ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕರೆ

0
18

ಗುಬ್ಬಿ

     ಗ್ರಾಮೀಣಾಭಿವೃದ್ಧಿ ಮತ್ತು ಸ್ವಚ್ಛ ಪರಿಕಲ್ಪನೆಯನ್ನು ಇಂದಿನ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯ ಜೊತೆಗೆ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟೇಶ್ ತಿಳಿಸಿದರು.

    ತಾಲ್ಲೂಕಿನ ಕಡಬ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಹೊಸಪಾಳ್ಯ ಗ್ರಾಮದಲ್ಲಿ 7 ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಸಹಬಾಳ್ವೆ ಮತ್ತು ಶ್ರಮದಾನದಂತಹ ಮಹತ್ವದ ಚಿಂತನೆಗಳನ್ನು ಕಲಿಸುತ್ತವೆ. ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ಕರೆನೀಡಿದರು.

     ಉಪನಿರ್ದೇಶಕ ಅಶ್ವಥ್ ನಾರಾಯಣಗೌಡ ಮಾತನಾಡಿ ವಿದ್ಯಾರ್ಥಿ ಜೀವನ ಅಮೂಲ್ಯವಾದುದಾಗಿದ್ದು, ಈ ದಿನ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ಮುಂದಾಗಬೇಕಿದೆ ಎಂದ ಅವರು, ಶಿಕ್ಷಣದ ಜೊತೆಗೆ ಪರಿಸರ ನೈರ್ಮಲ್ಯ, ಗ್ರಾಮ ಸ್ವಚ್ಛತೆ, ನೀರಿನ ಮಹತ್ವ ಸೇರಿದಂತೆ ಹತ್ತು ಹಲವು ಮಹತ್ವದ ಯೋಜನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಇಂತಹ ಶಿಬಿರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

      ಪ್ರಾಚಾರ್ಯ ಹೆಚ್.ಕೆ.ನರಸಿಂಹಮೂರ್ತಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಗೊಳಿಸುವುದರ ಜೊತೆಗೆ ಸಹಬಾಳ್ವೆ, ಸಂಘಟನೆ, ಶ್ರಮದಾನ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಕಲಿಸುತ್ತವೆ ಎಂದು ತಿಳಿಸಿದ ಅವರು, 7 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಹತ್ತು ಹಲವು ವಿಚಾರಗಳನ್ನು ಕಲಿಯುವ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಳ್ಳುವಂತೆ ತಿಳಿಸಿದರು.

      ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಶಿಬಿರದಲ್ಲಿ ಪಾಲ್ಗೊಂಡಾಗ ಅವರಲ್ಲಿ ಸಂವಹನ, ನಾಯಕತ್ವದ ಗುಣ, ಸ್ವಚ್ಛ ಗ್ರಾಮದ ಪರಿಕಲ್ಪನೆ ಸೇರಿದಂತೆ ಪರಿಸರ ಜಾಗೃತಿಯಂತಹ ಚಿಂತನೆಗಳ ಬಗ್ಗೆ ಪರಿಪೂರ್ಣವಾದ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಕಡಬ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ.ಗೌರಮ್ಮ, ಅತಿಥಿಗಳಾಗಿ ಅನಸೂಯಕುಮಾರಿ, ಮಲ್ಲಿಕಾರ್ಜುನಯ್ಯ, ನಾಗಲಾಂಬಿಕೆ, ಶಿಬಿರಾಧಿಕಾರಿಗಳಾದ ಎಲ್.ಎಚ್.ಮಲ್ಲಿಕಾರ್ಜುನಯ್ಯ, ಕೆ.ಎಸ್.ಮಂಜುನಾಥ್, ಎಸ್.ಆರ್.ಫಾಲಕ್ಷ, ಕೆ.ಶಿವಪ್ಪ, ಗೀತಾ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here