ಬ್ಯಾಡಗಿ:
ಬ್ಯಾಂಕಿಂಗ್ ವ್ಯವಸ್ಥೆ ಪರಿಚಯಕ್ಕೂ ಮುನ್ನವೇ ಸಹಕಾರಿ ವಲಯದ ಖಾಸಗಿ ಹಣಕಾಸು ಸಂಸ್ಥೆಗಳು ದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದವು, ಸಹಕಾರಿ ತತ್ವದಡಿ ಕೆಲಸ ನಿರ್ವಹಿಸುತ್ತಿದ್ದ ಅವುಗಳು ಆರ್ಥಿಕ ವಲಯದ ಉನ್ನತಿಗೆ ಮುನ್ನುಡಿ ಹಾಕಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬನಶಂಕರಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಚಿಲ್ಲೀಸ್ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬ್ಯಾಂಕ್‍ಗಳ ಆರಂಭಕ್ಕೂ ಮುನ್ನವೇ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಸಾರ್ವಜನಿಕರನ್ನು ಎತ್ತಿ ಹಿಡಿದ ಕೀರ್ತಿ ಸಹಕಾರಿ ಹಣಕಾಸು ಸಂಸ್ಥೆಗಳಿಗೆ ಸಲ್ಲುತ್ತದೆ ಎಂದರು.
ಸಾರ್ವಜನಿಕರ ದುಡ್ಡನ್ನು ಎತ್ತಿ ಹಾಕಲೆಂದೇ ಹುಟ್ಟಿಕೊಂಡ ಕೆಲ ಡೋಂಘಿ ಹಣಕಾಸು ಸಂಸ್ಥೆಗಳು ಮಾಡಿದ ಎಡವಟ್ಟಿನಿಂದ ಎಲ್ಲ ಸಹಕಾರಿ ಬ್ಯಾಂಕ್‍ಗಳ ನಿಯತ್ತಿನ ಬಗ್ಗೆ ಪ್ರಶ್ನಿಸುವಂತಾಗಿದೆಯಲ್ಲದೇ ಸಾರ್ವಜನಿಕ ವಲಯದಲ್ಲಿ ಅಪನಂಬಿಕೆ ಹುಟ್ಟಿಕೊಳ್ಳುವಂತೆ ಮಾಡಿದ್ದು, ದೇಶದ ದೊಡ್ಡ ದುರಂತ ಸಂಗತಿ ಎಂದ ಅವರು, ಇಲ್ಲದೇ ಹೋಗಿದ್ದರೇ ಯಾರೊಬ್ಬರೂ ರಾಷ್ಟ್ರೀಯ ಬ್ಯಾಂಕ್‍ಗಳತ್ತ ತಲೆ ಹಾಕುತ್ತಿರಲಿಲ್ಲ ಎಂದರು.
ಶೀಘ್ರ ಸಾಲ ಸೌಲಭ್ಯ:ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿನ ನಿಯಮಾವಳಿಗಳಿಗೆ ತಕ್ಕಂತೆ ನಡೆದುಕೊಳ್ಳಲು ಅರ್ಜಿದಾರರು ಹೈರಾಣಾಗಿ ಹೋಗುತ್ತಾರೆ, ಆದರೆ ಖಾಸಗಿ ಹಣಕಾಸು ಸಂಸ್ಥೆಗಳು ಶೀಘ್ರವಾಗಿ ಸಾಲವನ್ನು ನೀಡುವ ಮೀಲಕ ಆರ್ಥಿಕ ಭದ್ರತೆಗೆ ಸಹಕಾರಿಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಇಂತಹ ಸಂಸ್ಥೆಗಳಿಂದ ಪಡೆದ ಸಾಲ ಬಾಬತ್ತನ್ನು ಬಡ್ಡಿ ಸಮೇತ ಮರಳಿ ನೀಡಿದಾಗ ಮಾತ್ರ ಅವುಗಳ ಉನ್ನತಿ ಸಾಧ್ಯ ಹೀಗಾಗಿ ಸಂಸ್ಥೆಯ ಏಳಿಗೆಗೆ ಅಲ್ಲಿನ ನಿರ್ದೇಶಕ ಮಂಡಳಿ ಸೇರಿದಂತೆ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ಸಾನಿದ್ಯ ವಹಿಸಿದ್ದ ಮದ್ದರಕಿ ಹಿರೇಮಠದ ಷ.ಬ್ರ.ಶಿವಯೋಗಿ ಶಿವಾಚಾರ್ಯಶ್ರೀಗಳು ಮಾತನಾಡಿ, ಪಟ್ಟಣದಲ್ಲಿ ಮೆಣಸಿನಕಾಯಿ ವರ್ತಕರು ಹಾಗೂ ಸಾಕಷ್ಟು ಸಣ್ಣ ಕೈಗಾರಿಕೆಗಳ ಮೂಲಕ ಹೆಚ್ಚು ವಹಿವಾಟು ನಡೆಸುತ್ತಿದ್ದಾರೆ, ಹಲವು ಕೋ.ಆಪರೇಟಿವ್ ಬ್ಯಾಂಕಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇನ್ನಷ್ಟು ಹಣಕಾಸು ಸಂಸ್ಥೆಗಳ ಕೊರತೆ ಕಾಣುತ್ತಿದೆ, ವರ್ತಕರ ಏಳಿಗೆಯಲ್ಲಿ ಬ್ಯಾಂಕ್‍ಗಳ ಪಾತ್ರ ಹಿರಿದಾಗಿದೆ ಎಂದರು.
