ದಾವಣಗೆರೆ:
ಅಭಿವೃದ್ಧಿ ಕಾರ್ಯಗಳ ಮೂಲಕ ಸೇವಕರಾಗಿ, ಜನರ ಪ್ರೀತಿ, ವಿಶ್ವಾಸ ಗಳಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಈ ಬಾರಿಯೂ ಅತ್ಯಧಿಕ ಬಹುಮತ ಪಡೆಯುವುದರೊಂದಿಗೆ ಪುನರ್ ಆಯ್ಕೆಯಾಗಲಿದಾರೆಂದು ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದು, ಕ್ಷೇತ್ರದ ಜನರ ಸಮಸ್ಯೆಗೂ ಸ್ಪಂದಿಸುತ್ತಾರೆ. ಎಲ್ಲರೂ ಇಷ್ಟಪಡುವ ವ್ಯಕ್ತಿತ್ವ ಸಿದ್ದೇಶಣ್ಣನವರದ್ದಾಗಿದ್ದು, ಅವರಿಗೆ ಎಲ್ಲಾ ಸಮುದಾಯಗಳ ಬೆಂಬಲವಿದೆ ಎಂದರು.
ಕೇಂದ್ರದಿಂದ 9947 ಕೋಟಿ ರೂ. ತಂದು ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಸಿದ್ದೇಶ್ವರ ಅವರು ಕೈಗೊಂಡಿದ್ದಾರೆ ಎಂದ ಅವರು, ಕಳೆದ 55 ವರ್ಷಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರಕಾರ ಮಾಡಿದೆ. ಎಸ್ಸಿ, ಎಸ್ಟಿ ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ದೇಶಾದ್ಯಂತ ಮೋದಿ ಅಲೆ ಇದೆ. ಆದ್ದರಿಂದ ಅವರು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೋದಿ ಅಲೆ ಗೆಲುವಿನ ದಡ ಸೇರಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ಮಾಯಕೊಂಡ ವಿಧಾನಸಭಾ ಕ್ಷೇತ್ರದಾದ್ಯಂತ ಬಿಜೆಪಿ ಪರವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 240 ಬೂತ್ಗಳಲ್ಲೂ ಬಿಜೆಪಿ ಲೀಡ್ ಪಡೆಯಲಿದೆ. ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ 25 ಸಾವಿರ ಮತಗಳ ಮುನ್ನಡೆ ನೀಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎನ್.ರಾಜಶೇಖರ್, ಉಮೇಶ್ ನಾಯಕ್, ನಾಗರಾಜ್, ರಾಮಚಂದ್ರಪ್ಪ, ಶಶಿಕುಮಾರ್, ವಿಶ್ವಾಸ್, ಬಸವರಾಜಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








