ಚಳ್ಳಕೆರೆ
ಪ್ರಸ್ತುತ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಚಳ್ಳಕೆರೆ ತಾಲ್ಲೂಕು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಅಗ್ರಶ್ರೇಣಿಯಲ್ಲಿದ್ದು, ಉತ್ತಮ ಫಲಿತಾಂಶ ಬರಲು ಕಾರಣ ಕರ್ತರಾದ ಪ್ರೌಢಶಾಲೆಯ ಎಲ್ಲಾ ಶಿಕ್ಷಕರನ್ನು ಶ್ರಮವಹಿಸಿ ಅಭ್ಯಾಸ ಮಾಡಿ, ಗುಣಾತ್ಮಕ ಫಲಿತಾಂಶ ಹೊಂದಲು ಕಾರಣಕರ್ತರಾದ ವಿದ್ಯಾರ್ಥಿಗಳನ್ನು ಇಲಾಖೆ ಪರವಾಗಿ ಅಭಿನಂದಿಸುವುದಾಗಿ ಕ್ಷೇತ್ರದ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು.
ಅವರು, ಮಂಗಳವಾರ ಇಲ್ಲಿನ ರೋಟರಿ ಬಾಲಭವನದಲ್ಲಿ ಪ್ರಸ್ತುತ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಯೋಜನೆಗಳು, ಶಿಕ್ಷಕರ ಮಾರ್ಗದರ್ಶನ, ಶಾಲಾ ಪ್ರಾರಭೋತ್ಸವ, ಸೇವಾ ಅವಧಿಯ ದಾಖಲೆ ತಂತ್ರಾಂಶ, ಎಸ್ಎಟಿಎಸ್ ಹಾಗೂ ಶಾಲೆಗೆ ದಾಖಲಾತಿ ಹೆಚ್ಚಿಗೆ ಮಾಡುವ ಕುರಿತು ಕರೆಯಲಾಗಿದ್ದ ಮುಖ್ಯ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ವರ್ಷದ ಫಲಿತಾಂಶ ಶಿಕ್ಷಕರಿಗೆ ಇಲಾಖೆಯ ಮೇಲೆ ಇರುವ ಕಾಳಜಿಯನ್ನು ತೋರಿಸುತ್ತದೆ. 2019-20ನೇ ಸಾಲಿನಲ್ಲೂ ಸಹ ಇದೇ ಫಲಿತಾಂಶ ಪುನಾವರ್ತನೆಯಾಗಬೇಕಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಫಲಿತಾಂಶದಲ್ಲಿ ಮುನ್ನಡೆ ಸಾಧಿಸಿದ್ದು ಸಂತಸ ತಂದಿದೆ ಎಂದರು.
ಈ ವರ್ಷದ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು 2019-20ನೇ ಸಾಲಿನ ಫಲಿತಾಂಶವನ್ನು ಮತ್ತಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಈಗಾಗಲೇ ಶಿಕ್ಷಣ ಇಲಾಖೆ 2019-20ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮದ ಬಗ್ಗೆ ಹಲವಾರು ರೂಪರೇಷಗಳನ್ನು ಸಿದ್ದ ಪಡಿಸಿದ್ದು, ಎಲ್ಲಾ ಪ್ರೌಢಶಾಲಾ ಶಿಕ್ಷಕರು ಇಲಾಖೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಶಿಕ್ಷಣ ಸಂಯೋಜಕ ಗಿರೀಶ್ಬಾಬು, ಚಂದ್ರಹಾಸ್, ಮಲ್ಲಿಕಾರ್ಜುನ, ಸಿಆರ್ಪಿಗಳಾದ ಎನ್.ಮಾರಣ್ಣ, ನಿರಂಜನ, ಮೂಡ್ಲಪ್ಪ ಮುಂತಾದವರು ಉಪಸ್ಥಿತರಿದ್ದರು.