ಹಿರಿಯೂರು:
ಮಾನವ, ಪಶುಪಕ್ಷಿಗಳು ಸೇರಿದಂತೆ ಸಕಲ ಜೀವರಾಶಿಗಳು ನೆಮ್ಮದಿಯಿಂದ ಜೀವಿಸಲು ಪ್ರಕೃತಿಯ ಸಮತೋಲನ ಅತ್ಯಗತ್ಯವಾಗಿರುವುದರಿಂದ ಪ್ರಕೃತಿಯನ್ನು ಸುಸ್ಥಿತಿಯಲ್ಲಿಡಲು ಹಾಗೂ ಸಂರಕ್ಷಿಸುವ ಕುರಿತು ಜಾಗತಿಕ ಮಟ್ಟದಲ್ಲಿ ಗಂಭೀರ ಚಿಂತನೆ ಅತ್ಯಗತ್ಯ ಎಂದು ತೋಟಗಾರಿಕೆ ಕಾಲೇಜಿನ ವಿಶ್ರಾಂತ ಡೀನ್ ಕೃಷಿ ವಿಜ್ಞಾನಿ ಡಾ|| ಬಿ.ಮಹಂತೇಶ್ ಹೇಳಿದರು.
ನಗರದ ಬಸವರಾಜ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ವಿಶ್ವಭೂಮಿ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿಯು ಪರಮಾತ್ಮನು ನೀಡಿರುವ ಅತ್ಯಮೂಲ್ಯ ಕೊಡುಗೆ. ಈ ಭೂಮಿ, ನೆಲ, ಜಲ, ಗಾಳಿ, ಗಿಡಮರಗಳು ಭೂಮಂಡಲದಲ್ಲಿ ವಾಸಿಸುವ ಎಲ್ಲಾ ಜೀವಿಗಳೂ ಪ್ರಕೃತಿಯ ಅವಿಭಾಜ್ಯ ಅಂಗಗಳು.
ಇವುಗಳಲ್ಲಿ ಯಾವುದೇ ಒಂದಕ್ಕೆ ಏರುಪೇರಾದರೂ ಪ್ರಕೃತಿಯಲ್ಲಿ ಪ್ರವಾಹ, ಭೂಕಂಪ, ಜ್ವಾಲಾಮುಖಿ ಹಾಗೂ ಭಯಂಕರ ರೋಗಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಇಂದಿನ ಮತ್ತು ಮುಂದಿನ ಪೀಳಿಗೆಯ ಒಳಿತಿಗಾಗಿ ಪ್ರಕೃತಿಯನ್ನು ಸಂರಕ್ಷಿಸುವ ದಿಸೆಯಲ್ಲಿ ಸ್ಥಳೀಯ, ರಾಷ್ಟ್ರ ಮತ್ತು ಜಾಗತಿಕ ಮಟ್ಟದಲ್ಲಿ ಗಂಭೀರ ಚಿಂತನೆ ಅತ್ಯಗತ್ಯವಾಗಿದೆ ಎಂಬುದಾಗಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವರಾಜ ವಿದ್ಯಾಸಂಯ ಅಧ್ಯಕ್ಷ ಎಸ್.ಬಿ.ಸಚಿನ್‍ಗೌಡ ಮಾತನಾಡಿ, ಮನುಷ್ಯನು ತಾನು ಸುರಕ್ಷಿತವಾಗಿ ಬದುಕಬೇಕೆಂದು ಬಯಸುತ್ತಾನೋ ಅದೇ ರೀತಿ ಈ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳಿಗೂ ಬದುಕಲು ಅವಕಾಶ ಮಾಡಿಕೊಡಬೇಕೆಂಬ ಮಾನವೀಯತೆ ಮನುಷ್ಯನಲ್ಲಿ ಮೂಡಬೇಕಾಗಿದೆ. ಜೊತೆಗೆ ಪ್ರಕೃತಿಯು ಮನುಷ್ಯನ ಅವಶ್ಯಕತೆಗಳನ್ನು ಈಡೇರಿಸುತ್ತದೆಯೇ ಹೊರತು, ಅವನ ದುರಾಸೆಗಳನ್ನು ಈಡೇರಿಸುವುದಿಲ್ಲ ಎಂಬ ಅಂಶವನ್ನೂ ಸಹಾ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಸವರಾಜ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸಿ.ಸಂದೀಪ್‍ಯಾದವ್, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕು: ಗೀತಾ ಪ್ರಾರ್ಥಿಸಿದರು, ಲಕ್ಷ್ಮಿಕಾಂತ್ ಸ್ವಾಗತಿಸಿದರು, ಮುದ್ದಕೃಷ್ಣ ವಂದಿಸಿದರು.