ಹಾವೇರಿ
ಡಾ.ರಾಜ್ಕುಮಾರ್ ಅವರು ಮೇರು ವ್ಯಕ್ತಿತ್ವದ ಸರಳ ಜೀವಿಯಾಗಿದ್ದರು. ಅವರ ನಡೆ-ನುಡಿ, ಉಡಿಗೆ ಸಹ ಸರಳ ಹಾಗೂ ಆದರ್ಶಯವಾಗಿತ್ತು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಹೇಳಿದರು.
ಬುಧವಾರ ನಗರದ ವಾರ್ತಾ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾದ ಡಾ.ರಾಜ್ಕುಮಾರ್ ಅವರ 91ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ರಾಜ್ಕುಮಾರ್ ಅವರು ಶ್ರದ್ಧೆಯಿಂದ ಕೆಲಸಮಾಡುತ್ತಿದ್ದರು ಹಾಗೂ ಅಭಿಮಾನಿಗಳನ್ನು ಅಭಿಮಾನಿದೇವರುಗಳು ಎಂದು ಸಂಬೋಧಿಸಿದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಮರಣಹೊಂದಿ 12 ವರ್ಷ ಕಳೆದರೂ ಇಂದಿನ ಮಕ್ಕಳು ಸಹ ಡಾ.ರಾಜ್ಕುಮಾರ್ ಅವರ ಕುರಿತು ಮಾತನಾಡುತ್ತಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ಅವರು ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಆಂದ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅವರ ಸಮಕಾಲಿನ ನಟರಾದ ಎನ್.ಟಿ.ಆರ್. ಹಾಗೂ ರಾಮ್ರಾವ್ ಅವರು ಡಾ.ರಾಜ್ಕುಮಾರ್ ಅವರ ಮೇಲೆ ಅಭಿಮಾನ ಹೊಂದಿದ್ದಾರೆ. ಡಾ.ರಾಜ್ಕುಮಾರ್ ಅವರು ಎಲ್ಲರಿಗೂ ಚಿರಪರಿಚಿತರು, ಅವರು ನಟಿಸುತ್ತಿದ್ದ ಚಿತ್ರಗಳು ಕೌಟುಂಬಿಕ ಹಿನ್ನೆಲೆಯ ಕಥಾಹಂದರ ಹೊಂದಿದ್ದವು ಹಾಗೂ ಮನೆ ಮಂದಿಯಲ್ಲ ಒಟ್ಟಿಗೆ ಕುಳಿತು ನೋಡುವಂತಹ ಉತ್ತಮ ಭಾವನೆಯ ಚಿತ್ರಗಳಾಗಿದ್ದವು. ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆ ಎಂದು ಹೇಳಿದರು.
ಅವರ ಧರ್ಮಪತ್ನಿ ಶ್ರೀಮತಿ ಪಾರ್ವತೆಮ್ಮ ಅವರು ಒಳ್ಳೆಯ ಚಲನಚಿತ್ರಗಳ ನಿರ್ದೇಶನದಲ್ಲಿ ಶ್ರಮವಹಿಸುತ್ತಿದ್ದರು. ಡಾ.ರಾಜ್ಕುಮಾರ್ ಅವರು ಡಾ.ರಾಜ್ಕುಮಾರ್ ಅವರು ಆದರ್ಶ ದಂಪತಿಗಳಾಗಿದ್ದರು ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ ಗೊಟಗೋಡಿ ಉತ್ಸವ ರಾಕ್ ಗಾರ್ಡ್ನ ಟಿ.ಬಿ.ಸೊಲಬಕ್ಕನವರ ಅವರು ಮಾತನಾಡಿ, ನಾಡಿನಲ್ಲಿ ರಾಜ್ಕುಮಾರ್ ಗೊತ್ತಿಲ್ಲದವರು ಯಾರೂ ಇಲ್ಲ. ಐ.ಎ.ಎಸ್.ಅಧಿಕಾರಿಗಳು ಸಹ ಡಾ.ರಾಜ್ಕುಮಾರ್ರಂತೆ ಮಿಂಚಲು ಸಾಧ್ಯವಿಲ್ಲ. ಎಷ್ಟೋ ಜನರು ಕಲಾವಿದರಾಗಿ ಮಿಂಚಲು ಡಾ.ರಾಜ್ಕುಮಾರ ಕಾರಣವಾಗಿದ್ದಾರೆ. ಶತ್ರುಗಳಿಲ್ಲದ ವ್ಯಕ್ತಿಯಾಗಿದ್ದರು ಹಾಗೂ ಸಮಾಜವನ್ನು ಪ್ರೀತಿಸುತ್ತಿದ್ದರು.
ಕನ್ನಡ ಚಳುವಳಿಯಲ್ಲಿ ಭಾಗವಹಿಸಿದ್ದರು ಹಾಗೂ ಗೋಕಾಕ ವರದಿ ಜಾರಿಯಾಗಲು ರಾಜ್ಕುಮಾರ್ ಅವರು ಕಾರಣರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಚಲನಚಿತ್ರ ಹಾಗೂ ಗೀತೆಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುವ ವಿದ್ಯುನ್ಮಾನ ಮಾಧ್ಯಮಕ್ಕೆ ಧನ್ಯವಾದ ಹೇಳಬೇಕು ಎಂದು ಹೇಳಿದರು.
