ಚಿತ್ರದುರ್ಗ:
ಭೂಕಂಪ, ಚಂಡಮಾರುತ, ಸುನಾಮಿ ಸಂಭವಿಸಿದಾಗ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ನೊಂದವರಿಗೆ ನೆರವು ನೀಡುವಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ಜಿಲ್ಲಾಸ್ಪತ್ರೆ ಬಿ.ಸಿ.ರಾಯ್ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ರೆಡ್‍ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜಿನಿವಾದಲ್ಲಿ ಜೀನ್‍ಹೆನ್ರಿ ಡುನಾಂಟ್ ಎನ್ನುವವರು ನೊಂದವರ ನೆರವಿಗಾಗಿ ಹುಟ್ಟು ಹಾಕಿದ ವಿಶ್ವರೆಡ್‍ಕ್ರಾಸ್ ಸಂಸ್ಥೆ ಪ್ರಪಂಚದ ಎಲ್ಲಿಯಾದರೂ ಸಾವು-ನೋವು ಸಂಭವಿಸಿದಾಗ ನೆರವಿಗೆ ಧಾವಿಸುತ್ತದೆ. ಈ ಸಂಸ್ಥೆ ರಕ್ತದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತ ಬರುತ್ತಿದೆ. ದೇಹದ ಪ್ರತಿಯೊಂದು ಅಂಗಗಳನ್ನು ಮತ್ತೊಬ್ಬರಿಗೆ ದಾನ ಮಾಡಬಹುದು. ನೇತ್ರದಾನ, ರಕ್ತದಾನ ತುಂಬಾ ಅತ್ಯವಶ್ಯಕವಾಗಿ ಬೇಕು.
ಇದರಿಂದ ಮತ್ತೊಬ್ಬರ ಪ್ರಾಣ ಉಳಿಸಿ ಅಂಧರ ಬಾಳಿಗೆ ಬೆಳಕಾಗಬಹುದು. ಹಾಗಾಗಿ ಯಾರಾದರೂ ಮೃತಪಟ್ಟಾಗ ಕಣ್ಣನ್ನು ಮಣ್ಣುಪಾಲು ಮಾಡದೆ ದಾನ ಮಾಡುವಲ್ಲಿ ಎಲ್ಲರೂ ಮುಂದಾಗಬೇಕೆಂದು ಮನವಿ ಮಾಡಿದರು.ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ನಿರ್ದೇಶಕಿ ಡಾ. ಆರ್.ಗೌರಮ್ಮ ಮಾತನಾಡುತ್ತ ಜೀನ್‍ಹೆನ್ರಿ ಡುನಾಂಟ್ ತಮ್ಮ ಜೀವನದಲ್ಲಾದ ಅನಭವದಿಂದ ನಾನು ಮತ್ತೊಬ್ಬರಿಗೆ ಏಕೆ ನೆರವಾಗಬಾರದು ಎಂದುಕೊಂಡು 1959 ರಲ್ಲಿ ಜಿನಿವಾದಿಂದ ಭಾರತಕ್ಕೆ ಬಂದರು.
1963 ರಲ್ಲಿ ನಡೆದ ಅಂತರಾಷ್ಟ್ರೀಯ ಸಭೆಯಲ್ಲಿ ಹದಿನೆಂಟು ರಾಷ್ಟ್ರಗಳವರು ಪಾಲ್ಗೊಂಡು ಚರ್ಚಿಸಿ ನಂತರ ವಿಶ್ವರೆಡ್‍ಕ್ರಾಸ್ ಸಂಸ್ಥೆಯನ್ನು ಹುಟ್ಟುಹಾಕಲಾಯಿತು ಎಂದು ಹೇಳಿದರು.
235 ರೆಡ್‍ಕ್ರಾಸ್ ಸಂಸ್ಥೆಗಳಿದ್ದು, 18 ಲಕ್ಷ ಸದಸ್ಯರಿದ್ದಾರೆ. ಭಾರತದಲ್ಲಿ 1920 ರಲ್ಲಿ ರೆಡ್‍ಕ್ರಾಸ್ ಸಂಸ್ಥೆ ಆರಂಭವಾಯಿತು. ಕರ್ನಾಟಕದಲ್ಲಿ 1921 ರಲ್ಲಿ ಸಂಸ್ಥೆ ಹುಟ್ಟಿಕೊಂಡಿತು. ಮಾನವೀಯತೆ, ನಿಸ್ಪಕ್ಷಪಾತ, ಐಕ್ಯಮತ ಹೀಗೆ ಏಳು ತತ್ವಗಳನ್ನು ಒಳಗೊಂಡಿರುವ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ನೊಂದವರ ಪರವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ ಬರುತ್ತಿದೆ ಎಂದು ಗುಣಗಾನ ಮಾಡಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹತ್ತೊಂಬತ್ತು ವರ್ಷಗಳಿಂದಲೂ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸುತ್ತಿದೆ. ಅಪಘಾತ, ಹೆರಿಗೆ, ಆಪರೇಷನ್ ಇಂತಹ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯನ್ನು ನೀಗಿಸಿ ಅಮೂಲ್ಯವಾದ ಪ್ರಾಣ ಉಳಿಸುವ ಕೆಲಸ ಮಾಡುತ್ತಿದೆ ಕಾಲೇಜು ವಿದ್ಯಾರ್ಥಿಗಳಿಗೆ ರಕ್ತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಸಭಾಪತಿ ವೈ.ಬಿ.ಮಹೇಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು.ಆರ್.ಎಂ.ಓ. ಡಾ.ಆನಂದಪ್ರಕಾಶ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಪಾಧ್ಯಕ್ಷ ಎಸ್.ವೀರೇಶ್, ನಿರ್ದೇಶಕಿ ಡಾ.ಟಿ.ಸಿ.ಹರಿಣಿ, ಕಾರ್ಯದರ್ಶಿ ಎನ್.ಮಜಹರ್‍ಉಲ್ಲಾ ವೇದಿಕೆಯಲ್ಲಿದ್ದರು.ಜಾನಪದ ಹಾಡುಗಾರ ಹರೀಶ್ ಪ್ರಾರ್ಥಿಸಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕತ ಶ್ರೀನಿವಾಸ್ ಮಳಲಿ ಸ್ವಾಗತಿಸಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
