ಹಸುಗಳನ್ನು ಸಾಕುವವರು ತಮ್ಮ ಹಸುಗಳು ಯಥೇಚ್ಚವಾಗಿ ಹಾಲು ಕೊಡಲೆಂದು ನಾನಾ ವಿಧಗಳನ್ನು ಅನುಸರಿಸುವುದುಂಟು. ಅದರಲ್ಲೂ ಮುಖ್ಯವಾಗಿ, ಲಾಭದ ಉದ್ದೇಶವಿದ್ದರೂ,
ತಾವು ಸಾಕಿದ ಹಸುಗಳನ್ನು ಪ್ರೀತಿಸುವ ಹೈನುಗಾರರು ಸಾಮಾನ್ಯವಾಗಿ ಹೆಚ್ಚು ಹಾಲು ಪಡೆಯಲು, ಹಸುಗಳಿಗೆ ಯಾವುದೇ ರೀತಿಯಲ್ಲಿ ಕಿರಿಕಿರಿ ಉಂಟಾಗದ ವಿಧಾನಗಳನ್ನಷ್ಟೇ ಅನುಸರಿಸುತ್ತಾರೆ.
ಇದು ನಮ್ಮ ದೇಶ ಮಾತ್ರವಲ್ಲ ಎಲ್ಲಾ ದೇಶಗಳಿಗೂ ಅನ್ವಯಿಸುತ್ತದೆ. ಇದೇ ದಾರಿಯಲ್ಲಿ ನಡೆದಿರುವ ಟರ್ಕಿಯ ರೈತರೊಬ್ಬರು ತಮ್ಮ ಹಸುಗಳು ಹೆಚ್ಚು ಹಾಲನ್ನು ನೀಡುವಂತೆ ಮಾಡಲು ಒಂದು ವಿಶಿಷ್ಟವಾದ, ಆದರೆ ‘ಕುಶಲ’ ತಂತ್ರವನ್ನು ಕಂಡು ಹಿಡಿದಿದ್ದಾರೆ.
ಅಕ್ಸರಯ್ ಮೂಲದ ಇಝೆತ್ ಕೊಚಾಕ್ ಎಂಬ ಆ ರೈತ, ತಮ್ಮ ಹಸುಗಳಿಗೆ ಅವು ಕೊಟ್ಟಿಗೆಯಿಂದ ಹೊರಗೆ ಇವೆ ಎಂಬ ಅನುಭವ ನೀಡಲು ವರ್ಚುವಲ್ ರಿಯಾಲಿಟಿ ಹೆಡ್‍ಸೆಟ್‍ಗಳನ್ನು ಅಳವಡಿಸಿದ್ದಾರೆ. ತಮ್ಮ ಹಸುಗಳು ಚಳಿಗಾಲದ ಹವಮಾನದಿಂದ ಪ್ರಭಾವಿತರಾಗುತ್ತಿರುವುದನ್ನು ಅರಿತುಕೊಂಡ ಬಳಿಕ ಅವರು ಈ ತಂತ್ರವನ್ನು ಪ್ರಯೋಗಿಸುವ ಆಲೋಚನೆಗೆ ಮುಂದಾದರು.
ಆಹ್ಲಾದಕರ ದೃಶ್ಯಗಳು ಮತ್ತು ಶಬ್ಧಗಳು ಹಸುಗಳಿಗೆ ಸಂತೋಷ ನೀಡುತ್ತವೆ ಮತ್ತು ಅದರಿಂದಾಗಿ ಅವುಗಳು ಹೆಚ್ಚು ಹಾಲನ್ನು ಕೂಡ ಉತ್ಪಾದಿಸುತ್ತವೆ ಎಂಬುವುದು ಅಧ್ಯಯನ ಒಂದರಿಂದ ತಿಳಿದುಬಂದಿದೆ.
ತಮ್ಮ ಹಸುಗಳು ಪ್ರಕಾಶಮಾನ ಬಿಸಿಲು ಇರುವ ಹಚ್ಚಹಸುರಿನ ಬಯಲಲ್ಲಿ ಇವೆ ಎಂದು ಭಾವಿಸಿಕೊಳ್ಳುವಂತೆ ಮಾಡಲು ತಾನು ವರ್ಚುವಲ್ ರಿಯಾಲಿಟಿ ಕನ್ನಡಕಗಳನ್ನು ಬಳಸಿದ್ದಾಗಿ ಇಝೆತ್ ಕೊಚಾಕ್ ಹೇಳಿದ್ದಾರೆ.
“ಅವುಗಳು ಹಸಿರು ಹುಲ್ಲುಗಾವಲುಗಳನ್ನು ವೀಕ್ಷಿಸುತ್ತಿವೆ ಮತ್ತು ಅದು ಅವುಗಳಿಗೆ ಭಾವನಾತ್ಮಕ ಉತ್ತೇಜನ ನೀಡುತ್ತವೆ. ಅವುಗಳು ಕಡಿಮೆ ಒತ್ತಡವನ್ನು ಹೊಂದಿವೆ” ಎಂದು ಇಝೆತ್ ಕೊಚಾಕ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಕೊಚಾಕ್ ಅವರ ಈ ಪ್ರಯತ್ನ ನಿಜಕ್ಕೂ ಫಲ ನೀಡಿದೆ.
ಒಂದು ದಿನಕ್ಕೆ 22 ಲೀಟರ್ ಹಾಲು ನೀಡುತ್ತಿದ್ದ ಅವರ ಹಸುಗಳು, ಇದೀಗ ಒಂದು ದಿನಕ್ಕೆ 27 ಲೀಟರ್ ಹಾಲು ನೀಡಲು ಆರಂಭಿಸಿವೆ, ಹಾಗಾಗಿ ಈ ತಂತ್ರ ಅವುಗಳ ಮೇಲೆ ಮೋಡಿ ಮಾಡಿದೆ ಎಂದು ಹೇಳಲು ಅಡ್ಡಿಯಿಲ್ಲ.
ಇಝೆತ್ ಕೊಚಾಕ್ ವರ್ಚುವಲ್ ರಿಯಾಲಿಟಿ ಕನ್ನಡಕದ ತಂತ್ರವನ್ನು ಬಳಸುವುದಕ್ಕಿಂತ ಮೊದಲು, ಅವರು ತಮ್ಮ ಹಸುಗಳನ್ನು ಸಂತೋಷದಿಂದ ಇರುವಂತೆ ಮಾಡಲು ಇನ್ನೊಂದು ತಂತ್ರ ಬಳಸುತ್ತಿದ್ದರಂತೆ. ಅದೇನು ಗೊತ್ತೇ? ಹಸುಗಳಿಗೆ ಶಾಸ್ತ್ರೀಯ ಸಂಗೀತ ಕೇಳಿಸುವುದು.
ಅವರೀಗ ತಮ್ಮ ವರ್ಚುವಲ್ ರಿಯಾಲಿಟಿ ಕನ್ನಡಕದ ತಂತ್ರದಿಂದ ಎಷ್ಟು ತೃಪ್ತರಾಗಿದ್ದಾರೆ ಎಂದರೆ , ಅಂತಹ ಇನ್ನೂ ಹತ್ತು ಕನ್ನಡಕಗಳನ್ನು ಖರೀದಿಸುವ ಆಲೋಚನೆ ಅವರಿಗೆ ಬಂದಿದೆಯಂತೆ.
ಹಾಗಂತ ಇದು ಮಾಮೂಲಿ ವರ್ಚುವಲ್ ರಿಯಾಲಿಟಿ ಹೆಡ್‍ಸೆಟ್‍ಗಳು ಅಲ್ಲ, ಕೊಚಾಕ್ ಅವರು ತಮ್ಮ ಹಸುಗಳ ಮೇಲೆ ಅವುಗಳನ್ನು ಪ್ರಯೋಗಿಸುವ ಮುನ್ನ ಪಶುವೈದ್ಯ ಸಹಕಾರದಿಂದ ಅಭಿವೃದ್ಧಿಪಡಿಸಲಾಯಿತು ಮತ್ತು ಮಾಸ್ಕೋದ ಫಾರ್ಮ್ ಒಂದರಲ್ಲಿ ಪರೀಕ್ಷೆಗೂ ಒಳಪಡಿಸಲಾಗಿದೆ.
