ಚಿತ್ರದುರ್ಗ
ಜಿಲ್ಲೆಯ ಜಾನುವಾರುಗಳ ರಕ್ಷಣೆ ಹಾಗೂ ರೈತರ ಹಿತದೃಷ್ಟಿಯಿಂದ, ಬೇಡಿಕೆಗೆ ಅನುಗುಣವಾಗಿ ವಾಹನದ ಮೂಲಕ, ಪ್ರತಿ ಕೆ.ಜಿ. ಮೇವಿಗೆ ರೂ. 2 ರಂತೆ ರಿಯಾಯಿತಿ ದರದಲ್ಲಿ ಆಯಾ ಗ್ರಾಮಗಳಿಗೆ ಮೇವು ಪೂರೈಸಲಾಗುತ್ತಿದ್ದು, ಇದಕ್ಕಾಗಿ ಪ್ರತಿ ತಾಲ್ಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂ ಹಾಗೂ ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಜಿಲ್ಲೆಯಲ್ಲಿನ ಬರ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಜನ ಹಾಗೂ ಜಾನುವಾರುಗಳ ಹಿತರಕ್ಷಣೆಗೆ ಹಾಗೂ ಬರ ಪರಿಹಾರ ಕಾರ್ಯಗಳಿಗೆ ಜಿಲ್ಲಾಡಳಿತ ಆದ್ಯತೆ ನೀಡಿದೆ. ಜಾನುವಾರಗಳ ರಕ್ಷಣೆ ನಿಟ್ಟಿನಲ್ಲಿ ಈಗಾಗಲೆ ಜಿಲ್ಲೆಯಲ್ಲಿ ಒಟ್ಟು 06 ಗೋಶಾಲೆಗಳು ಹಾಗೂ 08 ಮೇವು ಬ್ಯಾಂಕ್‍ಗಳನ್ನು ಪ್ರಾರಂಭಿಸಲಾಗಿದೆ.
ಪಶುಪಾಲನಾ ಇಲಾಖೆಯವರು ಜಿಲ್ಲೆಯಲ್ಲಿ ಮೇವಿನ ಲಭ್ಯತೆ ಕುರಿತು ಪ್ರತಿಯೊಂದು ಗ್ರಾಮವಾರು ಸಮೀಕ್ಷೆ ಕೈಗೊಂಡಿದ್ದು, ಬೇಡಿಕೆಗೆ ಅನುಗುಣವಾಗಿ ರೈತರಿಗೆ ರಿಯಾಯಿತಿ ದರದಲ್ಲಿ ಪ್ರತಿ ಕೆ.ಜಿ.ಗೆ ಕೇವಲ ರೂ. 2 ರಂತೆ ಮೇವು ಪೂರೈಕೆ ಮಾಡಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
5-6 ರೈತರು ಮೇವಿನ ಅಗತ್ಯತೆ ಬಗ್ಗೆ ಸಹಾಯವಾಣಿಗೆ ಕರೆ ಮಾಡಿ ಬೇಡಿಕೆ ಸಲ್ಲಿಸಿದಲ್ಲಿ, ಆಯಾ ಗ್ರಾಮಕ್ಕೆ ಬೇಡಿಕೆಗೆ ಅನುಗುಣವಾಗಿ ವಾಹನದ ಮೂಲಕ ಮೇವು ತಲುಪಿಸಲಾಗುವುದು. ಇದಕ್ಕಾಗಿ ಈಗಾಗಲೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮೇವು ಸಮಸ್ಯೆ ನಿರ್ವಹಣೆಗೆ ಈಗಾಗಲೆ ಎಲ್ಲ ತಾಲ್ಲೂಕು ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ರೈತರು ಮೇವು ಪಡೆಯಲು ಹಾಗೂ ಮೇವಿನ ಸಮಸ್ಯೆ ಕುರಿತು ಮಾಹಿತಿ ನೀಡಲು ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು
ಪಶುಪಾಲನಾ ಇಲಾಖೆಯವರು ಹೋಬಳಿವಾರು ಎಲ್ಲ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ಮೇವಿನ ಲಭ್ಯತೆ, ಜಾನುವಾರುಗಳ ಸ್ಥಿತಿಗತಿ, ಮೇವಿನ ಅಗತ್ಯತೆ ಕುರಿತಂತೆ ರೈತರ ಅಭಿಪ್ರಾಯ ಪಡೆದು ವಾರದ ಒಳಗಾಗಿ ಮತ್ತೊಮ್ಮೆ ವರದಿ ಸಲ್ಲಿಸಬೇಕು. ಆಯಾ ಗ್ರಾಮಗಳಿಗೆ ಗ್ರಾಮ ಲೆಕ್ಕಿಗರು ಹಾಗೂ ಪೊಲೀಸ್ ಬಂದೋಬಸ್ತ್ ಮೇಲ್ವಿಚಾರಣೆಯಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ವಾಹನದಲ್ಲಿ ಮೇವು ಪೂರೈಸಬೇಕು.
