ತಾಲ್ಲೂಕು ಕಛೇರಿಯಲ್ಲಿ ಬರನಿರ್ವಹಣಾ ಸಭೆ

ಹಾನಗಲ್ಲ :

       ಹಾನಗಲ್ಲ ತಾಲೂಕಿನಲ್ಲಿ ಸುರಿದ ಅಕಾಲಿಕ, ಆಣೆಕಲ್ಲು ಸಹಿತ ಮಳೆ ಮತ್ತು ಬಿರುಗಾಳಿಗೆ ಮೂರು ಹೋಬಳಿ ವ್ಯಾಪ್ತಿಯಲ್ಲಿ 19 ಮನೆಗಳು ಬಿದ್ದುದಲ್ಲದೆ, 75 ಹೆಕ್ಟೇರ್ ಬಾಳೆ ಮತ್ತು 86 ಕೆಕ್ಟೇರ್ ಮಾವು ಬೆಳೆ ನಾಶವಾದ ಬಗ್ಗೆ ವರದಿಯಾಗಿದೆ.

     ಪಟ್ಟಣದ ತಹಸೀಲ್ದಾರ್ ಕಛೇರಿಯಲ್ಲಿ ನಡೆದ ಪ್ರಕೃತಿ ವಿಕೋಪ ಹಾಗೂ ಬರ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಕಂದಾಯ, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ತಾಲೂಕಿನಲ್ಲಾದ ಮಳೆ ಹಾನಿಯ ಕುರಿತು ಪರಿಶೀಲನಾ ವರದಿ ನೀಡಿದರು.

     ಈ ಸಂಧರ್ಭದಲ್ಲಿ ಮಾತನಾಡಿದ ಹಾನಗಲ್ಲ ತಾಲೂಕು ತಹಸೀಲ್ದಾರ್ ಎಂ.ಗಂಗಪ್ಪ, ಅಕಾಲಿಕ ಮಳೆಗೆ ತಾಲೂಕಿನಲ್ಲಿ ರೈತರ ಬಾಳೆ, ಮಾವು ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಫಸಲು ಹಾಳಾಗಿದೆ. ಮನೆಗಳ ಛಾವಣಿಗಳು ಹಾರಿಹೋಗಿವೆ. ಇದರ ವರದಿಯನ್ನು ಕೂಡಲೇ ಸರ್ಕಾರಕ್ಕೆ ನೀಡಲಾಗುತ್ತಿದೆ. ಎಲ್ಲ ಇಲಾಖೆಗಳ ಅಧಿಕಾರಿಗಳೂ ಇದನ್ನು ಗಂಭೀರವಾಗಿ ಪರಿಗಣಿಸಿ ಮೂರು ದಿನಗಳಲ್ಲಿ ದಾಖಲೆಗಳ ಸಹಿತ ಮಾಹಿತಿ ಒದಗಿಸಬೇಕು.

      ಇದುವರೆಗೂ ಚುನಾವಣೆಯ ಕಾರ್ಯದಲ್ಲಿ ತೊಗಿದ್ದರೂ ಎಲ್ಲ ಇಲಾಖೆಗಳ ಸಿಬ್ಬಂದಿಗಳು ಬರಗಾಲವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಉಳಿದೆಲ್ಲ ತಾಲೂಕುಗಳಿಗೆ ಹೋಲಿಸಿದರೆ ಹಾನಗಲ್ಲ ತಾಲೂಕಿನಲ್ಲಿ ಕುಡಿಯುವ ನೀರಿಗೆ ದೊಡ್ಡ ಸಮಸ್ಯೆಯಾಗಿಲ್ಲ. ಮುಂದಿನ 2 ತಿಂಗಳೂ ಬರಗಾಲವಿದ್ದಂತೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಎಪ್ರೀಲ್ ತಿಂಗಳು ವಾಡಿಕೆ ಮಳೆ 44 ಎಂಎಂ ಆಗಿತ್ತು, ಶನಿವಾರ, ಭಾನುವಾರ 33 ಎಂಎಂ ಸುರಿದಿದೆ. ವೇಗದ ಗಾಳಿ ಹಾಗೂ ಮಳೆಯ ರಭಸವೇ ಈ ಹಾನಿಗೆ ಕಾರಣ ಎನ್ನಲಾಗಿದೆ. ಹಾನಿಗೊಳಪಟ್ಟ ಮನೆಗಳಿಗೆ 3200 ರಿಂದ 5200 ರೂವರೆಗೆ ಪರಿಹಾರ ನೀಡಲು ಸಾಧ್ಯವಿದೆ.

