ಹಾನಗಲ್ಲ :
ಊರೂರು ತುಂಬ ಕಾರ್ಮಿಕರು, ಕೇರಿ ಕೇರಿಯಲ್ಲಿ ಕಾಮಗಾರಿಗಳು, ಕಾರ್ಮಿಕರ ಲೆಕ್ಕವಿಲ್ಲ, ಸೌಲಭ್ಯಗಳು ಸಿಗುತ್ತಿಲ್ಲ, ಹಾನಗಲ್ಲ ತಾಲೂಕಿನಲ್ಲಿ ಕಾರ್ಮಿಕರ ಹಿತ ಕಾಯುವ ಕಛೇರಿಯೂ ಇಲ್ಲ, ಬ್ಯಾಡಗಿಗೆ ಅಲೆದಾಡಿದರೂ ನೋಂದಣಿ ಆಗುತ್ತಿಲ್ಲ, ಅಧಿಕಾರಿಗಳು ಸಬೂಬು ಹೇಳಿ ಕಾಲ ದೂಡುತ್ತಿದ್ದಾರೆ, ಹಾನಗಲ್ಲಿನಲ್ಲಿ ಕಾರ್ಮಿಕ ಕಛೇರಿ ತೆರೆಯಬೇಕು, ನಮಗೆ ನ್ಯಾಯ ಒದಗಿಸಬೇಕು ಎಂದು ಲೋಕಮಂಚ ಸಂಘಟಕ ಮಂಜುನಾಥ ಕುದರಿ ಅಳಲು ತೋಡಿಕೊಂಡರು.
ಶುಕ್ರವಾರ ಹಾನಗಲ್ಲಿನ ರೋಶನಿ ಸಮಾಜಸೇವಾ ಸಂಸ್ಥೆಯಲ್ಲಿ ಲೋಯಲಾ ವಿಕಾಸ ಕೇಂದ್ರ, ಲೋಕಮಂಚ ಸಂಘಟನೆಯ ಪದಾಧಿಕಾರಿಗಳು ಸಭೆ ನಡೆಸಿ, ಕಾರ್ಮಿಕ ದಿನಾಚರಣೆಯ ಮುನ್ನಾ ದಿನ ಜಿಲ್ಲಾಧಿಕಾರಿಗಳಿಗೆ ತಮ್ಮ ಸಂಕಷ್ಟಗಳ ಕುರಿತು ಮನವಿ ಅರ್ಪಿಸಲು ನಿರ್ಧರಿಸಿದರು.
ಹತ್ತಾರು ವರ್ಷಗಳಿಂದ ರಾಜ್ಯದ ಅತಿ ದೊಡ್ಡ ತಾಲೂಕು ಕೇಂದ್ರವಾದ ಹಾನಗಲ್ಲಿನಲ್ಲಿ ಕಾರ್ಮಿಕ ಇಲಾಖೆಯ ಕಛೇರಿ ಆರಂಭಿಸಲು ಮಾಡಿದ ಮನವಿ ವಿಫಲವಾಗಿದೆ. ಕಟ್ಟಡ ಕಾರ್ಮಿಕರು, ಎಪಿಎಂಸಿಯಲ್ಲಿ ಕಾರ್ಯ ನಿರ್ವಹಿಸುವ ಹಮಾಲಿ ಕಾರ್ಮಿಕರು, ಗಾರೆ ಕೆಲಸಗಾರರು, ಇಟ್ಟಿಗೆ ತಯಾರಕರು ಸೇರಿದಂತೆ ಹತ್ತು ಹಲವು ರೀತಿ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳು ತಿಳಿಯುತ್ತಿಲ್ಲ. ನೋಂದಣಿಯೂ ಆಗುತ್ತಿಲ್ಲ. ಶೇಕಡಾ 70 ರಷ್ಟು ಕಾರ್ಮಿಕರು ನೋಂದಣಿಯಾಗದೇ ಸರಕಾರದ ಸೌಲಭ್ಯ ವಂಚಿತರಾಗಿದ್ದಾರೆ ಎಂದರು.
ಹಾನಗಲ್ಲ ಹಾಗೂ ಬ್ಯಾಡಗಿ ತಾಲೂಕು ಸೇರಿ ಬ್ಯಾಡಗಿಯಲ್ಲಿ ಕಾರ್ಮಿಕ ಕಛೇರಿ ಇದೆ. ಆದರೆ ಇಲ್ಲಿನ ನೌಕರರು ಸರಿಯಾಗಿ ಸ್ಪಂಧಿಸುತ್ತಿಲ್ಲ. ಅನಗತ್ಯ ಮಾಹಿತಿ, ದಿನಕ್ಕೊಂದು ಮಾಹಿತಿ, ಇಂದು ಇಲ್ಲ ನಾಳೆ ಎಂಬ ಸಬೂಬು, ಹೊಸ ಹೊಸ ದಾಖಲೆ ಬೇಕು ಎಂಬ ಬೇಡಿಕೆ, ಹಾನಗಲ್ಲಿನಲ್ಲಿಯೇ ಕಛೇರಿ ತೆರೆಯಲಾಗುತ್ತದೆ ಇಲ್ಲಿಗೆ ಬರಬೇಡಿ.
