆಂಬಲ ಬಿಜೆಪಿಗೆ ಎಂದು ಘೋಷಿಸಿದರು.
ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ ಹರಿಜನ, ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿದರು. ಮಾದಿಗ ಸಭಾಧ್ಯಕ್ಷ ಬಸವರಾಜ ಕಟ್ಟಿಮನಿ, ಮಹೇಶ ಹರಿಜನ, ಬಸಣ್ಣ ಚನ್ನಗೌಡ್ರ, ಫಕ್ಕೀರಪ್ಪ ಹರಿಜನ, ಕೃಷ್ಣ ಹರಿಜನ, ಶಿವಪುತ್ರಪ್ಪ ಹರಿಜನ, ರಾಮಪ್ಪ ಕಟ್ಟಿಮನಿ, ಗುಡ್ಡಪ್ಪ ಹಾದಿಮನಿ, ನೀಲಪ್ಪ ಕಟ್ಟಿಮನಿ, ಬಸವರಾಜ ಮಣ್ಣನವರ, ಸತೀಶ ಜಾವೂಜಿ, ಮಹದೇವಪ್ಪ ಹರಿಜನ, ಹನುಮಂತಪ್ಪ ಹರಿಜನ, ಸಿದ್ದಪ್ಪ ಹರಿಜನ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