3 ನೇ ಅಲೆಯ ನಡುವೆ ಮಕ್ಕಳಲ್ಲಿ ಹೆಚ್ಚುತ್ತಿರುವ ಕೆಮ್ಮು-ಜ್ವರ ಪ್ರಕರಣ!!

ಕೊರಟಗೆರೆ : 

     ಕೊರೋನಾ ಮೊದಲನೆ ಹಾಗೂ ಎರಡನೆ ಅಲೆಯ ತೀವ್ರತೆಯಿಂದ ನಲುಗಿರುವ ಜನತೆಗೆ 3ನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸಲಿದೆ ಎಂಬ ತಜ್ಞರ ಎಚ್ಚರಿಕೆ ನಡುವೆ ಕೊರಟಗೆರೆ ತಾಲ್ಲೂಕಿನ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಪ್ರಕರಣಗಳು ಹೆಚ್ಚುತ್ತಿರುವುದು ಪೋಷಕರಲ್ಲಿ ನಿದ್ದೆ ಕೆಡಿಸಿದಂತಾಗಿದೆ.

     ಕೊರಟಗೆರೆ ತಾಲ್ಲೂಕಿನಲ್ಲಿ ಕಳೆದ 15 ದಿನಗಳಿಂದ ಚಿಕ್ಕ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ತೀವ್ರವಾಗಿ ಬಾಧಿಸುತ್ತಿರುವುದು ಪೋಷಕರಲ್ಲಿ ನಡುಕ ಹುಟ್ಟಿಸಿದೆ. ಕೊರೋನಾ ಮೊದಲನೆ ಹಾಗೂ ಎರಡನೆ ಅಲೆ ಸಾರ್ವಜನಿಕರ ಬದುಕನ್ನು ದುಸ್ತರಗೊಳಿಸಿ, ದಿಕ್ಕು ಕಾಣದಂತೆ ಮಾಡಿತ್ತು. ಇಂತಹ ಸನ್ನಿವೇಶದಲ್ಲಿ ಮೂರನೆ ಅಲೆ ಚಿಕ್ಕ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾದಂತಾಗಿದೆ.

      ಕಳೆದ 1-2 ತಿಂಗಳಿನಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಕೊರೋನಾ ಪಾಸಿಟೀವ್ ಸಂಖ್ಯೆ ಕ್ಷೀಣಿಸಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವ ಸಂದರ್ಭದಲ್ಲಿ ಮತ್ತೆ ಮಕ್ಕಳಲ್ಲಿ ಕೊರೋನಾ ರೋಗ ಲಕ್ಷಣಗಳಿರುವ ಜ್ವರ, ಕೆಮ್ಮು, ನೆಗಡಿ, ಸುಸ್ತುಗಳಂತಹ ಬಾಧೆ ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ನೆಮ್ಮದಿ ಕೆಡಿಸುತ್ತಿದೆ. ಚಿಕ್ಕ ಮಕ್ಕಳು ಹೇಳಿಕೊಳ್ಳಲಾಗದೆ ಅಳುತ್ತಾ ಪೋಷಕರ ಕೈಬಿಡದೆ, ಪಾಲಕರು ಮಕ್ಕಳ ಸುರಕ್ಷತೆ ಕುರಿತು ತಲೆಕೆಡಿಸಿಕೊಳ್ಳುವಂತಾಗಿದೆ.

     ರಾಜ್ಯದಲ್ಲಿ ಕೊರೋನಾ ಲಕ್ಷಣಗಳು ಕಡಿಮೆಯಾಗಿ, ಸರ್ಕಾರ ಹಂತ ಹಂತವಾಗಿ ಶಾಲಾ- ಕಾಲೇಜು ತೆರೆದಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಅನೇಕ ಮಾರ್ಪಾಡು ಮಾಡುತ್ತಿದೆ. ಈ ಸನ್ನಿವೇಶದಲ್ಲಿ ಚಿಕ್ಕಿಚಿಕ್ಕ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ರೋಗ ಲಕ್ಷಣಗಳು ಕಾಣಿಸಿಕೊಂಡು, ಪೋಷಕರಿಗೆ ದಿಕ್ಕು ಕಾಣದಂತಾಗಿ, ಕೊರೋನಾ ಬಾರದಿರಲಿ ಎಂದು ಪಾಲಕರು ದೇವರಿಗೆ ಮೊರೆ ಹೋಗುವಂತಾಗಿದೆ.

     ರಾಜ್ಯ ಸರ್ಕಾರ ಕೊರೋನಾದ ನಿಯಮಗಳನ್ನು ಸಡಿಲಿಸಿ ಅನ್‍ಲಾಕ್ ಜಾರಿಗೊಳಿಸಿದ ಬಳಿಕ ಜನಜೀವನ ಯಥಾಸ್ಥಿತಿಗೆ ಮರಳಿದೆ. ಶಾಲಾ-ಕಾಲೇಜುಗಳು ಪ್ರಾರಂಭಗೊಂಡು ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಿವೆ. ಈ ಸಂದರ್ಭದಲ್ಲಿ ಇನ್ನೇನು ಕೊರೋನಾ ನಿಯಂತ್ರಣಕ್ಕೆ ಬಂದಿತು ಎನ್ನುವಾಗಲೆ ತಾಲ್ಲೂಕಿನಲ್ಲಿ 18 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಅತಂಕ ಮೂಡಿಸಿದೆ.

     ಮಳೆ-ಬಿಸಿಲಿನ ವಾತಾವರಣ ಬದಲಾಗುತ್ತಿರುವುದು ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳಿಗೆ ಕಾರಣ ಎನ್ನಲಾಗುತ್ತಿದೆ. ತಾಲ್ಲೂಕುವೊಂದರಲ್ಲೆ ಸಾವಿರಾರು ಜನ ಈ ರೋಗ ಲಕ್ಷಣಗಳಿಂದ ದಿನಂಪ್ರತಿ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಹಸುಗೂಸುಗಳಲ್ಲಿ ಈ ಲಕ್ಷಣಳು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆದರೆ ಕೋವಿಡ್ ವರದಿ ನೆಗಟೀವ್ ಬರುತ್ತಿರುವುದು ಪೋಷಕರಿಗೆ ನಿಟ್ಟುಸಿರು ಬಿಡುವಂತಾಗಿದೆ.

ಒಟ್ಟಾರೆ ಕೊರಟಗೆರೆ ತಾಲ್ಲೂಕಿನಲ್ಲಿ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, 3ನೆ ಅಲೆ ಮಕ್ಕಳಲ್ಲಿ ಹೆಚ್ಚು ಅಪಾಯಕಾರಿ ಎಂಬ ತಜ್ಜರ ಹೇಳಿಕೆಯಿಂದ ಪೋಷಕರು ಭಯದಿಂದ ಮಕ್ಕಳಿಗೆ ರೋಗ ಲಕ್ಷಣಗಳು ಕಂಡ ಕೂಡಲೆ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಹೆಚ್ಚು ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಸೋಂಕು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ರಂಗಧಾಮಯ್ಯ  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link