ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಅಸಮಾಧಾನದ ಹೊಗೆ…!

ಬೆಂಗಳೂರು

     ಸಿಎಂ ಸಿದ್ದರಾಮಯ್ಯ  ಮಂಡಿಸಿದ 16ನೇ ಬಜೆಟ್ ವಿರುದ್ಧ ಬಿಜೆಪಿ ಸಮರ ಸಾರಿದೆ. ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿದ್ದಕ್ಕೆ ಆಕ್ರೋಶ ಹೊರಹಾಕುತ್ತಿದೆ. ಸರ್ಕಾರ ಎಸ್ಸಿ, ಎಸ್ಟಿ ಹಣವನ್ನು ನುಂಗಿಹಾಕಿದೆ ಎಂದು ಬೀದಿ ಹೋರಾಟ ಮಾಡುತ್ತಿದೆ. ಆದರೆ, ಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್  ಮುಂದಾಗಿದೆ. ಸೋಮವಾರ ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಬಿಜೆಪಿಗೆ ತಕ್ಕ ಎದುರೇಟು ನೀಡಲು ನಿರ್ಧರಿಸಲಾಗಿದೆ. ‘ಕೈ’ ಶಾಸಕರಿಗೆ ಸಿದ್ದರಾಮಯ್ಯ ಖಡಕ್ ಸಲಹೆಗಳನ್ನು ಕೊಟ್ಟಿದ್ದಾರೆ. 

ಎಸ್​ಸಿ-ಎಸ್​​ಪಿ-ಟಿಎಸ್​​ಪಿ ಕಾಯ್ದೆ ಮಾಡಿರುವ ರಾಜ್ಯ ನಮ್ಮದು . ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಈ ಕಾಯ್ದೆ ಜಾರಿಯಾಗಿಲ್ಲ. ಶಾಸಕರಾದ ನೀವು ವಿವರಿಸಿ ಜನರಿಗೆ ತಿಳಿಯುವಂತೆ ಮಾಡಬೇಕು. ಹಿಂದಿನ ಸರ್ಕಾರದ ಎಡವಟ್ಟಿನಿಂದ ಬಿಲ್ ಬಾಕಿ ಉಳಿದಿದೆ. ಇದೀಗ ನಮ್ಮ ಸರ್ಕಾರ ಹಂತ ಹಂತವಾಗಿ ಬಿಲ್ ಪಾವತಿಸುತ್ತಿದೆ. ಅಷ್ಟೇ ಅಲ್ಲ ಗ್ಯಾರಂಟಿಯಿಂದ ಅಭಿವೃದ್ಧಿಯಾಗಿಲ್ಲ ಎಂಬ ಬಿಜೆಪಿ ಆರೋಪ ಶುದ್ಧ ಸುಳ್ಳಾಗಿದೆ. ಯಾಕಂದರೆ, ಒಟ್ಟು ರಾಜ್ಯ ದೇಶೀಯ ಉತ್ಪನ್ನ ಶೇ 7.4 ಬೆಳವಣಿಗೆಯಾಗಿದೆ. ದೇಶದ GSDP 6.4 ಗಿಂತ ನಾವು ಪ್ರಗತಿ ಸಾಧಿಸಿದ್ದೇವೆ. ಇನ್ನು GST ಸಂಗ್ರಹದಲ್ಲಿ ದೇಶದಲ್ಲೇ ಕಾಂಗ್ರೆಸ್ 2ನೇ ಸ್ಥಾನದಲ್ಲಿದೆ. FDI ನಲ್ಲಿ ನಮ್ಮ ರಾಜ್ಯ ದೇಶದಲ್ಲೇ ನಂಬರ್ ಒನ್ ಇದೆ. ಹಾಗಾಗಿ ಬಜೆಟ್ ಪುಸ್ತಕ ಓದಿಕೊಂಡು ಅಧಿವೇಶನದಲ್ಲಿ ಪರಿಣಾಮಕಾರಿಯಾಗಿ ಬಿಜೆಪಿ ವಿರುದ್ಧ ಮಾತನಾಡಿ ಎಂದು ಸಿಎಂ ಶಾಸಕರಿಗೆ ಸಲಹೆ ನೀಡಿದ್ದಾರೆ. 

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರು ಕೈಗೆ ಸಿಗುತ್ತಿಲ್ಲವೆಂದು, ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಸರ್ಕಾರ ರಚನೆಯಾಗಿ ಎರಡು ವರ್ಷಗಳಾಗಿವೆ, ಇನ್ನೂ ಶಾಸಕರಿಗೆ ಸಚಿವರು ಸಿಗುತ್ತಲೇ ಇಲ್ಲ, ಭೇಟಿಗೆ ಯತ್ನಿಸಿದರೂ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ತಿದಾರೆ ಅಂತಾ ಎಂಎಲ್ಎಗಳು ಗರಂ ಆಗಿದ್ದಾರೆ.

ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್.ಎಸ್ ಭೋಸರಾಜು ನಡುವೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹಿರಂಗವಾಗಿಯೇ ಕಿತ್ತಾಟ ನಡೆದಿದೆ. 

ಶಾಸಕಾಂಗ ಸಭೆಯಲ್ಲಿ ಶಾಸಕ ಗಣಿಗ ರವಿ, PWD ಇಲಾಖೆಯ ಹಳೇ ಬಿಲ್ ಕ್ಲಿಯರ್ ಬಗ್ಗೆ ಪ್ರಸ್ತಾಪ ಮಾಡಿದರು. ಜೆಡಿಎಸ್ ಹಾಗೂ ಬಿಜೆಪಿಯವರ ಬಿಲ್ ಕ್ಲಿಯರ್ ಆಗುತ್ತಿವೆ. ಆದರೆ, ನಮ್ಮ ಹಳೆಯ ಬಿಲ್ ಕ್ಲಿಯರ್ ಮಾಡುತ್ತಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ‌ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು. 

ರಾಜ್ಯದಲ್ಲಿನ ಕೆಲ ವಿವಿಗಳನ್ನು ಬಂದ್ ಮಾಡುವ ಸರ್ಕಾರದ ನಿರ್ಧಾರಕ್ಕೆ ಕೈ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದೆ. ಶಾಸಕಾಂಗ ಸಭೆಯಲ್ಲಿ ಕೊಪ್ಪಳ, ಕೊಡಗು ವಿವಿ ಬಂದ್ ಮಾಡದಂತೆ ಕಾಂಗ್ರೆಸ್ ಶಾಸಕರೇ ಆಗ್ರಹಿಸಿದ್ದಾರೆ. 

ಒಟ್ಟಿನಲ್ಲಿ, ದಾಖಲೆಯ ಮಟ್ಟದಲ್ಲಿ ಹದಿನಾರನೇ ಬಾರಿಗೆ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ, ಬಜೆಟ್​ನ ಹೈಲೈಟ್ಸ್ ಅನ್ನು ಶಾಸಕರಿಗೇನೋ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ, ಸಭೆಯಲ್ಲಿ ಶಾಸಕರ ಅಸಮಾಧಾನ ಮಾತ್ರ ಬಹಿರಂಗವಾಗಿಯೇ ಸ್ಫೋಟವಾಗಿದೆ.