ಹೊನ್ನಾಳಿ:
ಭಕ್ತ ಮತ್ತು ಭಗವಂತನ ಮಧ್ಯೆ ದಲ್ಲಾಳಿಯ ಅಗತ್ಯತೆ ಇರಬಾರದು ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀ ಬಸವೇಶ್ವರ ದೇವಾಲಯ ಪ್ರವೇಶ, 32 ಅಡಿ ಎತ್ತಿರದ ಬೃಹತ್ ರಥ ಲೋಕಾರ್ಪಣೆ, ಶ್ರೀ ಬಸವೇಶ್ವರ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ಶ್ರೀ ಬಸವೇಶ್ವರ ಸಮುದಾಯ ಭವನ ಹಾಗೂ ಶ್ರೀ ಬಸವೇಶ್ವರ ಮಹಾದ್ವಾರ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶರಣ ಧರ್ಮದಲ್ಲಿ ಭಕ್ತನೇ ಪೂಜಾರಿ. ನಾವೇ ದೇವರನ್ನು ನಮ್ಮ ಕೈಯ್ಯಾರೆ ಪೂಜಿಸಬೇಕು. ಆಗ ಭಗವಂತನ ಒಲುಮೆ ಸಾಧ್ಯ. ಹಾಗಾಗಿ, ದೇವಸ್ಥಾನಕ್ಕೆ ಬರುವ ಭಕ್ತರು ಹಾಕುವ ಕಾಣಿಕೆ ಮೇಲೆ ಕಣ್ಣಿಡುವ ಪೂಜಾರಿ ಅನಗತ್ಯ ಎಂದು ತಿಳಿಸಿದರು.
ದೇವರು ಮತ್ತು ಭಕ್ತನ ಮಧ್ಯೆ ಇರುವ ಸಂಬಂಧವನ್ನು ಬಸವಣ್ಣನವರು ಸ್ವಾರಸ್ಯಕರವಾಗಿ ಬಿಚ್ಚಿಡುತ್ತಾರೆ.
“ದಾರಿಬಿಡೋ ಪೂಜಾರಿ ದಾರಿ ಬಿಡೋ,ದೇವರಿಗೂ ನನಗೂ ಒಳ ಮಾತು” ಎನ್ನುತ್ತಾನೆ ಭಕ್ತ. ಆದರೆ, ಇದು ಪೂಜಾರಿಗೆ ಇಷ್ಟವಾಗುವುದಿಲ್ಲ. ತನ್ನ ಆದಾಯಕ್ಕೆ ಕತ್ತರಿ ಬೀಳಬಾರದು ಎಂಬ ನಿಟ್ಟಿನಲ್ಲಿ ಪೂಜಾರಿ ಯೋಚಿಸುತ್ತಾನೆ. ಆದರೆ, ಭಕ್ತ ಯಾವಾಗಲೂ ದೇವರನ್ನು ಹತ್ತಿರದಿಂದ ಪೂಜಿಸುವ ನಿಟ್ಟಿನಲ್ಲಿ ಚಿಂತಿಸುತ್ತಾನೆ. ನಾವು ಸೇವಿಸುವ ಆಹಾರ, ನೀರು, ಗಾಳಿಯಂತೆ ಭಕ್ತಿಯನ್ನು ಕೂಡ ಸ್ವತಃ ನಾವೇ ಆಚರಿಸಬೇಕು.
ದೇವರ ಪೂಜೆಯನ್ನು ಇನ್ನೊಬ್ಬರಿಂದ ಮಾಡಿಸಬಾರದು ಎಂದು ಬಸವಣ್ಣನವರು ತಿಳಿಸಿದ್ದಾರೆ. ಭಕ್ತಿಯ ಮೂಲ ಭಯ ಆಗಬಾರದು. ಭಯ ಹೊರಟುಹೋದರೆ ಭಕ್ತಿ ಇರುವುದಿಲ್ಲ. ಹಾಗಾಗಿ, ಭಕ್ತಿಯ ಮೂಲ ಶ್ರದ್ಧೆ, ನಂಬಿಕೆ ಆಗಬೇಕು. ಅಂಥ ಭಕ್ತಿ ಭಗವಂತನಿಗೆ ಪ್ರಿಯವಾಗುತ್ತದೆ ಎಂದು ಉದಾಹರಣೆಗಳ ಸಹಿತ ವಿವರಿಸಿದರು.