ಈ ವರ್ಚುವಲ್ ರಿಯಾಲಿಟಿ ಹೆಡ್ಸೆಟ್ ಅನ್ನು ಅಭಿವೃದ್ಧಿ ಪಡಿಸಲು ಹಲವಾರು ರೈತರು ಮಾಸ್ಕೋ ಸಮೀಪದ ಕ್ರಾಸ್ನೋಗೋರ್ಸ್ಕ್ ಫಾರ್ಮ್‍ನಲ್ಲಿ ಪಶು ವೈದ್ಯರು, ಸಲಹೆಗಾರರು ಮತ್ತು ಡೆವಲಪರ್‌ಗಳ ಜೊತೆ ಕೆಲಸ ಮಾಡಿದ್ದಾರೆ.
ಈ ಹಾರ್ಡ್‍ವೇರ್, ಮನುಷ್ಯರು ಬಳಸುವ ಒಂದು ಸಾಮಾನ್ಯವಾದ ವರ್ಚುವಲ್ ರಿಯಾಲಿಟಿ ಸೆಟ್‍ನಿಂದ ಮಾಡಲ್ಪಟ್ಟಿದೆ. ಆದರೆ ಅದನ್ನು ಹಸುಗಳ ತಲೆಗೆ ಹೊಂದುವ ರೀತಿಯಲ್ಲಿ ಅಚ್ಚು ಮಾಡಲಾಗಿದೆ.
ಅದನ್ನು ಮಾಡಿದ ಬಳಿಕ, ತಜ್ಞರು ವರ್ಚುವಲ್ ರಿಯಾಲಿಟಿ ಹೆಡ್ಸೆಟ್ ಅನ್ನು ಹಸುವಿನ ದೃಷ್ಟಿಗೆ ಹೆಚ್ಚು ಸೂಕ್ತವಾಗುವಂತೆ ಮಾಡಲು, ಸಾಫ್ಟ್‍ವೇರ್‍ನಲ್ಲಿ ಬಣ್ಣದ ಪ್ಯಾಲೆಟ್ ಅನ್ನು ಬದಲಾಯಿಸಿದರು. ಹಸುಗಳಿಗೆ ಕೆಂಪು ಅಥವಾ ಹಸಿರು ಕಾಣಿಸದ ಕಾರಣ , ತಜ್ಞರು ಬಣ್ಣಗಳನ್ನು ತಿರುಚುವುದು ಅಗತ್ಯವಾಗಿತ್ತು.
ಒಂದು ಆಹ್ಲಾದಕರ ವಾತಾವರಣದಲ್ಲಿ ಹಸುಗಳು ಹೆಚ್ಚು ಸಂತೋಷದಿಂದ ಇರುತ್ತವೆ ಹಾಗೂ ಅಧಿಕ ಹಾಲನ್ನು ಉತ್ಪಾದನೆ ಮಾಡುತ್ತವೆ ಎಂಬುವುದು ಈ ಒಟ್ಟಾರೆ ಅಧ್ಯಯನದಿಂದ ತಿಳಿದು ಬಂತು.
“ಹಿಂಡಿನಲ್ಲಿ ಆತಂಕವನ್ನು ಕಡಿಮೆ ಮಾಡಿದೆ ಮತ್ತು ಒಟ್ಟಾರೆ ಭಾವನಾತ್ಮಕ ಮನಸ್ಥಿತಿಯಲ್ಲಿ ಸುಧಾರಣೆ ಆಗಿದೆ” ಎಂದು ಅಧ್ಯಯನ ತಿಳಿಸಿದೆ.