ತಿರುವನಂತಪುರದಲ್ಲಿ ಮೋದಿಗೆ ಕಾದಿದೆ ಸತ್ವಪರೀಕ್ಷೆ

ತಿರುವನಂತಪುರಂ:
          ಪಡುವಣ ಕರಾವಳಿಯ ಐತಿಹಾಸಿಕ ಹಾಗೂ ಪ್ರಜ್ಞಾವಂತ ರೇವು ಪಟ್ಟಣ ತಿರುವನಂತಪುರ ಈ ಬಾರಿಯ  ಚುನಾವಣೆಯಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸತ್ವಪರೀಕ್ಷೆಗೆ ಸಿದ್ಧವಾಗುತ್ತಿದೆ. ಭಾರತೀಯ ಜನತಾಪಕ್ಷಕ್ಕೆ ಚುನಾವಣೆ ಅನುಕೂಲಕರವಾಗಿದ್ದು, ಕೇರಳದಿಂದ ಸಂಸತ್ತಿನಲ್ಲಿ ಮೊದಲ ಖಾತೆ ತೆರೆಯಲು   ಪಕ್ಷ ಅಹೋರಾತ್ರಿ ಶ್ರಮಿಸುತ್ತಿದೆ.
   
          ನರೇಂದ್ರಮೋದಿಯವರು   ವಾಸ್ತವವಾಗಿ ವಾರಾಣಸಿಯಲ್ಲಿ  ಪುನರಾಯ್ಕೆಗೆ ನಿಂತಿದ್ದಾರೆ ನಿಜ.   ಆದರೂ ತ್ರಿವೇಂದ್ರಂ ಎಂದೇ ಇಂದಿಗೂ  ಜನಬಳಕೆಯಲ್ಲಿ  ಕರೆಯಲ್ಪಡುವ ಕೇರಳದ  ರಾಜಧಾನಿ   ಪ್ರಧಾನ ಮಂತ್ರಿಯ ನಾಯಕತ್ವ, ಸಾಧನೆ,   ಘನತೆ,  ಗೌರವ ಇವೇ ಮೊದಲಾದ ಗುಣವಿಶೇಷಣಗಳನ್ನು   ಒರೆಹಚ್ಚಿ  ನೋಡುವ  ಸಾಂಕೇತಿಕ ವೇದಿಕೆಯಾಗಿದೆ.
   
           ವಿಶೇಷವೆಂದರೆ ಕಾಂಗ್ರೆಸ್ ನೇತಾರ ರಾಹುಲ್‍ಗಾಂಧಿ  ಉತ್ತರಪ್ರದೇಶದ ಅಮೇಥಿಯಲ್ಲಿ ಒಂದು ಕಾಲು, ಕೇರಳದ  ವೈನಾಡ್‍ನಲ್ಲಿ  ಮತ್ತೊಂದು ಕಾಲು   ಇಟ್ಟಿರುವಂತೆ ಮೋದಿ   ಸಹಿತ ಈ ಕರಾವಳಿ ಪಟ್ಟಣದಲ್ಲಿ  ತಮ್ಮ  ಪ್ರತಿಷ್ಠೆಯನ್ನು  ಪಣವಾಗಿಟ್ಟಿದ್ದಾರೆ  ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ.
 
