ವಿನಾಯಕ ಪೂಜಾರ್.
ದಾವಣಗೆರೆ:
ಬೇಸಿಗೆಯ ಪರಿಣಾಮ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಬೋರ್‍ವೆಲ್‍ಗಳಲ್ಲಿ ಸಹ ನೀರು ಕಡಿಮೆಯಾಗಿದ್ದು, ಇರುವ ಅಲ್ಪಸ್ವಲ್ಪ ನೀರಿನಲ್ಲೇ ರೈತರು ತರಕಾರಿ ಬೆಳೆಯುತ್ತಿರುವುದರಿಂದ ಇಳುವರಿ ಸಹ ಕುಂಠಿತಗೊಂಡಿದೆ. ಹೀಗಾಗಿ ಮಾರುಕಟ್ಟೆ ಬೇಡಿಕೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಇರುವುದರಿಂದ ತರಕಾರಿ ಬೆಲೆ ಗಗನಮುಖಿಯಾಗಿದೆ.
ಹೌದು… ಮಾರುಕಟ್ಟೆ ಬೇಡಿಕೆಗಿಂತಲೂ ಕಡಿಮೆ ಪ್ರಮಾಣದಲ್ಲಿ ತರಕಾರಿ ಪೂರೈಕೆ ಇರುವುದರಿಂದ ತರಕಾರಿ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಆದರೆ, ಇದರ ನೇರ ಲಾಭ ಪಡೆಯಬೇಕಿದ್ದ ರೈತರು ಮಾತ್ರ ದಲ್ಲಾಳಿಗಳ ಹಾವಳಿಯಿಂದಾಗಿ ನಷ್ಟ ಅನುಭವಿಸುವಂತಾಗಿದೆ.
ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಸಧ್ಯಕ್ಕೆ ಕೆಳಗಿಳಿಯುವ ಲಕ್ಷಣ ಗೊಚರಿಸುತ್ತಿಲ್ಲ. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಕಳೆದೊಂದು ತಿಂಗಳಿನಿಂದಲೂ ತರಕಾರಿಗಳ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಪ್ರತಿ ಬೇಸಿಗೆಯಲ್ಲೂ ಇದು ಸಾಮಾನ್ಯವಾದರೂ, ಈ ಬಾರಿಯ ಬೆಲೆ ಏರಿಕೆ ಜನರನ್ನು ಕಂಗಾಲು ಮಾಡಿದೆ.
ಬೆಲೆ ಏರಿಕೆಯ ಬಿಸಿಯಿಂದಾಗಿ ಸಾಮಾನ್ಯ ಜನರು ತರಕಾರಿ ಖರೀದಿಗೆ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂದಲ್ಲ ನಾಳೆ ಬೆಲೆ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿ ಇದ್ದುದರಲ್ಲೇ ಕಾಲ ತಳ್ಳುತ್ತಿದ್ದಾರೆ. ಆದ್ದರಿಂದ ಚಿಲ್ಲರೆ ವ್ಯಾಪಾರಿಗಳು, ತಳ್ಳುಗಾಡಿಯವರು ಸಹ ವ್ಯಾಪಾರವಿಲ್ಲದೆ ಹೈರಾಣಾಗಿದ್ದಾರೆ.
ಸಧ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಹುರುಳಿಕಾಯಿ 120 ರೂ., ಕ್ಯಾರೆಟ್ 80 ರೂ., ಚವಳಿ ಕಾಯಿ 60 ರೂ., ಬದನೆಕಾಯಿ 40 ರೂ., ಹಸಿರು ಮೆಣಸಿನಕಾಯಿ 60 ರೂ. ಟೊಮ್ಯಾಟೊ 40 ರೂ. ಆಸುಪಾಸಿನಲ್ಲಿವೆ. 50ರ ಗಡಿ ದಾಟಿದ್ದ ಈರುಳ್ಳಿ ಬೆಲೆ ಮಾತ್ರ ಕಡಿಮೆಯಾಗಿದ್ದರೂ, ಉಳಿದ ತರಕಾರಿ ಬೆಲೆಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕಿವೆ. ಇನ್ನೊಂದೆಡೆ, ತರಕಾರಿ ಬೆಳೆದಿದ್ದ ರೈತರೂ ಸಹ, ಮಧ್ಯವರ್ತಿಗಳ ಹಾವಳಿಯಿಂದ ಯೋಗ್ಯ ಬೆಲೆ ಸಿಗದೇ ಕೈ ಸುಟ್ಟುಕೊಂಡಿದ್ದಾರೆ.
ವರ್ತಕರಿಗೆ ರೈತರೇ ನೇರ ಮಾರಾಟ ಮಾಡಿದರೆ ಬೆಲೆ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ. ಆದರೆ, ಬಹುತೇಕ ಕಡೆ ದಲ್ಲಾಳಿಗಳ ಮೂಲಕ ಮಾರಾಟ ಪ್ರಕ್ರಿಯೆ ನಡೆಯುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ರೈತರಿಂದ ಖರೀದಿಸಿದ ಉತ್ಪನ್ನವನ್ನು ಸಂಗ್ರಹಿಸಿಟ್ಟುಕೊಳ್ಳುವ ಮಧ್ಯವರ್ತಿಗಳು ಮಾರುಕಟ್ಟೆಯಲ್ಲಾಗುವ ಬೆಲೆ ಏರಿಕೆಯ ಲಾಭ ಪಡೆಯುತ್ತಿದ್ದಾರೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.
ಜಿಲ್ಲಾ ಕೇಂದ್ರದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣೆಗೆ ಅನುಕೂಲವಾಗುವಂತೆ ಬೃಹತ್ ಶಿಥಿಲೀಕರಣ ಘಟಕವನ್ನೇನೊ ಉದ್ಘಾಟಿಸಿ ವರ್ಷವೇ ಕಳೆದಿದೆ. ಆದರೆ ಉತ್ಪನ್ನ ಸಂಗ್ರಹಕ್ಕೆ ಅಗತ್ಯ ಸೌಕರ್ಯ ಕಲ್ಪಿಸುವ ಕೆಲಸ ಮಾತ್ರ ಆಗಿಲ್ಲ. ಹೀಗಾಗಿ ಬೆಲೆ ಕಡಿಮೆ ಇದ್ದ ಸಂದರ್ಭದಲ್ಲಿ ಶಿಥಿಲೀಕರಣ ಘಟಕಗಳಲ್ಲಿ ಉತ್ಪನ್ನ ಸಂಗ್ರಹಿಸಿಟ್ಟು, ಒಳ್ಳೆಯ ಬೆಲೆ ಸಿಕ್ಕಾಗ ಮಾರಾಟ ಮಾಡಲು ರೈತರಿಗೆ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದ್ದರೂ, ಅದರ ಪೂರ್ಣ ಲಾಭ ತರಕಾರಿ ಬೆಳೆಗಾರರಿಗೆ ಸಿಗದಂತಾಗಿದೆ.