ಹುಳಿಯಾರು
ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಂಕೆರೆ ಗೊಲ್ಲರಹಟ್ಟಿಯಲ್ಲಿ ನೀರಿನ ಸಮಸ್ಯೆ ತೀರ್ವವಾಗಿದ್ದು ತಕ್ಷಣದಿಂದಲೇ ಟ್ಯಾಂಕರ್‍ನಲ್ಲಿ ನೀರು ಪೂರೈಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ಜರುಗಿದೆ.
ಸರಿಸುಮಾರು ನೂರು ಮನೆಗಳಿರುವ ಐನೂರು ಜನರು ವಾಸವಾಗಿರುವ ಈ ಗೊಲ್ಲರಹಟ್ಟಿಗೆ 2 ಕೊಳವೆ ಬಾವಿ ಮತ್ತು ಒಂದು ಕೈಕಂಪು ಇಷ್ಟು ವರ್ಷಗಳ ಕಾಲ ನೀರು ಪೂರೈಸುತ್ತಿತ್ತು. ಆದರೆ ಕಳೆದ ಎಂಟು ತಿಂಗಳ ಹಿಂದೆ 2 ಕೊಳವೆಬಾವಿಯಲ್ಲಿ ನೀರು ಬರಿದಾಯಿತು. ಪರಿಣಾಮ ಕೈಪಂಪಿಗೆ ಮೋಟರ್ ಬಿಡಿಸಿ ಇಲ್ಲಿಯವರೆವಿಗೂ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಕೈಪಂಪಿನ ಕೊಳವೆಬಾವಿಯಲ್ಲೂ ಅಂತರ್ಜಲ ಬರಿದಾಗಿ ಹನಿ ನೀರಿಗೂ ಪರದಾಡುವಂತ್ತಾಗಿದೆ ಎಂದು ಪ್ರತಿಭಟನಾ ನಿರತರು ಸಮಸ್ಯೆ ವಿವರಿಸುತ್ತಾರೆ.
ಕಳೆದ ಐದಾರು ವರ್ಷದಿಂದ ಸರಿಯಾದ ಮಳೆಯಿಲ್ಲದೆ ಕೆರೆ ಕಟ್ಟೆಗಳು ಒಣಗಿವೆ. ಅಂತರ್ಜಲ ಕಡಿಮೆಯಾಗಿದೆ. ಪಂಚಾಯ್ತಿಯವರು ಸಹ ಸಮರ್ಪಕವಾಗಿ ನೀರು ಪೂರೈಸುವಲ್ಲಿ ವಿಫಲವಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ದನ-ಕರು-ಕುರಿಗಳ ಜೊತೆಗೆ ನಮಗೂ ಹನಿ ನೀರು ಸಿಗದೆ ಅವರಿವರ ತೋಟದ ಬೋರ್‍ಗಳಿಗೆ ಹೋಗಿ ಕಾಡಿ ಬೇಡಿ ನೀರು ತರುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಅಧ್ಯಕ್ಷರು ಹಾಗೂ ಪಿಡಿಓ ಅವರಿಗೆ ದೂರವಾಣಿ ಮೂಲಕ ಸಮಸ್ಯೆ ವಿವರಿಸಿದ್ದರೂ ಪರಿಹಾರಕ್ಕೆ ಮುಂದಾಗಿಲ್ಲ. ಹಾಗಾಗಿ ಉರಿ ಬಿಸಿಲಿನಲ್ಲಿ ಐದಾರು ಕಿಮೀ ದೂರದ ಗೊಲ್ಲರಹಟ್ಟಿಯಿಂದ ಮಹಿಳೆಯರು ನಡೆದುಕೊಂಡು ಬಂದು ಖಾಲಿ ಬಿಂದಿಗೆ ಸಹಿತ ಪ್ರತಿಭಟನೆಗೆ ಮುಂದಾಗಿದ್ದೇವೆ. ತಕ್ಷಣ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸುವವರೆವಿಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಪಿಡಿಓ ಅವರು ಮೀಟಿಂಗ್ ಇದ್ದ ಕಾರಣ ಮಂಗಳವಾರ ಕಛೇರಿಗೆ ಬಂದಿರಲಿಲ್ಲ.
ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ತಿಳಿಸಲಾಯಿತಾದರೂ ನಾಳೆ ಬಂದು ಪರಿಶೀಲಿಸುವುದಾಗಿ ಹೇಳಿದರು. ಇನ್ನು ಅಧ್ಯಕ್ಷರು ಸ್ವಲ್ಪ ಕಾಲವಕಾಶ ಕೊಡಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಮೇಲಧಿಕಾರಿಗಳ ಒಪ್ಪಿಗೆ ಪಡೆಯುತ್ತೇವೆಂದು ಹೇಳಿದರು. ಆದರೆ ತಕ್ಷಣ ಸಮಸ್ಯೆ ಪರಿಹಾರವಾಗಬೇಕು ಎಂದು ಬಿಗಿ ಪಟ್ಟು ಹಿಡಿದು ಧರಣಿ ಮುಂದುವರಿಸಿದರು. ಕೊನೆಗೆ ಇಲ್ಲಿನ ಗ್ರಾಪಂ ಸದಸ್ಯ ಅಜ್ಜಗಯ್ಯ ಅವರೇ ತಮ್ ತೋಟದ ಬೋರ್‍ನಿಂದ ಊರಿನ ಜನರಿಗೆ ನೀರು ಕೊಡುವ ಹೊಣೆ ಹೊರುವ ಮೂಲಕ ಧರಣಿ ನಿರತರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.