ಹಾನಗಲ್ಲ :
ದೇಶೀ ಸಂಸ್ಕೃತಿಯನ್ನು ಜನಮಾನಸದಲ್ಲಿ ಜೀವಂತಗೊಳಿಸುವ ಪುಸ್ತಕ ಸಂಸ್ಕೃತಿ ನಮ್ಮೊಳಗೆ ಜಾಗೃತವಾಗಿ, ಪರಂಪರಾಗತವಾದ ಆರೋಗ್ಯಪೂರ್ಣ ಓದಿಗೆ ಹೊಸ ಕಾಲ ಸಜ್ಜಾಗಬೇಕು ಎಂದು ಹಿರಿಯ ನ್ಯಾಯವಾದಿ ರವಿ ಒಡೆಯರ ಕರೆ ನೀಡಿದರು.
ಸೋಮವಾರ ಹಾನಗಲ್ಲಿನ ಕೆಎಲ್‍ಇ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕವಿವೃಕ್ಷ ಬಳಗ, ಸೃಜನಶೀಲ ಕನ್ನಡ ಸಾಹಿತ್ಯ ಬಳಗ, ಅಕ್ಷರ ಸಾಹಿತ್ಯ ವೇದಿಕೆ, ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ಅಂತರಾಷ್ಟ್ರೀಯ ಪುಸ್ತಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಸಂಸ್ಕೃತಿ ದೂರವಾಗುತ್ತಿದೆ.
ಇಂದಿನ ಇಲೆಕ್ಟಾನಿಕ್, ಮೊಬೈಲ ಮಾಧ್ಯಮಗಳು ಜೊತೆಗೆ ಆಡುವ ಆಟ ಹಲವು ಸಂಕಟಗಳನ್ನು ಸೃಷ್ಠಿಸುತ್ತಿದೆ. ಆದರೆ ಪುಸ್ತಕ ಮಾಧ್ಯಮ ಒಳ್ಳೆಯ ಸಂಸ್ಕೃತಿಯನ್ನು ನೀಡುತ್ತದೆ. ವೈಜ್ಞಾನಿಕ ತಳಹದಿಯ ಮೇಲೆ ಜ್ಞಾನಾರ್ಜನೆಯಗಬೇಕು. ಪಾಶ್ಚಾತ್ಯ ಅನುಕರಣೆ ನಮ್ಮ ಸಂಸ್ಕøತಿಗೆ ಎಷ್ಟು ಸರಿ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.
ನಮ್ಮ ಋಷಿಮುನಿ ಕಾಲದಿಂದ ನೀಡಿದ ಪುಸ್ತಕಗಳು ಎಲ್ಲ ಕಾಲಕ್ಕೂ ಬೇಕಾಗುವ ಜೀವನ ಸತ್ಯವನ್ನು ಹೇಳಿವೆ. ಆದರೆ ಇದರ ಅನುಸರಣೆಗೆ ಮುಂದಾಗದೇ ಹೋಗಿದ್ದೇವೆ. ಯಂತ್ರ ಎಷ್ಟೇ ಪ್ರಗತಿ ಹೊಂದಿದರೂ ಅದು ಮಾನವ ನಿರ್ಮಿತ ಎಂಬ ಅರಿವಿರಲಿ. ಯಂತ್ರ ಮನುಷ್ಯತ್ವ ಕಲಿಸಲಾರದು. ಮಕ್ಕಳು ಯುವ ಪೀಳಿಗೆಗೆ ಪುಸ್ತಕದ ಮೂಲಕ ಜ್ಞಾನ ಮಾನವೀಯ ಮೌಲ್ಯಗಳ ಸಂಪಾದನೆಯ ದಾರಿಯನ್ನು ಕಲಿಸಬೇಕು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಆರೋಗ್ಯಪೂರ್ಣ ಓದು ಈಗಿನ ಅದ್ಯತೆಯಾಗಿದೆ. ಪುಸ್ತಕದನ ಮೂಲಕ ಜಗತ್ತಿನ ಒಳಿತನ್ನು ಅನುಭವಿಸುವ ಕಾಲ ಪುನರುತ್ಥಾನ ಆಗಬೇಕು. ಗ್ರಂಥಾಲಯಗಳು ಒಳ್ಳೆಯ ಪುಸ್ತಕಗಳಿಂದ ಕಂಗೊಳಿಸಿ ಓದುಗರನ್ನು ಆಕರ್ಷಿಸಬೇಕು. ಬರಹಗಾರರು ಹೆಚ್ಚುತ್ತಿದ್ದಾರೆ. ಆದರೆ ಓದುಗರು ಕಡಿಮೆಯಾಗುತ್ತಿದ್ದಾರೆ. ದಿನಾಚರಣೆಗಳನ್ನು ಜಾಗೃತಿಯ ಮೂಲಕ ಸಂದೇಶ ನೀಡುವ ಕಾರ್ಯಕ್ರಮಗಳನ್ನಾಗಿ ರೂಪಿಸಬೇಕು.
