ಎಕ್ಸ್ ಪ್ರೆಸ್ ಕೆನಾಲ್‍ನಿಂದ ಜಿಲ್ಲೆಗೆ ಅನ್ಯಾಯ

ತುಮಕೂರು:

        ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿರುವ ತುಮಕೂರು ಜಿಲ್ಲೆಗೆ ನಿಗದಿಪಡಿಸಿದ ಪ್ರಮಾಣದ ಹೇಮೆ ನೀರು ಇದುವರೆಗೂ ಸಮರ್ಪಕವಾಗಿ ಪೂರೈಕೆ ಆಗಿಲ್ಲ. ನೀರಿಗಾಗಿ ಕಲಹಗಳು ನಡೆಯುತ್ತಲೇ ಇವೆ.

         ಹೇಮಾವತಿ ನಾಲೆಯ ಮೂಲಕ ತುಮಕೂರಿನ ವಿವಿಧ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಜಿಲ್ಲೆಗೆ ಹರಿಯಬೇಕಾಗಿರುವ ನೀರಿನ ಪ್ರಮಾಣ 24ಟಿಎಂಸಿ. ಇದೀಗ ತುಮಕೂರು ನಾಲೆಯಿಂದ, ಚೆನ್ನಪಟ್ಟಣ, ಮಾಗಡಿ, ರಾಮನಗರ ತಾಲ್ಲೂಕು ಹಾಗೂ ಗ್ರಾಮಗಳಿಗೆ ಎಕ್ಸ್‍ಪ್ರೆಸ್ ಕೆನಾಲ್ ನಿರ್ಮಿಸುವ ಯೋಜನೆ ಸರ್ಕಾರದ ಮುಂದೆ ಇದ್ದು ನೀರಿನ ವಿಷಯದಲ್ಲಿ ಮತ್ತೊಂದು ಆಘಾತ ಎದುರಾಗಿದೆ ಎನ್ನುತ್ತಾರೆ ಕೆಲವರು.

        ತುಮಕೂರು ಶಾಖೆ 70 ಕಿ.ಮೀ.ನಿಂದ 165.5 ಕಿ.ಮೀ.ವರೆಗೆ ಸಂಪರ್ಕದ ಲಿಂಕ್ ಕೆನಾಲ್ ನಿರ್ಮಾಣಕ್ಕೆ ಯೋಜನಾ ವರದಿಯನ್ನು ಸಿದ್ದಪಡಿಸಿದ್ದು, 614 ಕೋಟಿ ರೂ. ವೆಚ್ಚವಾಗಿದೆ. ಈ ಯೋಜನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿದು ಬಂದಿದೆ.
ಕಳೆದ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಿದ್ದು, ಸರ್ಕಾರ ಈ ಯೋಜನೆ ಬಗ್ಗೆ ದೃಢಪಡಿಸಿದೆ. ಈ ಮೂಲಕ ರಾಜ್ಯ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ತುಮಕೂರು ಜಿಲ್ಲೆಯ ಪಾಲಿಗೆ ಮಾರಣಾಂತಿಕ ಯೋಜನೆ ಜಾರಿ ಮಾಡಲು ಸದ್ದಿಲ್ಲದೆ ಮುಂದಾಗಿರುವುದು ಸ್ಪಷ್ಟವಾಗಿದೆ.

        ಕಳೆದ ಫೆಬ್ರವರಿಯಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ತುಮಕೂರು ನಗರ ಕ್ಷೇತ್ರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಎಕ್ಸ್‍ಪ್ರೆಸ್ ಕೆನಾಲ್ ಯೋಜನೆ ಸರ್ಕಾರದ ಮುಂದಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಹೇಮಾವತಿ ತುಮಕೂರು ಮುಖ್ಯ ನಾಲೆಯಿಂದ ಚನ್ನಪಟ್ಟಣ, ಮಾಗಡಿ, ರಾಮನಗರ ತಾಲ್ಲೂಕು ಹಾಗೂ ಪಟ್ಟಣಗಳಿಗೆ ನೀರು ಕೊಂಡೊಯ್ಯಲು ನೇರವಾದ ಎಕ್ಸ್‍ಪ್ರೆಸ್ ಕೆನಾಲ್ ನಿರ್ಮಿಸುವ ಯೋಜನೆ ನೀರಾವರಿ ನಿಗಮದ ಮುಂದಿದೆ ಎಂದು ಸಬಂಧಪಟ್ಟಂತಹ ಸಚಿವರೇ ತಿಳಿಸಿದ್ದರು.

