ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ : ಕೃಷ್ಣ ಬಾಜಪೇಯಿ

ಹಾವೇರಿ

     ತಂಬಾಕು ಉತ್ಪನ್ನಗಳ ಸೇವೆನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಹಾಗೂ ಅನಧಿಕೃತ ಮಾರಾಟ ಕಂಡುಬದಲ್ಲಿ ದಾಳಿ ನಡೆಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.

     ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ತಂಬಾಕು ನಿಯಂತ್ರಣ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಸಾರ್ವಜನಿಕ ಸ್ಥಳಗಳಲ್ಲಿ ಧೂಪಮಾನ ನಿಷೇಧಿಸಲಾಗಿದೆ. ನಿಷೇಧಿತ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಕೂಡಲೇ ದಂಡ ವಿಧಿಸಬೇಕು. 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳ 100 ಮೀಟರ್ ಅಂತರದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಶಿಕ್ಷಾರ್ಹ ಅಪರಾದವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು.

    ಧೂಮಪಾನ ನಿಷೇಧಿಸಲಾಗಿದೆ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚನೆ ನೀಡಬೇಕು. ತಂಬಾಕು ಉತ್ಪನ್ನಗಳ ಅನಧಿಕೃತ ಮಾರಾಟ ಹಾಗೂ ಕಾನೂನು ಉಲ್ಲಂಘನೆ ಪ್ರಕರಣ ಮಾಹಿತಿ ನೀಡಲು ಹೊಸದೊಂದು ಟ್ವಿಟರ್ ಖಾತೆ ರಚಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

     ಬೇಕರಿ ಇತರೆ ದಿನಸಿ ಅಂಗಡಿಗಳಿಗೆ ಸ್ಥಳೀಯ ನಗರಸಭೆ ಹಾಗೂ ಪುರಸಭೆಗಳಿಂದ ಪರವಾನಿಗೆ ಪಡೆದು, ತಂಬಾಕು ವಸ್ತುಗಳ ಮಾರಾಟ ಕಂಡುಬಂದಲ್ಲಿ ಅಂತಹ ಅಂಗಡಿಗಳ ಪರವಾನಿಯನ್ನು ಕೂಡಲೇ ರದ್ದು ಮಾಡಬೇಕು. ಕಾಲಕಾಲಕ್ಕೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕಾರ್ಯಕ್ರಮ ಜಿಲ್ಲಾ ಸಲಹೆಗಾರ ಡಾ.ಸಂತೋಷ್ ಅವರುರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ 2018-19ನೇ ಸಾಲಿನಿಂದ ಜಿಲ್ಲೆಯಲ್ಲಿ ಜಾರಿಗೆ ಬಂದಿದ್ದು, ಕಳೆದ ಜೂನ್ ಮಾಹೆಯಿಂದ ಈವರೆಗೆ 9 ಕಡೆ ದಾಳಿ ನಡೆಸಿ 70 ಪ್ರಕರಣಗಳನ್ನು ದಾಖಲಿಸಿ ರೂ.24.500 ದಂಡ ವಸೂಲಿ ಮಾಡಲಾಗಿದೆ. 65 ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, 29 ಕಡೆಗಳಲ್ಲಿ ಸಮುದಾಯ ಗುಂಪು ಚರ್ಚೆ ನಡೆಸಲಾಗಿದೆ ಹಾಗೂ ವಿವಿಧ ಕಾರ್ಮಿಕರಿಗೆ ಆರು ಕಡೆಗಳಲ್ಲಿ ತರಬೇತಿ ನೀಡಲಾಗಿದೆ. 800 ಜನರಿಗೆ ಜಿಲ್ಲಾ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

      ಶಿಗ್ಗಾಂವ, ಹಾನಗಲ್ ಹಾಗೂ ಹಾವೇರಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳಲ್ಲಿ ಅನಧಿಕೃತವಾಗಿ ತಂಬಾಕು ಉತ್ಪನ್ನಗಳ ಮಾರಾಟ ಕಂಡುಬಂದಿದೆ. ಈ ಕುರಿತು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಗದೀಶ ಅವರು ಮಾತನಾಡಿ, ನಗರದ ಕೇಂದ್ರಿಯ ವಿದ್ಯಾಲಯ ಹಾಗೂ ತರಳಬಾಳು ಶಾಲೆಯನ್ನು ತಂಬಾಕು ಮುಕ್ತ ಶಾಲೆಯಂದು ಗುರುತಿಸಲಾಗಿದೆ.

      ತಂಬಾಕು ರಹಿತ ಶಾಲೆಗಳ ಮಾಹಿತಿ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕೋರಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಸಭೆಗಳಲ್ಲಿ ಸಹ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಹಾಗೂ ಮೇ 31 ರಂದು ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದ್ದು, ಅಂದು ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

      ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಸೇರಿದಂತೆ ಎಲ್ಲ ತಾಲೂಕಾ ಆರೋಗ್ಯಾಧಿಕಾರಿಗಳು, ನಗರಸಭೆ, ಪುರಸಭೆ ಅಧಿಕಾರಿಗಳು, ಆಹಾರ ಸುರಕ್ಷತಾ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link