ಮನಸ್ಸಿಗೆ ನೆಮ್ಮದಿ ತರುವ ಕೆಲಸ ಮಾಡಬೇಕು

ಚಿತ್ರದುರ್ಗ:

    ಸಮಾಜದ ಸಮಸ್ಯೆಗಳನ್ನು ನಮ್ಮ ಸಮಸ್ಯೆಯೆಂದು ತಿಳಿದುಕೊಂಡು ಕೆಲಸ ಮಾಡಿದರೆ ಮನಸ್ಸಿಗೆ ನೆಮ್ಮದಿ ಆತ್ಮತೃಪ್ತಿ ಸಿಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದರು.

   ಮೂರು ವರ್ಷಗಳ ಕಾಲ ಇಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ನ್ಯಾಯಾಂಗ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿಗೆ ವರ್ಗಾವಣೆಯಾಗಿರುವ ಎಸ್.ಬಿ.ವಸ್ತ್ರಮಠರವರು ಜಿಲ್ಲಾ ನ್ಯಾಯಾಂಗ ಇಲಾಖೆಯಿಂದ ವಕೀಲರ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪತ್ನಿ ಹಾಗೂ ಪುತ್ರ, ಪುತ್ರಿಯ ಸಮೇತ ಅದ್ದೂರಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

  ಬಡವರು ನಿಮ್ಮ ಬಳಿ ನ್ಯಾಯಕ್ಕಾಗಿ ಬಂದರೆ ಸಹಾಯ ಮಾಡಿ. ನಾಳೆ ಬಾ ಎಂದು ಹೇಳಿ ಕಳಿಸಬೇಡಿ. ನೊಂದವರಿಗೆ ಸಹಾಯ ಮಾಡಲು ಹೋದಾಗ ಅನೇಕ ಅಡಚಣೆಗಳು ಎದುರಾಗುವುದು ಸಹಜ. ನ್ಯಾಯಾಂಗ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ವಕೀಲರುಗಳು ನನಗೆ ಸಹರಿಸಿದ್ದರಿಂದ ಶೀಘ್ರದಲ್ಲಿಯೇ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯವಾಯಿತು. ನಿಮ್ಮ ಸಹಕಾರಕ್ಕೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದರು.

   ಜೀವನದಲ್ಲಿ ಕಷ್ಟ-ಸುಖ ಎರಡನ್ನು ಅನುಭವಿಸಿದ್ದೇನೆ. ಹಗಲು ರಾತ್ರಿ ತಿರುಗಾಡಿದ್ದೇನೆ. ಒಳ್ಳೆಯ ಮನಸ್ಸಿನಿಂದ ಯಾವ ಕೆಲಸ ಮಾಡಿದರು ಒಳ್ಳಯದಾಗುತ್ತದೆ. ಕೆಟ್ಟ ಮನಸ್ಸಿನಿಂದ ಮಾಡಿದರೆ ಕಟ್ಟದಾಗುತ್ತದೆ. ದೃಢಸಂಕಲ್ಪವಿರಬೇಕು. ಬಂದಿದ್ದನ್ನು ಸ್ವೀಕರಿಸುವ ಎದೆಗಾರಿಕೆ ಇರಬೇಕು. ಮುಜುಗರ ಚಿಂತೆಗೆ ಒಳಗಾಗಬಾರದು. ಯಾರ್ಯಾರ ಜೀವನದಲ್ಲಿ ಏನು ಆಗಬೇಕೊ ಅದು ಆಗುತ್ತದೆ.

    ನ್ಯಾಯಾಂಗ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆಯಾಗುತ್ತೇನೆಂದು ಕನಸಿನಲ್ಲಿಯೂ ನೆನೆಸಿರಲಿಲ್ಲ. ಮೊದಲು ನಂಬಿಕೆಯಿಡಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನ್ಯಾಯಾಂಗ ಇಲಾಖೆ ಸಿಬ್ಬಂದಿಗಳಿಗೆ ಕರೆ ನೀಡಿದರು.

     ಒಳ್ಳೆಯ ಆಹಾರ ಸೇವಿಸಿ ಆರೋಗ್ಯ ಸದೃಢವಾಗಿಟ್ಟುಕೊಳ್ಳಿ, ಒಳ್ಳೆಯ ಮಾತನಾಡಿ ಒಳ್ಳೆ ನಡತೆ ರೂಪಿಸಿಕೊಂಡಾಗ ಜನ ನಿಮ್ಮ ಬಳಿ ಬರುತ್ತಾರೆ. ಸುಂದರವಾದ ಬದುಕು ಕಟ್ಟಿಕೊಳ್ಳಿ. ದುಡಿದ ಹಣದಲ್ಲಿಯೇ ಸ್ವಲ್ಪ ಕೂಡಿಟ್ಟು ನಿವೇಶನವೋ ಇಲ್ಲ ಮನೆಯೋ ಖರೀಧಿಸಿ ಕುಟುಂಬದೊಂದಿಗೆ ನಮ್ಮೆದಿಯಾಗಿರಿ. ಹೆಂಡತಿ ಮಕ್ಕಳ ಆರೋಗ್ಯದ ಕಡೆಗೂ ಗಮನ ಕೊಡಿ. ನನ್ನ ಕರ್ತವ್ಯದಲ್ಲಿ ಯಾರಿಗೂ ಕೆಟ್ಟದ್ದು ಬಯಸಿಲ್ಲ.

   ಅವರಾಗಿಯೇ ತನ್ನ ಕೈಯಾರೆ ಕೆಟ್ಟದು ಮಾಡಿಕೊಂಡರೆ ಯಾರು ಏನು ಮಾಡಲು ಆಗುವುದಿಲ್ಲ. ಸಿಬ್ಬಂದಿಗಳಿಗೆ 75 ವಸತಿ ಗೃಹಗಳನ್ನು ನಿರ್ಮಿಸಿಕೊಡುವುದಕ್ಕೆ ಕೈಹಾಕಿದ್ದೆ. ಅಷ್ಟರಲ್ಲಿ ನ್ಯಾಯಾಂಗ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿಗೆ ವರ್ಗಾವಣೆಯಾದೆ. ಚಿತ್ರದುರ್ಗ ಜಿಲ್ಲೆಯ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು ನಿಮ್ಮ ಏನೆ ಸಮಸ್ಯೆ ಕೆಲಸಗಳು ಇದ್ದಲ್ಲಿ ನನ್ನ ಬಳಿ ಬನ್ನಿ ಕೈಲಾದಷ್ಟು ಅನುಕೂಲ ಮಾಡುತ್ತೇನೆ ಎಂದು ಭರವಸೆ ನೀಡಿದರು.

   ನ್ಯಾಯಾಂಗ ಇಲಾಖೆಯ ಅನೇಕ ಸಿಬ್ಬಂದಿಗಳು ಹಾಗೂ ಎಸ್.ಬಿ.ವಸ್ತ್ರಮಠರವರ ಗುರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಅವರಲ್ಲಿದ್ದ ಸಾಮಾಜಿಕ ಕಳಕಳಿಯನ್ನು ಗುಣಗಾನ ಮಾಡಿದರು.ನ್ಯಾಯಾಧೀಶರುಗಳಾದ ವೀರಣ್ಣ, ಶಮೀರ್ ನಂದ್ಯಾಳ್, ಸುದೇಶ್‍ಭಂಡಾರಿ , ನ್ಯಾಯಾಲಯದ ಮ್ಯಾನೇಜರ್ ದೋನಿ, ಜಿಲ್ಲೆಯ ಆರು ತಾಲೂಕಿನ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap