ಹೊನ್ನಾಳಿ:
ಬೇಸಿಗೆ ಸಂಭ್ರಮ ಯೋಜನೆಯಡಿ “ಸ್ವಲ್ಪ ಓದು ಸ್ವಲ್ಪ ಮೋಜು” ಎಂಬ ಘೋಷವಾಕ್ಯದೊಂದಿಗೆ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳ 30 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪಂಚ ಚಟುವಟಿಕೆಗಳ ಮೂಲಕ ಕುಣಿಯುತ್ತ, ನಲಿಯುತ್ತ, ಆಟವಾಡುತ್ತ ಕಲಿಯುತ್ತಿದ್ದಾರೆ.
ತಾಲೂಕಿನ ಬೆನಕನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಸಂಭ್ರಮ ಕಾರ್ಯಕ್ರಮಕ್ಕೆ ಡಿಡಿಪಿಐ ಪರಮೇಶ್ವರಪ್ಪ ಶುಕ್ರವಾರ ಭೇಟಿ ನೀಡಿ ಮಕ್ಕಳ ಕಲಿಕಾ ಆಸಕ್ತಿಯನ್ನು ಪರಿಶೀಲಿಸಿದರು.
ಕುಟುಂಬ, ಆರೋಗ್ಯ, ಪರಿಸರ, ನೀರು ಹಾಗೂ ಆಹಾರದ ಬಗ್ಗೆ ಮಕ್ಕಳಿಗೆ ಪ್ರತಿ ವಾರಕ್ಕೊಮ್ಮೆ ಒಂದು ಚಟುವಟಿಕೆ ಮೂಲಕ ಅದರ ಮಹತ್ವಗಳನ್ನು ಆರು ಮತ್ತು ಏಳನೇ ತರಗತಿ ವಿದ್ಯಾಥಿಗಳಿಗೆ ಏ. 24ರಿಂದ ಕಲಿಸಲಾಗುತ್ತಿದೆ.
ಇತ್ತೀಚೆಗೆ ಮೊಬೈಲ್ನಲ್ಲಿ ಗೇಮ್ಗಳನ್ನು ಆಡುತ್ತ ಕಾಲ ಕಳೆಯುವ ಮಕ್ಕಳನ್ನು ನೋಡುವುದೇ ಹೆಚ್ಚಾಗಿದೆ. ಈ ಮಧ್ಯೆ ಸರಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಕುಟುಂಬದ ಮಹತ್ವ, ಅವಿಭಕ್ತ ಕುಟುಂಬ ಹಾಗೂ ಸಂಬಂಧಗಳು, ಪರಿಸರದ ವಿಚಾರಕ್ಕೆ ಬಂದಾಗ ನಮ್ಮ ಸುತ್ತಮುತ್ತಲಿನ ಗಿಡ-ಮರಗಳ ಸಂರಕ್ಷಣೆ, ನೀರನ್ನು ಹೇಗೆ ಮಿತವಾಗಿ ಬಳಸಬೇಕು ಹಾಗೂ ಅದರ ಮಹತ್ವ ಹೀಗೆ ಐದು ಚಟುವಟಿಗೆಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಂಪು ಶಿಕ್ಷಣ ನೀಡುತ್ತಿದ್ದಾರೆ.
ಪಠ್ಯಕ್ರಮದ ಜತೆಗೆ ನಮ್ಮ ಸುತ್ತಮುತ್ತಲಿನ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಈ ಪಂಚ ಚಟುವಟಿಕೆಯುಕ್ತ ಶಿಕ್ಷಣ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ. ಮೊಬೈಲ್ ಫೋನ್ನಲ್ಲಿ ಗೇಮ್ ಆಡುವುದರ ಬದಲಿಗೆ ಸುಮುತ್ತಲಿನ ಪರಿಸರ ನೋಡಿ ಕಲಿಯುವುದು ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಿದೆ. ಬೇಸಿಗೆ ಸಂಭ್ರಮದ ಚಟುವಟಿಕೆ ಶಿಕ್ಷಣವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ವಿಸ್ತರಿಸಿದರೆ ಅಲ್ಲಿನ ಮಕ್ಕಳಿಗೂ ಹೆಚ್ಚು ಅನುಕೂಲವಾಗಲಿದೆ ಎಂಬುದು ಶಿಕ್ಷಣಪ್ರೇಮಿಗಳ ಅಭಿಮತ.
ಬರಗಾಲದ ಬಿಸಿಯೂಟ ಯೋಜನೆ: ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ 146 ಶಾಲೆಗಳ ವಿದ್ಯಾರ್ಥಿಗಳಿಗೆ ಬರಗಾಲದ ಬಿಸಿಯೂಟದ ಯೋಜನೆಯನ್ನು ಏ.11 ರಿಂದ ಮುಂದುವರೆಸಲಾಗಿದೆ. ನೀರಾವರಿ ಪ್ರದೇಶವನ್ನು ಹೊರತುಪಡಿಸಿ ಮಳೆಯಾಶ್ರಿತ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ ತಿಳಿಸಿದ್ದಾರೆ.
146 ಶಾಲೆಗಳ ಸುಮಾರು 5 ಸಾವಿರ ವಿದ್ಯಾರ್ಥಿಗಳು ಈ ಬಿಸಿಯೂಟ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ವೇಳೆ ಮಕ್ಕಳಿಗೆ ಆಟ ಹಾಗೂ ಸ್ವಲ್ಪ ಪಾಠವನ್ನು ಕೂಡ ಕಲಿಸಲಾಗುತ್ತಿದೆ ಅವರು ವಿವರಿಸಿದರು.
ಪ್ರತಿನಿತ್ಯ ಒಂದೊಂದು ಶಾಲೆಗೆ ಡಿಡಿಪಿಐ, ಬಿಇಒ, ಬಿಆರ್ಸಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ, ಸಿಆರ್ಪಿ, ಇಸಿಒ ಸೇರಿದಂತೆ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಬೇಸಿಗೆ ಸಂಭ್ರಮ ಕಾರ್ಯಕ್ರಮ ವಿನೂತನವಾಗಿದ್ದು, ಅಕ್ಷರಶಃ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ.