ತುಮಕೂರು:
ಈಗಿನ ಮತದಾನ ವ್ಯವಸ್ಥೆಯಲ್ಲಿರುವ ಇವಿಎಂ ಮತಯಂತ್ರಗಳ ಬಗ್ಗೆ ಹಲವರಲ್ಲಿ ಇರುವ ಅನುಮಾನ ಮತ್ತು ಗೊಂದಲ ನಮ್ಮಲ್ಲಿಯೂ ಇದೆ ಎಂದು ಭಾರತ ರಾಷ್ಟ್ರೀಯ ಸೇವಾದಳದ ಅಧ್ಯಕ್ಷ ಡಾ.ಸುರೇಶ್ ಖೈರ್‍ನಾರ್ ಮತ್ತು ಹಿರಿಯ ಹೈಕೋರ್ಟ್ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇವಿಎಂ ಮತ ಯಂತ್ರದ ಬಗ್ಗೆ ಅನೇಕ ದೂರುಗಳಿವೆ. ಬಹಳಷ್ಟು ಜನ ಇವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಅನುಮಾನ ಸಮರ್ಪಕವಾಗಿ ನಿವಾರಣೆಯಾಗಬೇಕು. ಇಲ್ಲದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವೇ ಇಲ್ಲದಂತಾಗುತ್ತದೆ ಎಂದರು.
ಕ್ರಿಮಿನಲ್ ಹಿನ್ನೆಲೆಯವರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಅನೇಕರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಮಿತ್ ಷಾ 5 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳಿವೆ. ಎಷ್ಟೋ ಪ್ರಕರಣಗಳು ಇನ್ನೂಇತ್ಯರ್ಥಗೊಂಡಿಲ್ಲ.
ಜಾಮೀನಿನ ಮೇಲೆ ಅವರು ಹೊರಗೆ ಇದ್ದಾರೆ. ಯೋಗಿ ಆದಿತ್ಯ ನಾಥ್ ಕೂಡ 6ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳಿವೆ. ಇಂತಹವರೆಲ್ಲ ಈ ರಾಷ್ಟ್ರವನ್ನು ಆಳಿದರೆ ಏನೆಲ್ಲಾ ಆಗಬಹುದು ಎಂಬ ಆತಂಕ ವ್ಯಕ್ತಪಡಿಸಿದ ಅವರು, ಏನೇ ಆರೋಪ ಮಾಡಿದರೂ ನಮ್ಮ ಬಳಿ ದಾಖಲೆಗಳಿವೆ. ಈ ಬಗ್ಗೆ ಪುಸ್ತಕಗಳು ಬಿಡುಗಡೆಯಾಗಿವೆ ಎಂದು ಸದರಿ ಪುಸ್ತಕಗಳನ್ನು ಅವರು ಪ್ರದರ್ಶಿಸಿದರು.
ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸುವಾಗ ನನ್ನ ಬಳಿ ಆಸ್ತಿ ಇಲ್ಲ ಎಂದು ಹೇಳುತ್ತಾರೆ. ಗುಜರಾತ್ ಗಾಂಧಿನಗರದ ಪ್ಲಾಟ್‍ನಂ.
411 ರಲ್ಲಿ ಅವರು ಪ್ಲಾಟ್ ಹೊಂದಿದ್ದಾರೆ. ಇದನ್ನೆಲ್ಲ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದಾರೆ. ಮೋದಿಯವರ ಕಾರ್ಯವೈಖರಿಯನ್ನು ಗಮನಿಸಿದರೆ ಅವರೊಬ್ಬ ಮಾನಸಿಕ ರೋಗಿಯಂತೆ ಕಾಣುತ್ತಾರೆ ಎಂದು ವ್ಯಾಖ್ಯಾನಿಸಿದರು. ಅವರು ಈ ಬಗ್ಗೆ ಮುರಳಿ ಮನೋಹರ ಜೋಷಿಯವರೇ ಅಡ್ವಾಣಿಗೆ ಪತ್ರ ಬರೆದು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜಾಪುರದ ಡಾ.ಅಪ್ಪಣ್ಣ, ಸಮಾಜವಾದಿ ನಿಸಾರ್ ಅಹಮದ್ ಹೆಬ್ಬೆಟ್ಟು ರಾಮಕ್ಕ ಖ್ಯಾತಿಯ ಸಿನಿಮಾ ನಿರ್ದೇಶಕ ಎನ್.ಆರ್.ನಂಜುಂಡೇಗೌಡ, ರಮೇಶ್ ಇತರರು ಉಪಸ್ಥಿತರಿದ್ದರು. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪರಸ್ಪರ ಚರ್ಚೆಗೆ ಅವಕಾಶವಿರಬೇಕು. ಏಕಚಕ್ರಾಧಿಪತ್ಯ ನಮ್ಮದಲ್ಲ. ರಾಷ್ಟ್ರದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬುದು ನಮ್ಮ ಹಂಬಲ. ಮುಂದಿನ ದಿನಗಳಲ್ಲಿ ಇದು ಖಂಡಿತ ಈಡೇರಲಿದೆ.