ಚಿತ್ರದುರ್ಗ:
ಬಂಟ್ವಾಳದಲ್ಲಿ ಕಳೆದ 3 ರಂದು ಸಿ.ಪಿ.ಐ.ಕಚೇರಿ ಮೇಲೆ ಧಾಳಿ ನಡೆದಿರುವುದನ್ನು ಖಂಡಿಸಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಶನಿವಾರ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸಿ.ಪಿ.ಐ.ಕಚೇರಿ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿರುವ ಕಿಡಿಗೇಡಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಸಹ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು ಮಾತನಾಡಿ ಬಂಟ್ವಾಳದ ಶಾಂತರಾಂ ಪೈ ಭವನದಲ್ಲಿರುವ ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿ ಸಿ.ಪಿ.ಐ.ನ ತತ್ವ ಸಿದ್ದಾಂತಗಳನ್ನು ನಾಶಪಡಿಸಲು ಹೊರಟಿರುವವರನ್ನು ಕೂಡಲೆ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಮ್ಯುನಿಸ್ಟ್ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿರುವ ಪಾತಕಿಗಳನ್ನು ಬಂಟ್ವಾಳ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನು ಎಚ್ಚರಿಸಿದರು. ಸಿ.ಪಿ.ಐ.ತಾಲೂಕು ಕಾರ್ಯದರ್ಶಿ ಟಿ.ಆರ್.ಉಮಾಪತಿ, ಎ.ಐ.ಟಿ.ಯು.ಸಿ.ಅಧ್ಯಕ್ಷ ಎ.ಪಿ.ಎಂ.ಸಿ. ಬಸವರಾಜ್, ಸತ್ಯಕೀರ್ತಿ, ಹತೀಕ್‍ವುಲ್ಲಾ, ಸಂತೋಷ್, ಅಶೋಕ್, ರೇವಣ್ಣ, ಹಾಲಸ್ವಾಮಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
