ಹಾವೇರಿ
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ 2019-20ನೇ ಸಾಲಿಗೆ ಜಿಲ್ಲೆಗೆ 42.00 ಲಕ್ಷ ಮಾನವ ದಿನಗಳ ಸೃಜನೆ ಗುರಿಯನ್ನು ಹೊಂದಲಾಗಿದೆ. ಬರ ಕಾರಣ ಯಾರೂ ಗುಳೆ ಹೋಗದಂತೆ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಲು ಕುಟುಂಬಗಳಿಗೆ ಸ್ಥಳೀಯವಾಗಿ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಏಳು ತಾಲೂಕುಗಳಲ್ಲಿ ಜಿಲ್ಲಾ ಪಂಚಾಯತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ಎಲ್ಲ ಅನುಷ್ಠಾನ ಅಧಿಕಾರಿಗಳಿಗೆ ಜನರು ಉದ್ಯೋಗ ಬೇಡಿಕೆ ನೀಡಿದ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿಪಾವತಿ ಮಾಡಲು ನಿರ್ದೇಶನ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.
ದಿನಾಂಕ 06-5-2019ರವರೆಗೆ 25,872 ಕುಟುಂಬಗಳು ಬೇಡಿಕೆ ಸಲ್ಲಿಸಿದ್ದು, 24,833 ಕುಟುಂಬಗಳಿಗೆ ಉದ್ಯೋಗ ಒದಗಿಸಿ 2.36 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ ಒಂದು ರಿಂದ ಎರಡು ಸಮುದಾಯ ಆಧಾರಿತ ಮತ್ತು ಕನಿಷ್ಠ 50 ವೈಯಕ್ತಿಕ ಕಾಮಗಾರಿಗಳನ್ನು ಪ್ರಾರಂಭಿಸಲು ಮತ್ತು ಪ್ರಗತಿಯಲ್ಲಿ ಇಡಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ನಿರ್ದೇಶನ ನೀಡಲಾಗಿದೆ. ಉದ್ಯೋಗ ಬೇಡಿಕೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯತ್‍ಗಳಲ್ಲಿ ನಮೂನೆ-6ನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಥವಾ ಆಯಾ ತಾಲೂಕ ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ಕಚೇರಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಒದಗಿಸುವುದು, ನೈಸರ್ಗಿಕ ಸಂಪನ್ಮೂಲ ಬಲಪಡಿಸಿವುದು, ವಲಸೆ ತಡೆಗಟ್ಟುವುದು, ಆರ್ಥಿಕ ಭದ್ರತೆ ಒದಗಿಸುವುದು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.ಬರಗಾಲ ನಿಮಿತ್ಯ ಜನರಿಗೆ ಉದ್ಯೊಗ ಒದಗಿಸುವ ಸಲುವಾಗಿ 252 ಕೆರೆಗಳನ್ನು ಗುರುತಿಸಲಾಗಿದ್ದು(ಜಲಾಮೃತ ಯೋಜನೆಯಡಿ) ಉದ್ಯೋಗ ಬೇಡಿ ಬಂದಲ್ಲಿ ತಕ್ಷಣ ಉದ್ಯೋಗ ಒದಗಿಸಲಾಗುವುದು. ಜನರಿಗೆ ಕೆರೆ ಹೂಳೆತ್ತುವ, ರಸ್ತೆ ನಿರ್ಮಾಣ, ಶಾಲಾ ಕಂಪೌಂಡ, ಶಾಲಾ ಆಟದ ಮೈದಾನ, ಅರಣ್ಯ ಸಸಿ ನೆಡುವ, ಸಸಿ ನಿರ್ವಹಣೆ, ದನದೊಡ್ಡಿ, ರೇಷ್ಮೆ ಬೆಳೆ, ತೋಟಗಾರಿಕೆ, ಮನೆ ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ನಾಲಾ ದುರಸ್ತಿ, ಗೋಕಟ್ಟೆ ನಿರ್ಮಾಣ ಇನ್ನು ಹಲವಾರು ಕಾಮಗಾರಿಗಳಲ್ಲಿ ಕೂಲಿಕರರಿಗೆ ಕೆಲಸ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ(ಆರ್ಥಿಕ ವರ್ಷಕ್ಕೆ ನಿಗದಿಪಡಿಸಿದಂತೆ), ಉದ್ಯೋಗ ಚೀಟಿಯನ್ನು ಗ್ರಾಮ ಪಂಚಾಯತಿಗಳಲ್ಲಿ ಪಡೆಯಬೇಕು. ಉದ್ಯೋಗಕ್ಕಾಗಿ ನಮೂನೆ -6ರಲ್ಲಿ ಅರ್ಜಿ ಸಲ್ಲಿಸಿದ 15 ದಿನದೊಳಗಾಗಿ ಕೆಲಸ ಖಾತರಿ, ಕೂಲಿ ಹಣವನ್ನು ಕೆಲಸ ನಿರ್ವಹಿಸಿದ ನಂತರ 15 ದಿನದಿಳಗಾಗಿ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ನೀಡಲಾಗುವುದು. ವೃದ್ಧರು ಮತ್ತು ವಿಕಲಚೇತನರಿಗೆ ಕೆಲಸದ ಪರಿಣಾಮದಲ್ಲಿ ಶೇ.50 ರಿಯಾಯಿತಿ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಉದ್ಯೋಗ ಚೀಟಿ ನೀಡಲಾಗುವುದು.
ಗ್ರಾಮ ಪಂಚಾಯತಿಗಳಿಂದ ವೈಯಕ್ತಿಕ ಕಾಮಗಾರಿಗಳಾದ ಕುರಿ/ದನದ ದೊಡ್ಡಿ(ಎಸ್.ಸಿ. ಮತ್ತು ಎಸ್.ಟಿ. ಕುಟುಂಬಗಳಿಗೆ ಮತ್ತು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಿಸಿದರೆ ಸಾಮಾನ್ಯ ಕುಟುಂಬಗಳಿಗೂ), ಭೂ-ಅಭಿವೃದ್ಧಿ ಮತ್ತು ಒಡ್ಡು/ಬದು ನಿರ್ಮಾಣ, ಇಂಗು ಗುಂಡಿ(ಕೊಳವೆಡಬಾವಿ ಮರಪೂರಣ ಘಟಕ), ಹಂದಿ ದೊಡ್ಡಿ, ಕೊಳವೆಬಾವಿ ಮರುಪುಣ ಘಟಕ ಹಾಗೂ ಸಮುದಾಯ ಕಾಮಗಾರಿಗಳಾದ ಕೆರೆ ಅಭಿವೃದ್ಧಿ ಕಾಮಗಾರಿ(ಕೆರೆ ಹೂಳೆತ್ತುವುದು ಮತ್ತು ಪಿಚ್ಚಿಂಗ್), ಆಟದ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಗ್ರಾಮೀಣ ಗೋದಾಮು, ಮಲ್ಟಿ ಆರ್ಚ್ ಚೆಕ್ಕ ಡ್ಯಾಂ, ಗ್ರಾಮೀಣ ಉದ್ಯಾನವನ ನಿರ್ಮಾಣ, ಅಂಗನವಾಡಿ ಕೇಂದ್ರ( ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ), ನಮ್ಮ ಹೊಲ ನಮ್ಮ ದಾರಿ(ಮಣ್ಣು ರಸ್ತೆ 200 ಮೀ.ಗೆ), ರೈತರ ಕಣ, ಸಂತೆ ಕಟ್ಟೆ, ಶಾಲಾ ಶೌಚಾಲಯ( ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ), ಶಾಲಾ ಕಂಪೌಂಡ, ಸಂಜೀವಿನಿ ಶೆಡ್, ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ, ಗೋಬರ್ ಗ್ಯಾಸ್ ಗುಂಡಿ ತೆಗೆಯುವುದು, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ವಾಲ್ ಪೂಲ್ ಮಾದರಿ, ರಿರ್ಚಾ ವೆಲ್, ಇಂಜಕ್ಷನ್ ರೀಚಾರ್ಜ್ ವೆಲ್, ಕಲ್ಲು ತಡೆ, ಕುಡಿಯುವ ನೀರಿನ ಬೀಓರವೆಲ್ ರಿಚಾರ್ಜ್ ಪಿಟ್, ಸಮುದಾಯ ದನದ ದೊಡ್ಡಿ ನಿರ್ಮಾಣ ಮಾಡಲಾಗುವುದು.
ಈ ಯೋಜನೆಯಡಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ವತಿಯಿಂದ ಹಂದಿ ಶೆಡ್ಡು, ಅಜೋಲ ತೊಟ್ಟಿ, ಅರಣ್ಯ ಇಲಾಖೆ ವತಿಯಿಂದ ಸ್ವಂತ ಜಮೀನು ಮತ್ತು ಬದುಗಳಲ್ಲಿ ಸಿಲ್ವರ್, ಹೆಬ್ಬೇವು, ಹಲಸು, ಸಾಗವಾನಿ, ತೇಗ, ಮುಂತಾದ ಗಿಡಗಳನ್ನು, ಮೀನುