ಹುಳಿಯಾರು
ಬೆಂಕಿಯ ಕೆನ್ನಾಲಿಗೆಗೆ ವಾಸವಿದ್ದ 2 ಗುಡಿಸಲುಗಳು ಸಂಪೂರ್ಣ ಭಸ್ಮವಾದ ಘಟನೆ ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಪಂ ವ್ಯಾಪ್ತಿಯ ತೊರೆಸೂರಗೊಂಡನಹಳ್ಳಿ ಮಜುರೆ ಸಯ್ಯದ್ ಸಾಬ್ ಪಾಳ್ಯದಲ್ಲಿ ಮಂಗಳವಾರ ಜರುಗಿದೆ.ಇಲ್ಲಿನ ಗರೀಬ್ಸಾಬ್ ಅವರ ಗುಡಿಸಲಿನಲ್ಲಿ ಇದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದೆ. ಎದುರಿನಲ್ಲೇ ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದವರು ಇದನ್ನು ಗಮನಿಸಿ ಗುಡಿಸಲಿನಲ್ಲಿದ್ದವರಿಗೆ ತಿಳಿಸಿದ್ದಾರೆ. ಅಲ್ಲದೆ ಊರಿನ ಯುವಕರು, ಮಹಿಳೆಯರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಮೊದಲೇ ತೆಂಗಿನಗರಿಯ ಗುಡಿಸಲಾಗಿದ್ದರಿಂದ ಕ್ಷಣಾರ್ಧದಲ್ಲೇ ಪಕ್ಕದ ಸಲಾಲ್ ಸಾಬ್ ಅವರ ಗುಡಿಸಲಿಗೂ ಆವರಿಸಿಕೊಂಡಿದೆ.
ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲಾಗಲೇ ಎರಡೂ ಗುಡಿಸಲುಗಳು ಸಂಪೂರ್ಣ ಭಸ್ಮವಾಗಿ ಅದರಲ್ಲಿದ್ದ ಬಟ್ಟೆ, ಪಾತ್ರೆ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಲ್ಲದೆ ಗುಡಿಸಲಿನ ತೀರುಗಳು, ಬಾಗಿಲುಗಳು, ಮರಮುಟ್ಟುಗಳೂ ಸಹ ಸುಟ್ಟುಹೋಗಿವೆ.
ಬೆಂಕಿ ನಂದಿಸಲು ಹೋಗಿದ್ದ ಗ್ರಾಮದ ಯುವಕ ಫಕೃದ್ಧೀನ್ ಅವರ ಮುಖಕ್ಕೆ ಸುಟ್ಟ ಗಾಯಗಳಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಪಕ್ಕದ ಮನೆಯ ವಜೀರ್ ಸಾಬ್ ಅವ 10 ಪಿವಿಸಿ ಪೈಪ್ಗಳೂ ಸುಟ್ಟಿವೆ. ಮನೆಯ ಬಳಿಯಿದ್ದ ಒಂದು ಸಿಲ್ವರ್ ಮರ ಸುಟ್ಟಿದೆ. ಗ್ರಾಪಂ ಉಪಾಧ್ಯಕ್ಷ ಮೋಹನ್ ಅವರು ಸ್ಥಳಕ್ಕೇ ಬೇಟಿ ನೀಡಿ ಘಟನೆಯ ಮಾಹಿತಿ ಪಡೆದರು.