ಒಂದೊಂದು ಪುಸ್ತಕ ಅಣ್ಣಾ ಹಜಾರೆಯಂತಹ ವೈಚಾರಿಕ ಶಕ್ತರನ್ನು ಸೃಷ್ಟಿಸಿದೆ. ವಿಮರ್ಶೆ ವೈಚಾರಿಕತೆಯ ಓದು ಮನುಷ್ಯನನ್ನು ಮಹಾಮಾನವನನ್ನಾಗಿಸುವ ತಾಕತ್ತು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸಶಕ್ತ ಜ್ಞಾನದ ಪುಸ್ತಕಗಳ ಓದಿನ ಕೊರತೆಯೇ ವ್ಯಕ್ತಿತ್ವ ನಿರ್ಮಾಣಕ್ಕೆ ಮಾರಕವಾಗಿರುವುದು ವಿಷಾದದ ಸಂಗತಿ. ನಾಳೆಗಾಗಿ ಇಂದು ಒಳ್ಳೆಯದನ್ನು ಓದುವ ಮೂಲಕ ಬದುಕಿನ ಬುತ್ತಿ ಕಟ್ಟಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೆಎಲ್‍ಇ ಕಾಲೇಜಿನ ಉಪನ್ಯಾಸಕ ಪ್ರೊ.ಕೆ.ಎಸ್.ಅಜಿತಕುಮಾರ, ವಿದ್ಯಾರ್ಥಿ ದೆಸೆಯಲ್ಲಿ ಓದು ಎಂದರೆ ಕೇವಲ ಪಠ್ಯ ಎಂಬ ಪರಿಪಾಠ ಆರಂಭವಾಗಿದೆ. ಬದುಕನ್ನು ಅರಿಯುವ ನೂರಾರು ಪುಸ್ತಕಗಳು ನಮ್ಮೆದುರಿಗೆ ಇದ್ದರೂ ಅನುಭವಿಸಿ ಓದದ ಯುವಪೀಳಿಗೆ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಬದುಕಿನ ದಾರಿ ತಪ್ಪಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದರು.
ಪುಸ್ತಕ ಕೊಡುಗೆ :
ಇದೇ ಸಂದರ್ಭದಲ್ಲಿ ಕವಿ ಲೇಖಕರು ತಮ್ಮ ಸೃಜನ ಶೀಲ ಹತ್ತು ಕೃತಿಗಳನ್ನು ಕೆಎಲ್‍ಇ ಕಾಲೇಜು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಸಾಹಿತಿ ಟಿ.ಶಿವಕುಮಾರ ಆಶಯ ಮಾತುಗಳನ್ನಾಡಿದರು. ಕವಿವೃಕ್ಷ ಬಳಗದ ಪ್ರಧಾನ ಕಾರ್ಯದರ್ಶಿ ನಂದೀಶ ಲಮಾಣಿ, ಅಧ್ಯಕ್ಷ ಗಣೇಶ ಚಹ್ವಾಣ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಆನಂದ ದೊಡ್ಡಕುರುಬರ, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಆದ್ಯಕ್ಷ ಎಸ್.ಸಿ.ಕಲ್ಲನಗೌಡರ, ಕಾರ್ಯದರ್ಶಿ ಎಸ್.ವಿ.ಹೊಸಮನಿ, ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಸೃಜಶೀಲ ಕನ್ನಡ ಸಾಹಿತ್ಯ ಬಳಗದ ಅಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ, ಎನ್.ಎಸ್.ಮುಶಪ್ಪನವರ, ಪ್ರೊ.ವಿಶ್ವನಾಥ ಹೊಂಬಳಿ, ಪ್ರೊ.ಶಿವಕುಮಾರ ಯತ್ತಿನಹಳ್ಳಿ, ವನಜಾಕ್ಷಿ ಕುಲಕರ್ಣಿ, ಲೀಲಾ ಭಟ್ ಅತಿಥಿಗಳಾಗಿದ್ದರು. ವರ್ಷಿಣಿ ಕರಗುದರಿ ಪ್ರಾರ್ಥನೆ ಹಾಡಿದರು.