ಗದಗ
ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರ ಚುನಾವಣೆಯ ನಂತರ ಪತನವಾಗುವುದಿಲ್ಲ. ಲೋಕಸಭಾ ಚುನಾವಣೆಯ ನಂತರ ಸಮ್ಮಿಶ್ರ ಸರಕಾರ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ಸ್ವಂತ ಊರಾದ ಗದಗದ ಹುಲಕೋಟಿಯಲ್ಲಿ ಸಹೋದರ ಡಿ ಆರ್ ಪಾಟೀಲ್ ಅವರ ಜೊತೆ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮೋದಿ ಅಲೆ ನಡೆಯುವುದಿಲ್ಲಾ. ಗ್ರಾಮೀಣಾಭಿವೃದ್ದಿಗೆ ಒತ್ತು ಕೊಟ್ಟ ಡಿ ಆರ್ ಪಾಟೀಲ್ ಅವರ ಅಲೆ ಗದಗದಲ್ಲಿದೆ. ಹಾವೇರಿ – ಗದಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಸಕ್ರೀಯವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಡಿ ಆರ್ ಪಾಟೀಲ್ ಅವರ ಗೆಲವು ನಿಶ್ಚಿತ. ಬೆಳಗಾವಿ, ಬಾಗಲಕೋಟೆ, ಗುಲ್ಬರ್ಗಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ಮಾಡಿದ್ದೇನೆ. ಎಲ್ಲ ಕಡೆಯಲ್ಲಿಯೂ ಕಾಂಗ್ರೆಸ್ ಪರವಾದ ಒಲವು ಕಂಡುಬಂದಿದೆ. ಎಲ್ಲ ಕಡೆ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಯ ಬಳಿಕ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎನ್ನುವ ಭಾರತೀಯ ಜನತಾ ಪಕ್ಷದ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯ ನಂತರ ಸಮ್ಮಿಶ್ರ ಸರಕಾರ ಮತ್ತಷ್ಟು ಗಟ್ಟಿಗೊಳ್ಳಲಿದೆ. ಮೋದಿ ಗೆಲವಾಗ ಬಹುದು, ಬಿಡಬಹುದು ಆದರೆ ಕರ್ನಾಟಕ ಸರಕಾರ ಮತ್ತಷ್ಟು ಗಟ್ಟಿಯಾಗುವುದು ನಿಶ್ಚಿತ ಎಂದರು. ಬಿಜೆಪಿಯವರು ಸರಕಾರ ಅಸ್ತಿತ್ವಕ್ಕೆ ಬಂದ ಸಮಯದಿಂದಲೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣೆಯ ನಂತರ ಮತ್ತಷ್ಟು ಬಲಗೊಳ್ಳಲಿದ್ದು, ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರ ಪತನಗೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಕಂಡುಬಂದಿದ್ದು, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದರು.