ಹುಳಿಯಾರು
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಮತ್ತು ಲೋಕಮಾತೆ ಶ್ರೀ ಕಾಳಿಕಾಂಬ ದೇವಿಯವರ 10 ದಿನಗಳ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ನಡೆದ ಚನ್ನಬಸವೇಶ್ವರ ಸ್ವಾಮಿಯವರ ವೈಭವದ ರಥೋತ್ಸವದೊಂದಿಗೆ ತೆರೆ ಬಿದ್ದಿತು.
ಧ್ವಜಾರೋಹಣ ಮೂಲಕ ಆರಂಭವಾದ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಮತ್ತು ಲೋಕಮಾತೆ ಶ್ರೀ ಕಾಳಿಕಾಂಬ ದೇವಿಯವರ ಜಾತ್ರಾ ಮಹೋತ್ಸವವು ಅಗ್ನಿಕುಂಡಸೇವೆ, ಶ್ರೀಕಾಳಮ್ಮನವರಿಗೆ ಕಂಕಣಧಾರಣೆ, ಮಧುವಣಗಿತ್ತಿಸೇವೆ, ದಮ್ಮಡಿಹಟ್ಟಿ ಶ್ರೀಈರಬೊಮ್ಮಕ್ಕ ದೇವಿ , ಗೌಡಗೆರೆ ಶ್ರೀದುರ್ಗಮ್ಮದೇವಿ, ಹುಳಿಯಾರು ಶ್ರೀದುರ್ಗಮ್ಮ ದೇವರುಗಳ ಕೂಡು ಭೇಟಿ, ಮಡಲಕ್ಕಿಸೇವೆ, ಕಳಸ, ಉಯ್ಯಾಲೆ ಉತ್ಸವ, ಸಿಡಿ, ಓಕಳಿ ಸೇವೆ, ಪುರದಮಠಕ್ಕೆ ದಯಮಾಡಿಸುವುದು, ಗಂಗಾಪ್ರವೇಶ, ಮುಂತಾದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಯಿತು.
ಗಣಪತಿ ಪೂಜೆ, ಪುಣ್ಯಾಹ, ದಿಕ್‍ಬಲಿ ಹರಣ ಮತ್ತು ಅಷ್ಟೋತ್ತರ ಪೂಜೆ ಮುಂತಾದ ಪೂಜಾ ಕೈಂಕರ್ಯದೊಂದಿಗೆ ಆರಂಭವಾದ ಶ್ರೀ ಸ್ವಾಮಿಯವರ ಮಹಾ ರಥೋತ್ಸವಕ್ಕೆ ದೇವಸ್ಥಾವದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ರಂಗು ರಂಗಿನ ಬಾವುಟಗಳು, ತಳಿರು ತೋರಣಗಳು, ಎಳನೀರಿನ ಗೊಂಚಲುಗಳು, ಬಾಳೆಗೊನೆ, ಕೊಬ್ಬರಿಹಾರ ಹಾಗೂ ಹೂವಿನ ಹಾರಗಳಿಂದ ಶೃಂಗಾರಗೊಂಡು, ಮಂಗಳ ವಾದ್ಯಗಳೊಂದಿಗೆ ಸಾಗಿಬಂದ ಅದ್ದೂರಿ, ಆಕರ್ಷಕ, ವೈಭವದ ಮಹಾ ರಥೋತ್ಸವವನ್ನು ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು.
ಭಕ್ತರು ಅನತಿ ದೂರದಿಂದಲೇ ಬಾಳೆ ಹಣ್ಣು ಹಾಗೂ ನಾಣ್ಯಗಳನ್ನು ರಥದ ಕಡೆ ಎಸೆಯುವ ಮೂಲಕ ತಮ್ಮ ಭಕ್ತಿಬಾವ ಸಮರ್ಪಿಸದರು. ನಂತರ ಭಕ್ತರು ಶ್ರೀ ಸ್ವಾಮಿಯವರಿಗೆ ಹಣ್ಣು-ಕಾಯಿ ಪೂಜೆ ಮಾಡಿಸಿಕೊಂಡು ಹಿಂದಿರುಗುವ ಮೂಲಕ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಮತ್ತು ಲೋಕಮಾತೆ ಶ್ರೀ ಕಾಳಿಕಾಂಬ ದೇವಿಯವರ 10 ದಿನಗಳ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.