ಮತ್ತೊಂದು ಹೋಲಿಕೆ ಹೀಗಿದೆ
         ರಾಹುಲ್‍ಗಾಂಧಿಯವರು ಸ್ಪರ್ಧಿಸುತ್ತಿರುವ  ವೈನಾಡು ಕೇರಳದ  ಏಕೈಕ ಗುಡ್ಡಗಾಡು ಪ್ರದೇಶ. ಬೆಟ್ಟಗುಡ್ಡಗಳ ಬುಡಕಟ್ಟು  ಜನರ ನಿವಾಸ. ಸುಮಾರು  ಎರಡು ಶತಮಾನಗಳ ಹಿಂದೆ  ಸಮುದ್ರ ತೀರಗಳಿಂದ  ವಲಸೆ ಬಂದ ಮುಸ್ಲಿಂ ಜನಾಂಗದವರು  ಇಲ್ಲಿನ ಮೂಲ ನಿವಾಸಿಗಳು.  ಇಲ್ಲಿನ ಕಾಫೀ-ಟೀ ತೋಟಗಳ  ಕೆಲಸಗಾರರು ಮತ್ತು ಹೆಚ್ಚಿನ  ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರು
ರಾಹುಲ್‍ಗಾಂಧಿಗೆ  ಶ್ರೀರಕ್ಷೆ ಆಗುವ ಸಂಭವವಿದೆ.
          ತಿರುವನಂತಪುರ ಲೋಕಸಭಾ ಕ್ಷೇತ್ರ ಕಡಲತೀರ ನಿವಾಸಿಗಳ ಕ್ಷೇತ್ರ.  ಇಲ್ಲಿ ಹಿಂದೂಗಳೇ ಹೆಚ್ಚಿನ ಮತದಾರರು.  ಕ್ಷೇತ್ರದ  ಒಟ್ಟು  ಜನಸಂಖ್ಯೆಯಲ್ಲಿ ಶೇ.67ರಷ್ಟು ಮತದಾರರು   ಹಿಂದೂಗಳು ಇದ್ದಾರೆ.   ಹಿಂದೂಗಳ  ಪೈಕಿ ಅಧಿಕ  ಸಂಖ್ಯಾತರು ನಾಯರ್‍ಗಳು (ಶೇ.39). ನಾಯರ್  ಸೇವಾ ಸಂಸ್ಥೆ ಅತ್ಯಂತ ಬಲವಾದ ಸಂಘಟನೆ. ಭಾಜಪದ ಎನ್‍ಡಿ.ಎ ಅಭ್ಯರ್ಥಿ ಕುಮ್ಮನಂ ರಾಜಗೋಪಾಲರಿಗೆ
ನಾಯರ್  ಮತಗಳೇ ಜಯ ತರುವ  ಸಾಧನವಾಗಲಿದೆ. 
        ಕೋವಂ, ನೈಯ್ಯಾತಿನಾರ ಮತ್ತು ಪರಸ್ಥಳಗಳಲ್ಲಿ ಸಾರಸಗಟಾಗಿ  ಮೋದಿಯವರ ಪಕ್ಷದ    ಪರ ನಿಲ್ಲುವ  ಸಾಧ್ಯತೆ ಇದೆ ಎಂದು ನಾವು  ಸಂದರ್ಶಿಸಿದ ಸಣ್ಣಪುಟ್ಟ  ಚಹಾ ಹೋಟೆಲ್  ಮತ್ತು ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ಖಚಿತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
     ನಾಯರ್ ಬಿಟ್ಟರೆ ಈ ಕ್ಷೇತ್ರದಲ್ಲಿ ಶೇ.27 ಇಳವರು, ಶೇ.4ನಾಡರ್ ಮತ್ತು ಶೇ.6 ವಿಶ್ವಕರ್ಮಿಗಳಿದ್ದಾರೆ.
   
        ತಿರುವನಂತಪುರ ಕ್ಷೇತ್ರದಲ್ಲಿ  ಹಿಂದುಗಳನ್ನುಳಿದಂತೆ ಶೇ.19 ಕ್ರಿಶ್ಚಿಯನ್ ಮತ್ತು ಶೇ.14 ಮುಸ್ಲಿಂ ಮತಗಳಿವೆ.ತಿರುವನಂತಪುರದ ಹಾಲಿ ಕಾಂಗ್ರೆಸ್ ಸಂಸದ ಶಶಿತರೂರ ಮೂರನೇ ಬಾರಿಗೆ  ಸ್ಪರ್ಧಾಕಣದಲ್ಲಿದ್ದಾರೆ. 2009ರಲ್ಲಿ 99 ಸಾವಿರ  ಮತಗಳ  ಅಂತರದಿಂದ  ಶಶಿತರೂರ್ ಜಯಗಳಿಸಿದ್ದರು.  2014ರÀಲ್ಲಿ ಈ ಅಂತರ ಕೇವಲ 15 ಸಾವಿರಕ್ಕೆ ಇಳಿದಿತ್ತು.   ಸ್ಥಳೀಯ ಕಾಂಗ್ರೆಸ್‍ಗೆ ಗೆಲುವಿನ ಅಂತರ ಒಮ್ಮೆಲೇ ಕುಸಿದಿರುವುದು  ದೊಡ್ಡ ಚಿಂತೆಯಾಗಿದೆ.  ಇತ್ತೀಚಿನ ದಿನಗಳಲ್ಲಿ  ತಿರುವನಂತಪುರ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರು  ತಮ್ಮ ಸಂಸದನೊಂದಿಗೆ  ಸಹಕರಿಸುತ್ತಿಲ್ಲವೆಂಬ  ದೂರು ವ್ಯಾಪಕವಾಗಿದ್ದು, ಪಕ್ಷಕ್ಕೆ ತೀವ್ರ ಮುಜುಗರ ತಂದಿದೆ. 
ಶಶಿತರೂರ್ : ಬುದ್ಧಿವಂತ, ಆದರೆ ಎಡವಟ್ಟು
          ಯುಡಿಎಫ್ ಕೂಟದ   ಕಾಂಗ್ರೆಸ್ ಅಭ್ಯರ್ಥಿ ಶಶಿತರೂರ್ ಮಧ್ಯ  ವಯಸ್ಸಿನ ನವ ನಾಗರೀಕ ರಾಜಕಾರಣಿ. ಕಳೆದ ಹತ್ತು ವರ್ಷಗಳಿಂದ  ತಿರುವನಂತಪುರವನ್ನು  ಪ್ರತಿನಿಧಿಸುತ್ತಿರುವ  ಪಾದರಸದ ಚುರುಕು  ಬುದ್ಧಿ ಈತನದು.   ನೋಡಲು ಸುಂದರಾಕಾರ.   ಉಡುಗೆ ತೊಡುಗೆಯಲ್ಲಿ ಮೋದಿಯ ಸಮೀಪವೆನಿಸುವಷ್ಟು ನೀಟುಗಾರ, ಸೊಗಸುಗಾರ.
   
       ಎಲ್ಲವೂ ಸರಿ, ಎಲ್ಲೋ ಕೊಂಚ ಎಡವಟ್ಟು ಎನ್ನುವ ರೂಢಿ ಮಾತಿನ  ಕೊಂಕುನುಡಿಗೆ ಶಶಿತರೂರ್  ಉತ್ತಮ ಉದಾಹರಣೆ.  ಶಶಿತರೂರ್ ಸಮಸ್ಯೆ- ಟೀಕೆಗಳನ್ನು ತಾನಾಗಿ ಎಳೆದುಕೊಂಡ ಸಂದರ್ಭಗಳು  ನೂರಾರು.
 
          ಮೊನ್ನೆ,  ವಾರದ ಕೆಳಗೆ,   ತಿರುವನಂತಪುರ ಲೋಕಸಭಾ ಕ್ಷೇತ್ರದ  ಯುಡಿಎ ಅಧಿಕೃತ ಅಭ್ಯರ್ಥಿ ಆದ ಬಳಿಕ  ಪಟ್ಟಣದ ಮೀನು  ವ್ಯಾಪಾರ ಸಮುಚ್ಚಯಕ್ಕೆ ಹೋಗಿ ದುರ್ವಾಸನೆ ಎಂದು ಟೀಕಿಸಿ ಥೂ..ಛೀ ..ಎಂದು ಮುಖಕ್ಕೆ  ನೀರು ಉಗ್ಗಿಸಿಕೊಂಡ ಅಧಿಕ ಪ್ರಸಂಗಿ ಈತ.
   
       ಆಗರ್ಭ   ಶ್ರೀಮಂತ  ಅಲ್ಲದಿದ್ದರೂ, ಉಂಡು ಉಡಲು  ಕೊರತೆ ಇಲ್ಲದ  ಶ್ರೀಮಂತ, ಮಾಜಿ ರಾಜತಂತ್ರಜ್ಞ, ಲೇಖಕ,  ಕುಶಾಗ್ರಮತಿ. ಪತ್ನಿ ಸುನಂದಾ  ತರೂರರ ಆತ್ಮಹತ್ಯೆ ಅಥವಾ ಕೊಲೆ  ಆರೋಪ ಪ್ರಕರಣದಲ್ಲಿ ಈತನ  ಹೆಸರು  ಇನ್ನೂ  ಇತ್ಯರ್ಥವಾಗಿಲ್ಲ.
         ಶಶಿತರೂರಿಗೆ  ಸಂಬಂಧಿಸಿದಂತೆ ಏ.15ರಂದು ತಿರುವನಂತಪುರದಲ್ಲಿಯೇ ಘಟನೆಯೊಂದು ಸಂಭವಿಸಿದೆ. (ವ್ಯಕ್ತಿಯೊಬ್ಬರ ಕಷ್ಟ  ಕುರಿತು ಪರಿಹಾಸ್ಯ ಮಾಡುವುದು ಸರಿಯಲ್ಲ ಕ್ಷಮಿಸಿ)  ಪುರಂದರ ದಾಸರು ಬಿಸಿಲು ಮಳೆ ತಪ್ಪಿಸಿಕೊಳ್ಳಲು ಮರದ ಬಳಿ ಹೋದವನ ಮೇಲೆ ಕೊಂಬೆ ಬಿದ್ದಂತೆ ಎಂದಿದ್ದಾರೆ.  ಹೀಗೆಯೇ ಆಗಿದೆ ಶಶಿತರೂರ್  ಸ್ಥಿತಿ.
   
       ಮಲೆಯಾಳಿ ವಿಷು ಉಗಾದಿಯೆಂದು ತುಲಾಭಾರ ಮಾಡಿಸಿಕೊಳ್ಳಲು ಶಶಿತರೂರ್  ದೇವಿಗುಡಿಗೆ ಹೋಗಿದ್ದನಂತೆ. ತುಲಾ ಭಾರದ ತಕ್ಕಡಿ ಮುರಿದು ಬಿದ್ದಿದೆಯಂತೆ.
   
         ಕಾಕತಾಳೀಯವೆಂದರೆ ದಾಸರು ಕಾವ್ಯ ರಚಿಸಿದಾಗ   ಹೇಳಿದ ಮಾತು ನೆನಪಾಗುತ್ತದೆ.  ಬಿಸಿಲು ಮಳೆ ತಪ್ಪಿಸಿಕೊಳ್ಳಲು  ಒಬ್ಬಾತ  ಮರದ ಬಳಿ  ನಿಂತನಂತೆ, ಮರದ  ಕೊಂಬೆ ಮುರಿದು  ಕೆಳಗೆ ನಿಂತಿದ್ದ ದಾರಿಹೋಕನ ಮೇಲೆ ಬಿತ್ತಂತೆ. ಹೀಗಾಗಿದೆ ಶಶಿತರೂರರ ಸ್ಥಿತಿ.
   
         ವ್ಯಕ್ತಿಶಃ ಎನ್‍ಡಿಎ ಅಭ್ಯರ್ಥಿಯ ಸರಳತನ ಮತ್ತು ಸಜ್ಜನಿಕೆ ಭಾರತೀಯ ಜನತಾಪಕ್ಷದ ಮೂಲ ಬಂಡವಾಳವಾಗಿದೆ. ಕಳೆದ ನಾಲ್ಕು  ಚುನಾವಣೆಗಳಲ್ಲಿ ಸತತವಾಗಿ ಸೋತು ಸುಣ್ಣವಾಗಿದ್ದ. ಓ. ರಾಜಗೋಪಾಲರಂತೆಯೇ ಈ ಬಾರಿಯ ಎ ಉಮ್ಮನಂ ರಾಜಶೇಖರರು ಕೂಡ ವೈಯಕ್ತಿಕ ವರ್ಚಸ್ಸು ಮತ್ತು ಪ್ರಾಮಾಣಿಕತೆಗೆ ಪರ್ಯಾಯ   ಪದ ದಂತಿದ್ದಾರೆ.
 
          ಹಿಂದೂ ಧಾರ್ಮಿಕ ಕ್ಷೇತ್ರಗಳ ಇತ್ತೀಚಿನ ವಿದ್ಯಮಾನಗಳು   ಜನಸಾಮಾನ್ಯರ ಮೇಲೆ ಪರಿಣಾಮ    ಬೀರಿದಂತಿದೆ.  ಶಬರಿಮಲೆ ವಿವಾದದ ಬಿಸಿ ಇಲ್ಲಿನ  ಹಿಂದೂ ಮತಗಳ ಮೇಲೆ ತಟ್ಟಿದಂತೆ  ಕಾಣುತ್ತದೆ.   ತಿರುವನಂತಪುರದಲ್ಲಿ  ದಿನಂಪ್ರತಿ ಯಾವುದಾದರೊಂದು  ಕಾರಣಕ್ಕೆ ಶಬರಿಮಲೆ ಪ್ರಸಂಗ ಪ್ರಸ್ತಾಪಿತವಾಗುತ್ತಿದೆ.  ಶಬರಿಮಲೆ ಹೋರಾಟ ಸಮಿತಿಗಳ ಮುಖ್ಯ ಕಚೇರಿಗಳು ಇಲ್ಲಿಂದಲೇ  ಕಾರ್ಯನಿರ್ವಹಿಸುತ್ತಿವೆ.
   
          ಹಿಂದೂ ದೇವಾಲಯಗಳ ಪೈಕಿ ಕಟ್ಟುನಿಟ್ಟಿನ   ವಿಧಿ ವಿಧಾನ, ಮಡಿ, ಉಡುಪು  ಮತ್ತು ಪೂಜಾ ಕೈಂಕರ್ಯಗಳ ವೈವಿದ್ಯತೆಗೆ   ಹೆಸರಾಗಿದೆ.  ಅನಂತಪದ್ಮನಾಭ ಸ್ವಾಮಿ ಸನ್ನಿಧಿ. 16ನೆಯ ಶತಮಾನದಲ್ಲಿ ತಿರುವಾಂಕೂರಿನ ಮಹಾರಾಜ ಏಳು ಅಂತಸ್ತಿನ   ಪ್ರಮುಖ ಗೋಪುರ ಮಹಾದ್ವಾರವನ್ನು  ಕಟ್ಟಿದ ಬಳಿಕ  ತಿರುವನಂತಪುರ ಅನಂತಪದ್ಮನಾಭನ ಗುಡಿ ದೇಶದ ವಿವಿಧ ಭಾಗಗಳಿಂದ  ಭಕ್ತರನ್ನು  ಆಕರ್ಷಿಸುತ್ತಿದೆ.  ಸುಮಾರು 368 ಕಲ್ಲಿನ ಕಂಬಗಳ ಸುಂದರ ಕಲಾಕಲ್ಪನೆ ವಿಶ್ವವಿಖ್ಯಾತವೆನಿಸಿದೆ.
     