ಡಾ.ರಾಜ್ಕುಮಾರ್ರಂತೆ ನಾಡು-ನುಡಿಗೆ ಶ್ರಮಿಸೋಣ. ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಆಲೋಚನೆ ಮಾಡಬೇಕು. ಎಲ್ಲ ಕಲಾವಿದರು ಕಾರ್ಯಕ್ರಮ ನೀಡಲು ಬೆಂಗಳೂರಿಗೆ ಯಾಕೆ ಹೋಗಬೇಕು. ಆಕಾಶವಾಣಿ ಕೇಂದ್ರಗಳ ಮಾದರಿಯಲ್ಲಿ ಜಿಲ್ಲೆಗೊಂದು ದೂರದರ್ಶನ ಕೇಂದ್ರಗಳನ್ನು ಯಾಕೆ ಆರಂಭಿಸಬಾರದು. ಈ ಕುರಿತು ಚಿಂತನೆಗಳು ನಡೆಯಲಿ.
ಕವಿಗಳು ಹಾಗೂ ಕಲಾವಿದರು ಜನರ ಮಧ್ಯ ಹೋಗಬೇಕು, ಸಮಾಜ ಮುಖಿಯಾಗಿರಬೇಕು. ದೇಶದಲ್ಲಿ ಎಲ್ಲೂ ಇಲ್ಲದ ಡಾಕ್ಯುಮೆಂಟರಿ ಫಿಲ್ಮ ಸಿಟಿಯನ್ನು ಹಾವೇರಿ ಜಿಲ್ಲೆಯಲ್ಲಿ ಆರಂಭಿಸಲು ಈಗಾಗಲೇ ಕಾರ್ಯ ಆರಂಭಿಸಲಾಗಿದೆ, ಮೂರು ತಿಂಗಳೊಳಗಾಗಿ ಆರಂಭಿಸಲಾಗುವುದು. ಇದಕ್ಕೆ ಎಲ್ಲ ಕಲಾವಿದರು ಕೊರಿಯೋಗ್ರಾಫರ್ಸ್ ಕೈಜೋಡಿಸುತ್ತಿದ್ದಾರೆ. ಈ ಕೆಲಸ ದೊಡ್ಡಪ್ರಮಾಣದಲ್ಲಿ ಆಗಬೇಕಿದೆ. ಇಡಿ ಸಿನಿಮಾ ಹಾಗೂ ರಂಗಭೂಮಿ ಕ್ಷೇತ್ರ ಹಾವೇರಿ ಜಿಲ್ಲೆಗೆ ಬಂದುಹೋಗಬೇಕು. ಹಾವೇರಿ ಜಿಲ್ಲೆಯನ್ನು ಸ್ಟಾರ್ ಮಾಡಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಹಿತಿ ಸತೀಶ ಕುಲಕರ್ಣಿ ಅವರು ಮಾತನಾಡಿ, ಡಾ.ರಾಜ್ಕುಮಾರ್ ಅವರು ಭೂಮಿಗೆ ಬೀಜವಾಗಿ ಬಿದ್ದು ವೃಕ್ಷವಾಗಿ ಬೆಳೆದ ಅಪ್ಪಟ ಕಲಾವಿದ. ಕನ್ನಡ ಜನತೆಗೆ ಕನ್ನಡದ ಕಂಪನ್ನು ಪಸರಿಸಿದ ಮಹಾನ್ ಚೇತನ ಎಂದು ಹೇಳಿದರು.
ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸ ನಾಗರಾಜ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಂಕರ ಸುತಾರ ವಂದಿಸಿದರು.
ಚಿತ್ರಗೀತೆಗಳು:
ಯುವ ಗಾಯಕ ಕುಮಾರ ತುಷಾರ್ ಮಳಗಿ “ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ..”, ಹನುಂತಪ್ಪ ಕರಾವಳಿ “ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು” ಹಾಗೂ ವಾಲ್ಮೀಕಿ ಅವರು” ಒಂದೇ ನಾಡು, ಒಂದೆ ಕುಲವು ಒಂದೆ ದೈವ…” ಭಾರತಿ ಯಾವಗಲ್, ಸತೀಶ್ ಚವ್ಹಾಣ, ಬಸವರಾಜ ಶಿಗ್ಗಾಂವ, ಹನುಂತಸಿಂಗ್ ರಜಪೂತ, ಭೂಮಿಕಾ ಅವರುಗಳು ಡಾ.ರಾಜ್ಕುಮಾರ್ ಅವರು ಅಭಿನಯಿಸಿದ ಚಲನಚಿತ್ರಗಳ ಸುಮಧುರ ಗೀತೆಗಳನ್ನು ಹಾಡಿ ರಂಜಿಸಿದರು.