ಹುಳಿಯಾರು
‘2022ರ ವೇಳೆಗೆ ಮಲೇರಿಯದಲ್ಲಿ ರಾಜ್ಯವು ಶೂನ್ಯ ಹಂತ ಸಾಧಿಸುವ ಗುರಿ ಹೊಂದಿದ್ದು, ಹೀಗಾಗಿ, ಏ.25ರಂದು ವಿಶ್ವ ಮಲೇರಿಯಾ ದಿನದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಘೋಷ ವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಆರೋಗ್ಯ ಸಹಾಯಕ ವೆಂಟಕರಾಮಯ್ಯ ತಿಳಿಸಿದರು.
ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಲೇರಿಯಾ ಜ್ವರ ಪ್ಲಾಸ್ಮೋಡಿಯಂ ವೈವಾಕ್ಸ್ ಹಾಗು ಪ್ಲಾಸ್ಮೋಡಿಯಂ ಫಾಲ್ಸಿಫಾರಂ ಎಂಬ ವೈರಾಣುವಿನಿಂದ ಬರುತ್ತಿದ್ದು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತಿದೆ. ವೀಪರೀತ ಜ್ವರ, ಮೈ ಬೆವರುವುದು, ವಾಂತಿ, ಮೈ ಕೈ ನೋವು, ನಿಶ್ಯಕ್ತಿ ಮಲೇರಿಯಾ ರೋಗದ ಪ್ರಮುಖ ಲಕ್ಷಣಗಳಾಗಿವೆ. ರೋಗವನ್ನು ತಡೆಗಟ್ಟಲು ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವುದು ಅಗತ್ಯ. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು, ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ಜಾಗೃತಿ ವಹಿಸುವುದು, ಜ್ವರ ಕಾಣಿಸಿಕೊಂಡಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ವರ ಕಾಣಿಸಿಕೊಂಡವರಿಗೆ ಉಚಿತವಾಗಿ ರಕ್ತ ಲೇಪನಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ಹಳ್ಳಿಗಳ ನಿವಾಸಿಗಳಿಗೆ ಬಿಟ್ಟುಬಿಡದೆ ಜ್ವರ ಕಾಡಿದರೆ ಆರೋಗ್ಯ ಸಹಾಯಕರು ಅಥವಾ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರೆ ಮನೆ ಬಾಗಿಲಿಗೆ ಬಂದು ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಹೆಚ್ಚಿನ ಚಿಕಿತ್ಸೆ ಬೇಕಾದರೆ ಉಚಿತ ವೈದ್ಯಕೀಯ ಚಿಕಿತ್ಸೆ ಸಹಿತ ಔಷಧವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಯುಷ್ ವೈದ್ಯೆ ಡಾ.ಚಂದನಾ ಅವರು ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂಧಿಗಳಾದ ರೇಣುಕಾರಾಜ್, ಚಂದ್ರಕಾಂತ್, ಜ್ಯೋತಿಕಲಾ, ಮಹಾಲಕ್ಷ್ಮೀ, ಮಧು, ಅನುಸೂಯ ಮತ್ತಿತರರು ಇದ್ದರು.