ಬದುಕಿನಲ್ಲಿ ನನಗೆ ಕಷ್ಟ ಕೊಡಬೇಡ ಎಂದು ದೇವರನ್ನು ಬೇಡಿಕೊಳ್ಳಬಾರದು. “ಕಷ್ಟ ಕೊಡು. ಆದರೆ, ಅವುಗಳನ್ನು ಎದುರಿಸುವ ಶಕ್ತಿಯನ್ನು ನೀಡು” ಎಂದು ಭಗವಂತನನ್ನು ಬೇಡಿಕೊಳ್ಳಬೇಕು. ಕಷ್ಟಗಳನ್ನು ಎದುರಿಸದಾಗಲೇ ಬದುಕು ಸಾರ್ಥಕವಾಗುತ್ತದೆ. ಅನಾಯಾಸವಾಗಿ ಬಂದ ಸಂಪತ್ತಿನಿಂದ ಖುಷಿ ಲಭಿಸುವುದಿಲ್ಲ ಎಂದು ತಿಳಿಸಿದರು.
ದೇವಸ್ಥಾನಗಳು, ಮಠ-ಮಂದಿರಗಳು ಭಕ್ತರನ್ನು ಅಧ್ಯಾತ್ಮಿಕವಾಗಿ ಉನ್ನತಿಯತ್ತ ಕೊಂಡೊಯ್ಯಬೇಕು. ಆದರೆ, ದುರ್ದೈವದ ಸಂಗತಿ ಎಂದರೆ, ಈಚೆಗೆ ದೇವಸ್ಥಾನಗಳು, ಮಠ-ಮಂದಿರಗಳು ಜಾತಿ ಸಂಘರ್ಷಗಳಿಗೆ ಕಾರಣವಾಗುತ್ತಿವೆ. ಈಚೆಗೆ ನ್ಯೂಜಿಲ್ಯಾಂಡ್ನಲ್ಲಿ ಇಸ್ಲಾಂ ಧರ್ಮದ ದುರುಳರು ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಗುಡಿನ ಮಳೆಗರೆದು ಅಮಾಯಕರ ಪ್ರಾಣ ತೆಗೆದರು. ಇತ್ತೀಚೆಗೆ ಶ್ರೀಲಂಕಾದಲ್ಲಿ ಚರ್ಚ್ ಮೇಲೆ ದಾಳಿ ನಡೆಸಿ ಮುನ್ನೂರಕ್ಕೂ ಅಧಿಕ ಜನರ ಹತ್ಯೆ ಮಾಡಿದರು.
ಯಾವ ಧರ್ಮವೂ ಮನುಷ್ಯನನ್ನು ಕೊಲ್ಲು ಎಂದು ಹೇಳುವುದಿಲ್ಲ. ಮನುಷ್ಯ ಮಾನವೀಯತೆಯನ್ನು ಬೆಳೆಸಿಕೊಂಡರೆ ಹಿಂಸೆಗೆ ಜಾಗ ಇರುವುದಿಲ್ಲ ಎಂದು ಹೇಳಿದರು. ಜಾತಿಯ ಕಾರಣಕ್ಕಾಗಿ ಜನಾಂಗಗಳ ಮಧ್ಯೆ ದ್ವೇಷ, ಹೊಡೆದಾಟಗಳು ನಡೆಯುತ್ತವೆ. ಇದು ಆಗಬಾರದು. ಮಠಗಳಿಗೆ ಜಾತಿಗಳಿವೆ. ಆದರೆ, ಮಠಾಧಿಪತಿಗಳಿಗೆ ಜಾತಿಯ ಸೋಂಕಿರುವುದಿಲ್ಲ. ದೇವರು, ಲಾಂಛನಗಳು ಒಂದೇ ಎಂಬ ಭಾವದಿಂದ ಬದುಕಬೇಕು. ಜಾತಿಯ ಕಾರಣಕ್ಕೆ ಭೀತಿ ಉಂಟಾಗಬಾರದು ಎಂದು ಸೋದಾಹರಣವಾಗಿ ವಿವರಿಸಿದರು.