ಬೆಂಗಳೂರು
ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುತ್ತಿದ್ದ ಶರ್ಮಾ ಟ್ರಾವೆಲ್ಸ್ನ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಮತ್ತು ಅಕ್ಕಪಕ್ಕದ ವಾಹನ ಚಾಲಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿ ಸುಮಾರು 40 ಮಂದಿ ಪ್ರಯಾಣಿಕರು ಪಾರಾಗಿದ್ದಾರೆ.
ಬೆಂಗಳೂರಿನಿಂದ ತಮಿಳುನಾಡಿನ ತಿಪಟ್ಟುಗೆ ಗುರುವಾರ ಮುಂಜಾನೆ 4ರ ವೇಳೆ ಹೋಗುತ್ತಿದ್ದ ಶರ್ಮಾ ಟ್ರಾವೆಲ್ಸ್ನ ಬಸ್ಗೆ ಮಾರ್ಗ ಮಧ್ಯೆ ತಮಿಳುನಾಡು ಗಡಿ ಶೂಲಗಿರಿ ಸಮೀಪ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬಸ್ ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡ ಕೂಡಲೇ ಇದನ್ನು ಅಕ್ಕಪಕ್ಕದ ವಾಹನ ಸವಾರರು ನೋಡಿದ್ದು, ತಕ್ಷಣ ಬಸ್ ಚಾಲಕನಿಗೆ ತಿಳಿಸಿದ್ದಾರೆ. ಕೂಡಲೇ ಪ್ರಯಾಣಿಕರನ್ನು ಚಾಲಕ ಬಸ್ಸಿನಿಂದ ಕೆಳಗಿಳಿಸಿದ್ದಾನೆ. ಈ ಮೂಲಕ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಗಿನ ಜಾವ ಆದ್ದರಿಂದ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರುವುದು ತಡವಾಗಿದ್ದು, ಬಸ್ಸಿನಲ್ಲಿದ್ದ ಸಾಮಾನು ಮತ್ತು ಲಗೇಜು ಸಂಪೂರ್ಣ ಸುಟ್ಟು ಹೋಗಿದ್ದು, ಇತ್ತ ಬಸ್ ಕೂಡ ಬೆಂಕಿಗಾಹುತಿಯಾಗಿದೆ. ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಬಸ್ಸಿನ ಎಂಜಿನ್ ದೋಷದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ತಿಳಿದು ಶೂಲಗಿರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