ಪ್ರತಿಯೊಬ್ಬರು ಕೌಟುಂಬಿಕ ಹಾಗೂ ವ್ಯವಹಾರಿಕ ಅಭಿವೃದ್ಧಿಗೆ ಸಾಲದ ಮೊರೆ ಹೋಗುವುದು ಸಹಜ, ಈ ಮೂಲಕ ತನ್ನ ಜೀವನ ಸುಧಾರಣೆಗೆ ಹಾಗೂ ಅಭಿವೃದ್ಧಿಗೆ ಯತ್ನಿಸುತ್ತಾರೆ. ಬ್ಯಾಂಕನ ಕಾಯ್ದೆ ಹಾಗೂ ನಿಯಮಗಳಿಗೆ ಹೊರತಾಗಿ ಯಾ ವುದೇ ವ್ಯವಹಾರಗಳನ್ನು ನಡೆಸಲು ಸಾಧ್ಯವಿಲ್ಲ, ನಿಯಮಕ್ಕೆ ಪ್ರತಿಯೊಬ್ಬ ಶೇರುದಾರರು, ಖಾತೆದಾರರು ನಡೆದುಕೊಳ್ಳಬೇಕಿದೆ ಎಂದರು.
ಮುಖ್ಯ ಪ್ರವರ್ತಕ ಪರಮಶಿವಯ್ಯ ಮಾತನಾಡಿ, ಹೊಸದಾಗಿ ಉದ್ಯೋಗ, ಕೈಗಾರಿಕೆ, ಅಂಗಡಿ, ಮನೆ ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಸರಳ ರೀತಿಯಲ್ಲಿ ಬ್ಯಾಂಕ್‍ನಲ್ಲಿ ಸಾಲ ಸೌಲಭ್ಯವಿದೆ, ವಿಶೇಷ ಠೇವಣಿ ಯೋಜನೆ ಸೇರಿದಂತೆ ಜನರಿಗೆ ಅನುಕೂಲವಾಗುವ ಹೊಸ ಯೋಜನೆಗಳನ್ನು ತೆರೆಯಲು ಬ್ಯಾಂಕ ಆಡಳಿತ ಮಂಡಳಿ ನಿರ್ಧರಿಸಿದ್ದು, ಸಹಕಾರಿ ಸಂಘಗಳ ನಿಯಮದಂತೆ ಬ್ಯಾಂಕಿನ ಎಲ್ಲ ವಹಿವಾಟುಗಳು ನಡೆಯಲಿದ್ದು ಪೂರ್ಣ ಪ್ರಮಾಣದಲ್ಲಿ ಗಣಕೀಕೃತ ವ್ಯವಹಾರ ನಡೆಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ, ಸಹಕಾರಿ ಸಂಘಗಳ ನಿಬಂಧಕಿ ಶಶಿಕಲಾ ಪಾಳೇದ, ಬ್ಯಾಂಕ ಅಧ್ಯಕ್ಷ ವೀರಯ್ಯ ಹಿರೇಮಠ, ಉಪಾಧ್ಯಕ್ಷ ಎಸ್.ಎನ್.ಮಾತನವರ, ಮೃತ್ಯುಂಜಯ ಹಿರೇಮಠ, ಜೆ.ಸಿ.ಚಿಲ್ಲೂರ ಮಠ, ಅಶೋಕ ದುಮ್ಮಾಳ, ಅನುಪಮಾ ಹಿರೇಮಠ, ಆರ್.ನಾಗರಾಜ, ಕೆಇಬಿ ಮುತ್ತಣ್ಣ, ಸುರೇಶ ಯತ್ನಳ್ಳಿ, ಕೆಂಪೇಗೌಡ ಪಾಟೀಲ, ಇನ್ನಿತರರು ಉಪಸ್ಥಿತರಿದ್ದರು.