        ತುಮಕೂರು ಶಾಖಾ ಹೇಮಾವತಿ ನಾಲೆಯ 70ನೇ ಕಿ.ಮೀ.ನಿಂದ 165.60 ಕಿ.ಮೀ. ಸಂಪರ್ಕಿಸುವ ನಾಲಾ ನಿರ್ಮಾಣಕ್ಕೆ (ಲಿಂಕ್ ಕೆನಾಲ್) 614 ಕೋಟಿ ರೂ. ಯೋಜನೆ ಡಿಪಿಆರ್ ತಯಾರಿಸಲಾಗಿದ್ದು, ಸರ್ಕಾರದ ಪರಿಶೀಲನೆಯಲ್ಲಿದೆ. ಇದು ಪೈಪ್‍ಲೈನ್ ಮೂಲಕ ನೀರು ಕೊಂಡೊಯ್ಯುವ ಯೋಜನೆಯಾಗಿದ್ದು, ಸಾವಿರಾರು ಕ್ಯೂಸೆಕ್ಸ್ ನೀರನ್ನು ಏಕಕಾಲಕ್ಕೆ ಹರಿಸುವ ಸಾಮಥ್ರ್ಯ ಹೊಂದಲಿದೆ. ಎಕ್ಸ್‍ಪ್ರೆಸ್ ಮಾರ್ಗ ಮಧ್ಯೆ ಬರುವ ರೈತರಿಗಾಗಲಿ, ಗ್ರಾಮಗಳಿಗಾಗಲಿ ಒಂದು ಹನಿ ನೀರೂ ಸಹ ಸಿಗುವುದಿಲ್ಲ ಎನ್ನುತ್ತಾರೆ ಕೆಲವು ಹೋರಾಟಗಾರರು.

        ಹೇಮಾವತಿ ಡ್ಯಾಂ ತುಂಬಿದ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ನೀರು ಬಿಡುವ ಮುನ್ನ ರಾಮನಗರ, ಮಾಗಡಿ, ಚನ್ನಪಟ್ಟಣಕ್ಕೆ ನೀರು ಬಿಡಿಸಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಮಳೆಯ ಪ್ರಮಾಣ ಕಡಿಮೆಯಾಗಿ ನೀರಿನ ಸಂಗ್ರಹದಲ್ಲಿ ಕೊರತೆ ಆದರೆ ತುಮಕೂರು ಜಿಲ್ಲೆಗೆ ಹರಿಯುವ ನಿಗಧಿತ ನೀರು ಬಾರದೇ ಇರುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆ ಬೇಡ ಎಂಬುದು ಹಲವರ ಅಭಿಪ್ರಾಯವಾಗಿದೆ.

        ತುಮಕೂರು ನಾಲಾ ವಲಯಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದೆ. ಪ್ರತಿವರ್ಷ ತುಮಕೂರು ಜಿಲ್ಲೆಗೆ 18 ಟಿಎಂಸಿ ನೀರು ಕೂಡ ಲಭ್ಯವಾಗುತ್ತಿಲ್ಲ. ಇದೇ ನೀರಿನಲ್ಲಿಯೇ ಚನ್ನಪಟ್ಟಣ, ರಾಮನಗರ, ಮಾಗಡಿಗೆ ನೀರು ಕೊಂಡೊಯ್ಯಲು ಮುಂದಾದರೆ ಜಿಲ್ಲೆಯ ಜನತೆ ಗತಿ ಏನು? ನಾಲೆಯ ತುದಿ ಭಾಗವಾದ ಕುಣಿಗಲ್ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನೀರಿಲ್ಲದಂತೆ ಹಾಹಾಕಾರ ಏಳುವುದಿಲ್ಲವೇ ಎಂಬ ಪ್ರಶ್ನೆಯನ್ನು ಕೆಲವರು ಮುಂದಿಡುತ್ತಾರೆ. ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯ ಬಗ್ಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ ಹಲವರು ವಿರೋಧಿಸುತ್ತಾರೆ.

         ಪ್ರಸಕ್ತ ಚುನಾವಣೆಯಲ್ಲಿಯೂ ಹೇಮಾವತಿ ನೀರಿನದ್ದೇ ಹೆಚ್ಚು ಚರ್ಚೆಯಾಗುತ್ತಿದೆ. ತುಮಕೂರು ಜಿಲ್ಲೆಗೆ ನೀರಿಲ್ಲ. ಇಂತಹ ಸಂದರ್ಭದಲ್ಲಿ ಬೇರೊಂದು ಜಿಲ್ಲೆಗೆ ನೀರು ಕೊಂಡೊಯ್ಯಲು ಅವಕಾಶ ಕೊಡುವುದಿಲ್ಲ ಎಂಬುದಾಗಿ ಮಾಜಿ ಸಂಸದ ಜಿ.ಎಸ್.ಬಸವರಾಜು ಹೇಳುತ್ತಲೇ ಬಂದಿದ್ದಾರೆ. ಚುನಾವಣಾ ಸಮಯದಲ್ಲಿ ಹೇಮಾವತಿ ನೀರಿನ ವಿಷಯ ಹೆಚ್ಚು ಚರ್ಚೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ಅನುಕೂಲಗಳಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link