         ಮತ್ತೊಂದು ಗಮನಾರ್ಹ ಅಂಶವೆಂದರೆ, ಸಂಪ್ರದಾಯದಂತೆ ಹಿಂದೂಗಳಿಗಷ್ಟೆ ಗುಡಿಗೆ ಪ್ರವೇಶ. ಹಿಂದೂಗಳು  ಸಹಿತ ಶುಚಿರ್ಭೂತರಾಗಿ ದಟ್ಟಿ  ಪಂಚೆ ಉಟ್ಟು  ಮೇಲ್ವಸ್ತ್ರವಿಲ್ಲದೆ ಸ್ವಾಮಿಯ ದರ್ಶನ  ಪಡೆಯಬೇಕು.
   
          ತಿರುವನಂತಪುರ ಕ್ಷೇತ್ರದ ಚುನಾವಣಾ ಕಣದಲ್ಲಿರುವ   ಮೂರನೆಯ  ಪ್ರಮುಖ ಅಭ್ಯರ್ಥಿ ಎಡಪಕ್ಷಗಳ ಎಲ್‍ಡಿಎಫ್ ಕೂಟದ ಸಿ.ದಿವಾಕರನ್. ಸಿಪಿಐ ಕಾರ್ಯಕರ್ತ ದಿವಾಕರ್‍ಗೆ ಕ್ಷೇತ್ರದ ಕಾರ್ಮಿಕ ಸಂಘಟನೆಗಳೇ ಮತ ತರುವ ಶಕ್ತಿ ಕೇಂದ್ರಗಳು. ಕಮ್ಯುನಿಸ್ಟ್ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಿರಿಯ ನಾಯಕರ ದಂಡು ದಿವಾಕರನ್ ಪ್ರಚಾರಕ್ಕೆ ಸಾಲುಗಟ್ಟಿ  ನಿಂತಿದ್ದಾರೆ. ದಿವಾಕರನ್  ಮಟ್ಟಿಗೆ ಯುಡಿಎಫ್‍ನ ಶಶಿತರೂರ್ ಚುನಾವಣಾ ಕಣದಲ್ಲಿ  ತಮ್ಮ ನೇರ ಪ್ರತಿಸ್ಪರ್ಧಿ.
   
          ಪಾರಸ್ಸಳ, ನಿಮಾಮ್, ಕಳಕೊಟ್ಟಮ್, ನಯ್ಯಿಟ್ಟನಂಕಾರ ಮತ್ತು ಕೋವಲಂ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಎಂ ಕಾರ್ಯಕರ್ತರು ಯುಡಿಎಫ್ ಅಭ್ಯರ್ಥಿ ಪರ ವ್ಯಾಪಕ  ಪ್ರಚಾರ ನಡೆಸಿರುವುದನ್ನು ಸಮೀಕ್ಷೆಯ ಸಂದರ್ಭದಲ್ಲಿ  ನಾವು ಗಮನಿಸಿದೆವು.
   ಮತದಾನ ಸಮೀಪಿಸಿದಂತೆ ಪ್ರಚಾರದ ಭರಾಟೆ ತಿರುವನಂತಪುರ ಕ್ಷೇತ್ರದ ತುಂಬೆಲ್ಲ ಕಿವುಡಾಗುವಂತೆ ಅತಿರೇಕದ ಪ್ರಚಾರ ಕಾಣುತ್ತಿದೆ.  ಎಲ್‍ಡಿಎಫ್‍ನ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಈ ಕ್ಷೇತ್ರವನ್ನು ತಮ್ಮ ವೈಯಕ್ತಿಕ ಪ್ರತಿಷ್ಠೆಯ ಕ್ಷೇತ್ರವನ್ನಾಗಿ   ಮಾಡಿಕೊಂಡಿದ್ದಾರೆ.
 
          ಜನಮನ್ನಣೆ ಅಷ್ಟಾಗಿ ಎದ್ದು ಕಾಣದಿದ್ದರೂ ಯುಡಿಎಫ್-ಎಲ್‍ಡಿಎಫ್‍ಗಳು  ಎನ್‍ಡಿಎಯ ಮೇಲುನಡಿಗೆಯನ್ನು ಎಚ್ಚರಿಕೆಯಿಂದ ತಡೆಯಲು ಮುಂದಾಗಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link