ಹೀಗೆ ನೂರೆಂಟು ಕಾರಣ ಹೇಳಿ ಹಾನಗಲ್ಲ ತಾಲೂಕಿನ ಕಾರ್ಮಿಕರ ನೋಂದಣಿಯನ್ನು ಮುಂದೂಡುತ್ತ ಬಂದಿದ್ದು, ಕಾರ್ಮಿಕರು ನಿರಾಶರಾಗಿದ್ದಾರೆ. ಇದಕ್ಕಾಗಿ ಹತ್ತು ಹಲವು ರೀತಿಯ ಹೋರಾಟ ಮಾಡಲಾಗಿದೆ. ಸರಕಾರಕ್ಕೂ ಮನವಿ ನೀಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಈಗ ಹೊರಾಟದ ಹಾದಿ ಅನಿವಾರ್ಯವಾಗಿದೆ. ಈಗ ಕೊನೆಯ ಯತ್ನವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲು ಮುಂದಾಗಿದ್ದೇವೆ ಎಂದು ಮಂಜುನಾಥ ಕುದರಿ ತಿಳಿಸಿದರು.
ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೆಶಕಿ ಸಿಸ್ಟರ್ ಡಿಂಪಲ್ ಅವರು ಮಾತನಾಡಿ, ಕಾರ್ಮಿಕರ ಜಾಗೃತಿಗೆ ಸರ್ಕಾರ ನಿರ್ಲಕ್ಷ ತೋರಿದೆ. ಕಾರ್ಮಿಕರ ನೊಂದಿಣಿ, ನವೀಕರಣ ವಿಷಯದಲ್ಲಿ ಇಲಾಖೆಗೆ ಒಂದಷ್ಟೂ ಕಾಳಜಿ ಇಲ್ಲ. ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಕಾಯಕ ಬಂದುಗಳು ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಇಲಾಖೆಯಿಂದ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳಿವೆ. ಆದರೆ ಇದರ ಬಗೆಗೆ ಜಾಗೃತಿಯೂ ಇಲ್ಲ.
ನೊಂದಣಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸುವವರೂ ಇಲ್ಲ. ಕಾರ್ಮಿಕರು ನೋಂದಣಿಗೆ ಅಲೆದಾಡು ಬೇಸತ್ತು ಸುಮ್ಮನಾಗಿದ್ದಾರೆ. ಹಾನಗಲ್ಲ ತಾಲೂಕಿನ 109 ಕಾರ್ಮಿಕರ ಅರ್ಜಿ ಸಲ್ಲಿಸಿದರೆ ತಿಂಗಳುಗಳ ಕಳೆದ ಮೇಲೆ ಅದರಲ್ಲಿ 10 ಅರ್ಜಿಗಳು ಮಾತ್ರ ಸ್ವೀಕೃತವಾದವು. ಉಳಿದವಕ್ಕೆ ಸುಳ್ಳು ಕಾರಣ ಹೇಳಿ ತಿರಸ್ಕರಿಸಿದರು. ನೋಂದಣಿಯೇ ಆಗದಿದ್ದರೆ ಸರಕಾರದ ಸೌಲಭ್ಯ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಲೋಯಲಾ ಸಮಾಜ ಸೇವಾ ಸಂಸ್ಥೆ ಸಂಯೋಜಕ ಮಹೇಶ ಚಹ್ವಾಣ ಮಾತನಾಡಿ, ದುರುದೇಶಪೂರಿತವಾಗಿ ಕಾರ್ಮಿಕರ ನೊಂದಣಿ ಆಗುತ್ತಿಲ್ಲ. ಬ್ಯಾಡಗಿ ಕಛೆರಿಯಲ್ಲಿನ ನೌಕರರು ಉದ್ಧೇಶಪೂರ್ವಕವಾಗಿ ನಮ್ಮ ಅರ್ಜಿಗಳನ್ನು ನಿರಾಕರಿಸುತ್ತಿರುವುದು ಹಾಗೂ ಸತಾಯಿಸುತ್ತಿರುವು ದಕ್ಕೆ ಹಲವು ಸಂಶಯಗಳು ಕಂಡುಬರುತ್ತಿವೆ. ಅನಿವಾಂiÀರ್iವಾದರೆ ತನಿಖೆ ನಡೆಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ , ಕಾರ್ಮಿಕ ದಿನಾಚರಣೆಯ ದಿನದಿಂದಲಾದರೂ ಹಾನಗಲ್ಲಿನಲ್ಲಿ ಕಾರ್ಮಿಕ ಇಲಾಖೆ ಕಛೇರಿ ಕಾರ್ಯಾರಂಭ ಮಾಡಲಿ. ಹಾನಗಲ್ಲ ತಾಲೂಕಿನ ಕಾರ್ಮಿಕರ ನೋವಿಗೆ ಸ್ಪಂಧಿಸಲು ಎಂದರು.
ಲೋಕಮಂಚ ಸಂಘಟನೆಯ ರಾಮಚಂದ್ರ ಶಿಡ್ಲಾಪೂರ, ಟಿ.ಎನ್.ಕೊಪ್ಪದ, ಚಂದ್ರಶೇಖರ ಸಾಳುಂಕೆ, ರೋಶನಿ ಸಮಾಜಸೇವಾ ಸಂಸ್ಥೆ ಸಂಯೋಜಕ ಕಲ್ಲಪ್ಪ ನಾಯ್ಕರ ಈ ಸಂದರ್ಭದಲ್ಲಿದ್ದರು.