ಒಂದೇ ಬಗೆಯ ಮೇವು ಪೂರೈಸದೆ, ವಿವಿಧ ಮೇವು ನೀಡಬೇಕು. ಪ್ರತಿನಿತ್ಯ ವಾಹನ ಸಂಚರಿಸುವ ಗ್ರಾಮಗಳು, ಪೂರೈಸಲಾದ ಮೇವಿನ ಪ್ರಮಾಣ, ರೈತರು ಹಾಗೂ ಜಾನುವಾರುಗಳ ಸಂಖ್ಯೆಯ ವಿವರವುಳ್ಳ ದೈನಂದಿನ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾನುವಾರು ಆರೋಗ್ಯ ತಪಾಸಣೆ
ಜಿಲ್ಲೆಯಲ್ಲಿ ಸದ್ಯ ಗೋಶಾಲೆಗಳಿಗೆ ಬರುವ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡುವ ವ್ಯವಸ್ಥೆ ಜಾರಿಯಲ್ಲಿದ್ದು, ಇನ್ನು ಮುಂದೆ ಪ್ರತಿ ಹೋಬಳಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾನುವಾರುಗಳ ಆರೋಗ್ಯ ತಪಾಸಣೆ ಶಿಬಿರಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳುವಂತೆ ಪಶುಪಾಲನೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸೂಕ್ತ ಔಷಧಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ದಾಸ್ತಾನು ಇರಿಸಿ, ಔಷಧಿ ಅಥವಾ ಲಸಿಕೆಯ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮೇವು ಬೆಳೆಯಲು ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮೇವಿನ ಬೀಜದ ಮಿನಿಕಿಟ್‍ಗಳನ್ನು ಹಾಲು ಉತ್ಪಾದಕರ ಸಂಘಗಳ ಮೂಲಕ ರೈತರಿಗೆ ತಲುಪಿಸಲು ಕ್ರಮ ಕೈಗೊಂಡು, ಇದು ಎಷ್ಟರ ಮಟ್ಟಿಗೆ ಸದ್ಬಳಕೆಯಾಗಿದೆ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಗೋಕಟ್ಟೆಗಳಿಗೆ ನೀರು ತುಂಬಿಸಿ :
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗಾಗಿ ಗೋಕಟ್ಟೆಗಳನ್ನು ನಿರ್ಮಿಸಲಾಗಿದ್ದು, ಆಯಾ ಗ್ರಾಮ ಪಂಚಾಯತಿಯ ಪಿಡಿಒ ಗಳು ತಪ್ಪದೆ ಗೋಕಟ್ಟೆಗಳಿಗೆ ನೀರನ್ನು ತುಂಬಿಸಬೇಕು. ಸ್ಥಳೀಯವಾಗಿ ನೀರು ಲಭ್ಯವಿಲ್ಲದಿದ್ದಲ್ಲಿ, ಟ್ಯಾಂಕರ್ ಮೂಲಕವಾಗಿ ಆದರೂ ಗೋಕಟ್ಟೆಗಳನ್ನು ತುಂಬಿಸಲೇಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು
ಕೆಲವೆಡೆ ಗೋಕಟ್ಟೆಗಳು ಒಡೆದಿದ್ದು, ನೀರಿನ ಸೋರಿಕೆಯಾಗುತ್ತಿದ್ದರೆ, ಇನ್ನು ಕೆಲವೆಡೆ ಜಾನುವಾರುಗಳಿಗೆ ಎಟುಕದಂತಿವೆ. ಗೋಕಟ್ಟೆಗಳಲ್ಲಿನ ನೀರು ಸಣ್ಣ ಜಾನುವಾರುಗಳಿಗೂ ಕುಡಿಯಲು ಎಟಕುವಂತಿರಬೇಕು. ಗೋಕಟ್ಟೆಯ ನೀರನ್ನು ಕೆಲವರು ಬಟ್ಟೆ ತೊಳೆಯಲು ಉಪಯೋಗಿಸುತ್ತಿರುವುದು ಕಂಡುಬಂದಿದ್ದು, ಸೋಪಿನ ನೀರು, ಮಿಶ್ರಣವಾದಲ್ಲಿ, ಜಾನುವಾರುಗಳು ಕುಡಿಯುವುದಿಲ್ಲ. ಸ್ಥಳೀಯ ಪಿಡಿಒ ಗಳು
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು
ಸಭೆಯಲ್ಲಿ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