ಮೇ 11 ರಿಂದ 22 : ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ

ಐ.ಡಿ.ಹಳ್ಳಿ

      ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಹಾಗೂ ವಾಸುದೇವ ಚಾರಿಟಬಲ್ ಟ್ರಸ್ಟ್ ಹುಳಿಗೆರೆ, ಗೊಲ್ಲರಹಟ್ಟಿ ಶಿರಾ ತಾಲ್ಲೂಕು ಇವರ ಸಹಯೋಗದಲ್ಲಿ ಮೇ 11 ರಿಂದ ಮೇ 22 ರ ವರೆಗೆ ಶಾಲಾ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಹಾಗೂ ಹೊರ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾಸುದೇವ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಪದ್ಮಶ್ರೀ ಯಾದವ್ ತಿಳಿಸಿದರು.

     ಸರ್ಕಾರಿ ಶಾಲಾ ಬಡ ವಿದ್ಯಾರ್ಥಿಗಳ ಬೇಸಿಗೆ ರಜಾ ದಿನಗಳಲ್ಲಿ ಪೋಷಕರು ಮಕ್ಕಳನ್ನು ಹೊಲ ಗದ್ದೆಗಳಿಗೆ ಕರೆದುಕೊಂಡು ಹೋಗಿ, ಮಕ್ಕಳು ಬಿಸಿಲಿನ ತಾಪಕ್ಕೆ ಅನಾರೋಗಕ್ಕೆ ತುತ್ತಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಆ ರೀತಿ ಆಗಬಾರದೆಂದು ಸರ್ಕಾರದಿಂದ ರಜೆ ಇರುವ ದಿನಗಳಲ್ಲಿ ಶಾಲಾ ಮಕ್ಕಳಲ್ಲಿರುವ ಕಲೆಗಳನ್ನು ಗುರುತಿಸಿ, ಮಕ್ಕಳಿಗೆ ಇನ್ನೂ ಹಲವಾರು ಕಲೆಗಳನ್ನು ಹೇಳಿಕೊಡಲು ಈ ಶಿಬಿರವನ್ನು ಹಮ್ಮಿ ಕೊಂಡಿದ್ದೇವೆ.

    ಈ ಶಿಬಿರದಲ್ಲಿ ಜೇಡಿಮಣ್ಣಿನಿಂದ ಬೊಂಬೆಗಳನ್ನು ತಯಾರು ಮಾಡುವುದು, ವಿಧವಿಧವಾದ ಚಿತ್ರಗಳನ್ನು ಬಿಡಿಸುವುದು, ಸಂಗೀತವನ್ನು ಹಾಡುವುದು, ಕೈಗಳಿಂದ ಬೊಂಬೆಗಳನ್ನು ತಯಾರು ಮಾಡುವುದು, ಕೈಗಳಿಗೆ ಮೆಹಂದಿ ಹಾಕುವುದು, ಮನೆಯ ಮುಂದೆ ರಂಗೋಲಿ ಬಿಡಿಸುವುದು, ವಿದ್ಯಾರ್ಥಿಗಳು ದೈಹಿಕವಾಗಿ-ಮಾನಸಿಕವಾಗಿ ಸದೃಢರಾಗಿರಲು ವ್ಯಾಯಾಮಗಳನ್ನು ಮಾಡುವುದು. ಹೀಗೆ ಹಲವಾರು ವಿಷಯಗಳ ಬಗ್ಗೆ ಉತ್ತಮ ರೀತಿಯಲ್ಲಿ ವಿವಿಧ ಕಲೆಗಳನ್ನು ಕಲಿಸುತ್ತೇವೆ.

     ಆದ್ದರಿಂದ 12 ದಿನಗಳ ಕಾಲ ತಪ್ಪದೆ ವಿದ್ಯಾರ್ಥಿಗಳು ಹಾಜರಾಗಬೇಕು. ಇದು ನಿಮಗೆ ಒಂದು ಸುವರ್ಣ ಅವಕಾಶ. ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಗುವುದು ವಿದ್ಯಾರ್ಥಿಗಳಿಗೆ ಹೇಳಿದರು.

     ಶಿಶು ಅಭಿವೃದ್ಧಿ ಯೋಜನಾಧಿಕಾರಿ ಟಿ.ಆರ್.ಸ್ವಾಮಿ ಮಾತನಾಡಿ, ಇಂತಹ ಶಿಬಿರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕಲೆಗಳನ್ನು ಕಲಿಯಬೇಕು. ಈ ಕಲೆಗಳನ್ನು ಲಕ್ಷಗಟ್ಟಲೆ ಕೊಟ್ಟರೂ ಸಹ ಕಲಿಯುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಬಡವಿದ್ಯಾರ್ಥಿಗಳೂ ಕಲೆಗಳನ್ನು ಕಲಿಯಲಿ ಎಂದು ಬೇಸಿಗೆ ರಜಾ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆದ್ದರಿಂದ ಯಾರೂ ಸಹ ತಪ್ಪಿಸಿಕೊಳ್ಳಬೇಡಿ. ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರೋತ್ಸಾಹದಿಂದ ವಿವಿಧ ಕಲೆಗಳನ್ನು ಕಲಿಯಬೇಕು ಎಂದು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

       ತಾಲ್ಲೂಕು ಮೇಲ್ವಿಚಾರಕಿ ಶಿವಲೀಲಾ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಬರುತ್ತಿವೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡರೆ ಉತ್ತಮವಾದ ಜೀವನ ರೂಪಿಸಿಕೊಳ್ಳಬಹುದು. ಶಾಲಾ ಮಕ್ಕಳಿಗೆ ನಮ್ಮ ಇಲಾಖೆ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ನಾವು ಸಹ ವಿದ್ಯಾರ್ಥಿಗಳಿಗೆ ಕಾನೂನಿನ ಸಲಹೆಗಳನ್ನು ನೀಡುವ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಈ ಬಾರಿ ವಿದ್ಯಾರ್ಥಿಗಳಿಗೋಸ್ಕರ ರಜಾದಿನಗಳಲ್ಲಿ ಈ ರೀತಿಯ ಕಲೆಗಳನ್ನು ರೂಪಿಸಿಕೊಳ್ಳಲು ಇಂತಹ ಬೇಸಿಗೆ ಶಿಬಿರ ಕಾರ್ಯಕ್ರಮಗಳನ್ನು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

       ಈ ಸಂದರ್ಭದಲ್ಲಿ ಕನ್ನಡ ಶಿಕ್ಷಕ ರಂಗನಾಥಪ್ಪ , ಮುಖ್ಯೋಪಾಧ್ಯಾಯ ಸಂಜಯ್, ಟ್ರಸ್ಟ್ ಮ್ಯಾನೇಜರ್ ಗೋಪಿಕೃಷ್ಣ, ನಿರ್ದೇಶಕರಾದ ಮುಕುಂದ, ರಂಗ, ಲಾವಣ್ಯ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ನೂರಾರು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap