ಗುಬ್ಬಿ
ಕಳೆದ ಹಲವು ತಿಂಗಳುಗಳಿಂದ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಕಳೆದ ರಾತ್ರಿ ಬಿದ್ದ ಮಳೆ ಸಂತಸ ತಂದಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆ ಬಾರದೆ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ ಜಾನುವಾರುಗಳ ಕುಡಿಯುವ ನೀರಿಗೂ ತೀವ್ರತರ ಸಮಸ್ಯೆ ಎದುರಿಸುವಂತಾಗಿತ್ತು. ಅಲ್ಲದೆ ಬಿಸಿಲ ತಾಪ ದಿನೆ ದಿನೆ ಹೆಚ್ಚಾಗುತ್ತಿದ್ದು ರೈತರ
ಜೀವನಾಧಾರವಾಗಿದ್ದ ಕೃಷಿ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದವು. ಅಂತರ್ಜಲ ಕುಸಿತಗೊಂಡಿದ್ದು ಇತ್ತೀಚೆಗೆ ಕೊಳವೆ ಬಾವಿಗಳಲ್ಲಿ ಬರುತ್ತಿದ್ದು ಅಷ್ಟಿಷ್ಟು ನೀರು ನಿಂತುಹೋಗಿದ್ದು ತಮ್ಮ ಜೀವನಾಧಾರವಾಗಿದ್ದ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಾಗಿತ್ತು. ಕಳೆದ ರಾತ್ರಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲಿ ಒಂದಿಷ್ಟು ಸಂತಸ ತಂದಿದೆ. ಇದೇ ರೀತಿ ಮಳೆ ಮುಂದುವರೆದರೆ ರೈತರ ಬದುಕು ಹಸನಾಗಲಿದೆ. ಅಲ್ಲದೆ ಒಣಗುತ್ತಿರುವ ಬೆಳೆಗಳಿಗೆ ಜೀವ ಬಂದಂತಾಗುತ್ತದೆ ಎನ್ನುತ್ತಾರೆ ರೈತರು.
ತೆಂಗು, ಅಡಿಕೆ ಮತ್ತು ಬಾಳೆ ಬೆಳೆಗಳು ಅಂತರ್ಜಲ ಕುಸಿತದಿಂದಾಗಿ ಒಣಗುತ್ತಿದ್ದವು. ಕಳೆದ ರಾತ್ರಿ ಬಿದ್ದ ಮಳೆ ತೋಟದ ಬೆಳೆಗಳಿಗೆ ಮರುಜೀವ ನೀಡಿದಂತಾಗಿದೆ. ಮಳೆ ಪ್ರಮಾಣ ಇದೆ ರೀತಿ ಮುಂದುವರೆದರೆ ಅಂತರ್ಜಲ ಕುಸಿತದಿಂದ ಬತ್ತಿರುವ ಕೊಳವೆ ಬಾವಿಗಳಲ್ಲಿ ನೀರು ಬರಲಿದ್ದು, ರೈತರು ನೆಮ್ಮದಿಯಿಂದಿರುತ್ತಾರೆ. ತಾಲ್ಲೂಕಿನ ಹಲವು ಕಡೆಗಳಲ್ಲಿ ಕುಡಿಯುವ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. 1500 ಅಡಿಗಳವರೆಗೆ ಕೊರೆಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಾರದೆ ರೈತ ಸಮುದಾಯ ಪರಿತಪಿಸುವಂತಾಗಿತ್ತು. ಸಮರ್ಪಕ ಮಳೆಯಿಂದ ಮಾತ್ರ ಅಂತರ್ಜಲ ವೃದ್ಧಿಯಾಗುತ್ತದೆ, ಅಲ್ಲದೆ ಕೃಷಿ ಬೆಳೆಗಳು ಉತ್ತಮ ಪಸಲು ಕೊಡುತ್ತವೆ ಎನ್ನುತ್ತಾರೆ ರೈತರು.
ಕಳೆದ 2 ವರ್ಷಗಳಿಂದ ಸತತವಾಗಿ ಬರಗಾಲ ಎದುರಾಗಿದೆ. ಕಳೆದ ವರ್ಷ ಸಾಧಾರಣ ಮಳೆಯಾಯಿತಾದರೂ ಬೆಳೆ ತೆಗೆಯಲು ಸಾಧ್ಯವಾಗಲಿಲ್ಲ. ಕೊನೆಯವರೆಗೂ ಮಳೆ ಕೈಕೊಟ್ಟ ಕಾರಣ ಅಂತರ್ಜಲ ಕ್ಷೀಣಿಸಿತ್ತು. ಇದರಿಂದಾಗಿ ಬೇಸಿಗೆಯ ದಿನಗಳಲ್ಲಿ ಹಲವರ ತೋಟಗಳು ಒಣಗಿ ಹೋಗುವ ಅಂತ ತಲುಪಿದ್ದವು. ಅದೆಷ್ಟೋ ಕಡೆ ಬೋರ್ವೆಲ್ಗಳಲ್ಲಿ ನೀರು ಖಾಲಿಯಾಗಿ ಅಡಿಕೆ ತೋಟಗಳು ಒಣಗಿ ಹೋಗಿವೆ. ಇದೀಗ ಮಳೆಯ ಮುನ್ಸೂಚನೆ ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ರೈತರು ಸಂತಸದಿಂದ ಬದುಕುವರೆ ಎಂಬ ಆಶಾ ಭಾವನೆ ಈಗ ಎಲ್ಲರಲ್ಲೂ ಕಾಣುತ್ತಿದೆ. ಇದಕ್ಕೆ ಮಳೆರಾಯನೆ ಕೃಪೆ ತೋರಬೇಕು.
