ಹುಳಿಯಾರು
ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗುವ ಮೂಲಕ ಕಲಿಕೆಯ ಹತ್ತಾರು ಕೌಶಲಗಳನ್ನು ರೂಢಿಸಿಕೊಳ್ಳಬಹುದು ಎಂದು ಸಿಆರ್ ಪಿ ರಘುನಂದನ್ ಅಭಿಪ್ರಾಯ ಪಟ್ಟರು.
ಹುಳಿಯಾರು ಹೋಬಳಿಯ ದಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರಿನ ಪ್ರಥಮ್ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ `ಬೇಸಿಗೆ ಸಂಭ್ರಮ ಹಾಗೂ ಸ್ವಲ್ಪ ಓದು–ಸ್ವಲ್ಪ ಮೋಜು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಸಮಯದಲ್ಲಿ ಮಕ್ಕಳ ಹವ್ಯಾಸ ಮತ್ತು ಕೌಶಲ್ಯ ಗುರ್ತಿಸಿ ಹತ್ತಾರು ದೇಶಿ ಆಟಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ. ಬಿಡುವಿನ ಸಮಯ ಅವರ ಇಷ್ಟದ ಆಟೋಟ ಮತ್ತು ಸಾಂಸ್ಕೃತಿಕ ಕಲೆಗಳನ್ನು ಅಭ್ಯಾಸ ಮಾಡಬಹುದು. ಬೇಸಿಗೆ ರಜೆಯಲ್ಲಿ ಬಿಸಿಯೂಟದ ವ್ಯವಸ್ಥೆ ಮಾಡುವ ಮೂಲಕ ಮಕ್ಕಳ ಸರ್ವತೋಮುಖ ಕಲಿಕೆಗೆ ನೆರವು ಕಲ್ಪಿಸಲಾಗಿದೆ ಎಂದರು.
ಶಿಬಿರದಲ್ಲಿ ಶಿಕ್ಷಕರು ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಕಲಿಸಲು ಹೊಸ ತಂತ್ರಗಳನ್ನು ಬಳಸುತ್ತಾರೆ. ಮಕ್ಕಳು ಕರಕುಶಲ ಕಲೆಗಳ ಮೂಲಕ ಸರಳ ಕಲಿಕೋಪಕರಣ ತಯಾರಿಸಬಹುದು. ಇವರ ಕ್ರಿಯಾಶೀಲತೆ ಹೊರತರಲು ಮಣ್ಣಿನ ಮೂಲಕ ವಿವಿಧ ಆಕೃತಿ ಮಾಡಿ ಸರಳವಾಗಿ ಅಭ್ಯಾಸ ಮಾಡಬಹುದಾಗಿದೆ. ಪೋಷಕರು ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸುವ ಮೂಲಕ ನೆರವಾಗಬೇಕು ಎಂದು ಆಶಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೋಟೆಲ್ ನಾಗಣ್ಣ, ಗ್ರಾಪಂ ಸದಸ್ಯ ಚಿರಂಜೀವಿ, ಎಸ್ಡಿಎಂಸಿ ಸದಸ್ಯ ನಾಗರಾಜು ಇತರರು ಹಾಜರಿದ್ದರು.ಮುಖ್ಯ ಶಿಕ್ಷಕ ಮಹಾಲಿಂಗಯ್ಯ ಪ್ರಾಸ್ತಾವಿಕ ನುಡಿ ನುಡಿದರು, ಶಿಬಿರದ ಶಿಕ್ಷಕರಾದ ಮೃತ್ಯುಂಜಯ ಸ್ವಾಗತಿಸಿದರು,