ಹಾವೇರಿ :
ಮೇ 1 ಇಡೀ ಜಗತ್ತಿನಾದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ. ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನ ಮಾತ್ರವಲ್ಲ ಚಾರಿತ್ರಿಕವಾಗಿ ದೀರ್ಘ ಚರಿತ್ರೆಯನ್ನೆ ತನ್ನೊಡಲಿನಲ್ಲಿ ಇಟ್ಟಿಕೊಂಡಿರುವ ದಿನ ಎಂದು ವಕೀಲರು ಹಾಗೂ ಕಾರ್ಮಿಕ ಮುಖಂಡರಾದ ನಾರಾಯಣ ಕಾಳೆ ಹೇಳಿದರು.
ನಗರದ ಶ್ರೀ ಮುರುಘರಾಜೇಂದ್ರ ಮಠದ ಆವರಣದಲ್ಲಿ ಸಿಐಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆದ ಕಾರ್ಮಿಕ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೇ ದಿನ ಸಂದರ್ಭದಲ್ಲಿ ಸಿಐಟಿಯು ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತುಹಾಕುವಲ್ಲಿ ಕಾರ್ಮಿಕ ವರ್ಗದ ಪಾತ್ರದ ಕುರಿತು ಕಾರ್ಮಿಕರ ಪ್ರಜ್ಞೆಯನ್ನು ಎತ್ತರಿಸಲು ಮತ್ತು ಎಲ್ಲಾ ಶೋಷಣೆಯನ್ನು ಕೊನೆಗಾಣಿಸುವ ಅಂತಿಮ ಸಂಘರ್ಷಕ್ಕಾಗಿ ಕಾರ್ಮಿಕ ವರ್ಗವನ್ನು ಸಜ್ಜುಗೊಳಿಸಲು ಪ್ರತಿಜ್ಞೆಗೈಯುತ್ತದೆ.
ತಮ್ಮ ಜೀವನಾಧಾರಗಳು, ಜೀವನ ಮತ್ತು ದುಡಿಮೆಯ ಪರಿಸ್ಥಿತಿಗಳನ್ನು ರಕ್ಷಿಸಿಕೊಳ್ಳಲು ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಯುವಜನ, ವಿದ್ಯಾರ್ಥಿಗಳು, ಹೀಗೆ ಸಮಾಜದ ಎಲ್ಲಾ ವಿಭಾಗದ ಜನರ ಹೆಚ್ಚುತ್ತಿರುವ ಹೋರಾಟಗಳನ್ನು ಸಿಐಟಿಯು ಸ್ವಾಗತಿಸುತ್ತದೆ; ಸಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದನೆಗೆ ದಲಿತರು ಮತ್ತು ಆದಿವಾಸಿಗಳು ಸೇರಿದಂತೆ ವಿವಿಧ ವಿಭಾಗಗಳ ಹೆಚ್ಚುತ್ತಿರುವ ಹೋರಾಟಗಳನ್ನು ಕೂಡಾ ಸ್ವಾಗತಿಸುತ್ತದೆ.
ಚುನಾವಣೆಯ ನಂತರ ಯಾವುದೇ ಸರ್ಕಾರ ಬಂದರೂ, ನವಉದಾರವಾದಿ ನೀತಿಗಳನ್ನು ಸೋಲಿಸುವ ಉದ್ದೇಶದಿಂದ ಈ ಹೋರಾಟಗಳನ್ನು ಮತ್ತಷ್ಟು ತೀವ್ರಗೊಳಿಸಲು ಕಾರ್ಮಿಕ ವರ್ಗಕ್ಕೆ ಮತ್ತು ದುಡಿಯುವ ವರ್ಗಕ್ಕೆ ಕರೆ ನೀಡುತ್ತದೆ; ಕಾರ್ಪೊರೇಟ್ ಪರದಿಂದ ಜನ ಪರದ ಕಡೆಗೆ ನೀತಿಗಳ ದಿಕ್ಕನ್ನು ಬದಲಾಯಿಸಲು ಐಕ್ಯ ಹೋರಾಟಗಳನ್ನು ತೀವ್ರಗೊಳಿಸಲು ಕರೆ ನೀಡಿದರು.
ಸಿಐಟಿಯು ಜಿಲ್ಲಾ ಸಂಚಾಲಕರಾದ ವಿನಾಯಕ ಕುರುಬರ ಮಾತನಾಡಿ‚ ಯಾರು ಸಂಪತ್ತನ್ನು ಸೃಷ್ಟಿಸುತ್ತಾರೋ ಅವರಿಗೇ ಅದು ಸೇರಬೇಕು ಎಂಬ ಘೋಷಣೆಯೊಂದಿಗೆ ಈ ವರ್ಷದ ಮೇ ದಿನಾಚರಣೆಯನ್ನು ಆಚರಿಸಬೇಕೆಂಬ ಕಾರ್ಮಿಕ ಸಂಘಗಳ ವಿಶ್ವ ಒಕ್ಕೂಟ ಕರೆಯನ್ನು ಸಿಐಟಿಯುಪೂರ್ಣವಾಗಿ ಬೆಂಬಲಿಸುತ್ತದೆ; ಮತ್ತಷ್ಟು ವರ್ಗ ದೃಷ್ಟಿಕೋನದೊಂದಿಗೆ ಬಂಡವಾಳಶಾಹಿ ಶೋಷಣಾ ವ್ಯವಸ್ಥೆಯ ವಿರುದ್ಧ ಸಂಘರ್ಷವನ್ನು ಗಟ್ಟಿಗೊಳಿಸುವ ತನ್ನ ಪ್ರಯತ್ನಗಳ ಭಾಗವಾಗಿ ಯನ್ನು ಗಟ್ಟಿಗೊಳಿಸಲು ಸಿಐಟಿಯು ಬದ್ಧವಾಗಿದೆ.
ಮಾನವ ಕುಲದ ಸಾಮೂಹಿಕ ಪ್ರಯತ್ನಗಳ ಮೂಲಕ ಸಾಧಿಸಲಾದ ಅಪಾರ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳನ್ನು ಕೆಲವೇ ದೇಶಗಳು ಮತ್ತು ಕೆಲವೇ ಕಾರ್ಪೊರೇಟ್‍ಗಳು ಕಬಳಿಸಿವೆ ಮತ್ತು ಇವುಗಳನ್ನು ಜನತೆಯ ಅನುಕೂಲಕ್ಕಾಗಿ ಬಳಸುತ್ತಿಲ್ಲ ಬದಲಿಗೆ ತಮ್ಮ ಲಾಭಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ದುಡಿಯುವ ಜನತೆಯನ್ನು ದಿವಾಳಿ ಮಾಡಲು ಬಳಸಲಾಗುತ್ತಿದೆ. ಇಂತಹ ಲಾಭಕೋರ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಸಿಐಟಿಯು ತನ್ನ ಆಕ್ರೋಶವನ್ನು ವ್ಯಕ್ತಪಡಿಸುತದೆ.
ಈ ರೀತಿಯಾಗಿ ಸಂಪತ್ತು ಕೆಲವರ ಬಳಿಯೇ ಸೇರಿಕೊಂಡಿರುವಾಗ, ಮಿಲಿಯಾಂತರ ಜನರು ನಿರುದ್ಯೋಗ, ಬಡತನ, ಅನಕ್ಷರತೆ, ಅನಾರೋಗ್ಯ, ನಿರ್ವಸತಿ, ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವುದು ಮಾನವ ಕುಲವೇ ನಾಚಿಕೆ ಪಡುವ ವಿಷಯವಾಗಿದೆ; ಆದ್ದರಿಂದಾಗಿ, ಇಂತಹ ಅಮಾನವೀಯ ಬಂಡವಾಳಶಾಹಿ ವ್ಯವಸ್ಥೆಯು ಮುಂದುವರಿಯುವ ಹಕ್ಕಿಲ್ಲ.ಇದನ್ನು ಮುಂದುವರಿಯಲು ಬಿಡಬಾರದು ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ವಿ.ಕೆ.ಬಾಳಿಕಾಯಿ, ಎಸ್‍ಎಫ್‍ಐ ಜಿಲ್ಲಾ ಸಹಕಾರ್ಯದಶೀ ಬಸವರಾಜ ಭೋವಿ, ಜ್ಯೋತಿ ದೊಡ್ಡಮನಿ, ಎಸ್‍ಪಿಜೆ ಮುಖ್ಯಸ್ಥರಾದ ಹಸೀನಾ ಹೆಡಿಯಾಲ್, ಹೆಸ್ಕಾಂ ನೌಕರರ ಮುಖಂಡರಾದ ಚಂದ್ರು ಬೆನಕನಹಳ್ಳಿ, ಗುಡದಯ್ಯ ಬರಡಿ, ಸಂತೋಷ ಕುಂಸಿ, ಶಂಕರ ಜಂಗಳೆ, ಟಿ.ಎನ್ ಪಾಟೀಲ, ಗ್ರಾಮ ಪಂಚಾಯತ ನೌಕರರ ಮುಖಂಡರಾದ ಅಜ್ಜಪ್ಪ ಬಾರ್ಕಿ, ದಯಾನಂದ ಚೌಟಿ ಇದ್ದರು.