ದಾವಣಗೆರೆ:
ಕಳೆದ ಸೋಮವಾರ ಬಿರುಗಾಳಿ ಸಹಿತ ಸುರಿದ ಮಳೆಗೆ ಅಪಾರ ಬೆಳೆ ಹಾನಿಯಾಗಿದ್ದು, ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಆದ್ದರಿಂದ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾನದಂಡವನ್ನು ಬದಲಾಯಿಸಿ, ಅನ್ನದಾತರಿಗೆ ಅನುಕೂಲ ಆಗುವಂತೆ ಬೆಳೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಆಗ್ರಹಿಸಿದರು.
ದಾವಣಗೆರೆ ಹಾಗೂ ಹರಪನಹಳ್ಳಿ ತಾಲೂಕುಗಳ ವಿವಿಧ ತೋಟ ಹಾಗೂ ಗದ್ದೆಗಳಿಗೆ ಭೇಟಿ ನೀರಿ ಬೆಳೆ ಹಾನಿ ಪರಿಶೀಲಿಸಿ, ಸುದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬಿರುಗಾಳಿ ಹಾಗೂ ಆಲೆಕಲ್ಲು ಸಹಿತ ಸುರಿದ ಮಳೆಗೆ ಅಡಿಕೆ, ತೆಂಗು, ಪಪ್ಪಾಯ, ಭತ್ತ ಹಾಗೂ ಮೆಕ್ಕೆಜೋಳದ ಬೆಳೆ ಹಾನಿಗೆ ಒಳಗಾಗಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಆದರೆ, ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ರೈತರಿಗೆ ನೀಡುವ ಪರಿಹಾರದ ಮೊತ್ತವು ಅತ್ಯಲ್ಪ ಪರಿಣಾಮದ್ದಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾನದಂಡವನ್ನು ಬದಲಾಯಿಸಿ, ರೈತರಿಗೆ ಅನುಕೂಲ ಆಗುವಂತೆ ಪರಿಹಾರದ ಮೊತ್ತ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಆಯಾ ತಾಲೂಕುಗಳ ತಹಶೀಲ್ದಾರರು, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿ ಆದ ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ವಾಸ್ತವವಾಗಿ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂಬುದರ ಬಗ್ಗೆ ಸಚಿತ್ರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಲಿ.
ನಂತರ ಜಿಲ್ಲಾಡಳಿತವು ಸರ್ಕಾರಕ್ಕೆ ಬೆಳೆ ಹಾನಿಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಒಂದು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಲು ಆಗುವ ಖರ್ಚು-ವೆಚ್ಚದ ಆಧಾರದ ಮೇಲೆ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ನೀಡುವ ಬೆಳೆಹಾನಿ ಪರಿಹಾರವನ್ನು ವೈಜ್ಞಾನಿಕ ರೀತಿಯಲ್ಲಿ ಹೆಚ್ಚಿಸುವಂತೆ ಶಿಫಾರಸು ಮಾಡಿ ಪ್ರಸ್ತಾವನೆ ಕಳುಹಿಸಬೇಕೆಂದು ಸಲಹೆ ನೀಡಿದರು.
ಕಳೆದ ವರ್ಷ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ, ಈ ಬಾರಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬಹುತೇಕ ರೈತರು ಬೆಳೆ ವಿಮೆ ಮಾಡಿಸಿಲ್ಲ. ಈ ಬಾರಿ ಕೇವಲ 15 ಸಾವಿರ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಬೆಳೆ ವಿಮೆ ಬಿಡುಗಡೆ ಆಗದಿರಲು ಅಧಿಕಾರಿಗಳು ಬೆಳೆಯ ಇಳುವರಿಯ ಬಗ್ಗೆ ಮಾಹಿತಿ ನೀಡದಿರುವುದೇ ಕಾರಣವಾಗಿದೆ. ಈ ಬೆಳೆ ಹಾನಿಯಾಗಿರು ವುದರಿಂದ ರೈತರ ಬಳಿ ಗೊಬ್ಬರ, ಬಿತ್ತನೆ ಬೀಜ ಖರೀದಿಸಲು ಹಣ ಇಲ್ಲವಾಗಿದೆ. ಆದ್ದರಿಂದ ಈಗ ಅಧಿಕಾರಿಗಳು ಬೆಳೆ ವಿಮೆ ಹಣ ಕೊಡಿಸಿದರೆ, ರೈತರಿಗೂ ಅನುಕೂಲ ಆಗಲಿದೆ ಎಂದರು.ಬಿರುಗಾಳಿ ಸಹಿತ ಮಳೆಗೆ ಮನೆಗಳ ಮೇಲ್ಛಾವಣಿ ಸಹ ಹಾರಿ ಹೋಗಿದ್ದು, ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿ, ಪರಿಶೀಲಿಸಿ ವಾರದೊಳಗೆ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.