     ಇದರೊಂದಿಗೆ ತಾಲೂಕಿನಲ್ಲಿ 6 ಎಕರೆ(250) ತೆಂಗು, 2 ಎಕರೆಯಷ್ಟು ಅಡಕೆ ಗಿಡಗಳು ನೆಲಕ್ಕುರುಳಿವೆ. 48 ಹೆಕ್ಟೇರ್ ಭತ್ತ ಬೊಮ್ಮನಹಳ್ಳಿ ಹೋಬಳಿಯಲ್ಲಿ ನಾಶವಾದ ಮಾಹಿತಿ ಲಭ್ಯವಾಗಿದೆ. ಹಾನಿಗೊಳಗಾದ ಯಾವ ಫಲಾನುಭವಿಯೂ ಪರಿಹಾರದಿಂದ ವಂಚಿತವಾಗಬಾರದು. ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು ಕೂಡಲೇ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು.

      ಜಿಪಂ ಇಲಾಖೆ ಅಧಿಕಾರಿ ಸೊಪ್ಪಿಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನಬಸಪ್ಪ ಹಾವಣಗಿ ಬರಗಾಲ ನಿರ್ವಹಣೆ ಕುರಿತು ಮಾಹಿತಿ ನೀಡಿ, ತಾಲೂಕಿಗೆ ಈಗಾಗಲೇ 50ಲಕ್ಷರೂ ಅನುದಾನ ಮಂಜೂರಾಗಿತ್ತು. ಅದನ್ನು ಕುಇಯುವ ನೀರು ಮತ್ತಿತರ ಕಾಮಗಾರಿಗಳಿಗಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನೂ 50 ಲಕ್ಷರೂಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಾತಿ ಹಂತದಲ್ಲಿದೆ.

      ಇದರಲ್ಲಿ ಹೊಸದಾಗಿ ಕೊಳವೆಭಾವಿ ಕೊರೆಸುವುದು ಬೇಡ, ಈಗಿರುವ ಕೊಳವೆಭಾವಿಗಳಿಗೆ ಫ್ಲೆಶಿಂಗ್ ಮಾಡಿಸುವುದು, ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತದೆ. ತಾಲೂಕಿನಲ್ಲಿ 21 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಂಭವವಿದೆ. ಈಗಾಗಲೇ ಸಮಸ್ಯೆ ಎದುರಾದ ಗೊಂದಿ, ಇನಾಂನೀರಲಗಿ ಹಾಗೂ ಡೊಮ್ಮನಾಳ ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್‍ಗಳನ್ನು ಭಾಡಿಗೆ ಪಡೆದು ನೀರೊದಗಿಸಲಾಗುತ್ತಿದೆ. ಆದಾಗ್ಯೂ ಯಾವ ಸಂದರ್ಭದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಪಿಡಿಓಗಳಿಗೆ ಸೂಚಿಸಿದರು.

     ಸಭೆಯಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹಕ್ಲಪ್ಪನವರ, ಪುರಸಭೆ ಕಂದಾಯ ಅಧಿಕಾರಿ ಶಿವಾನಂದ ಕ್ಯಾಲಕೊಂಡ, ಜಿಪಂ ಇಂಜಿನಿಯರುಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link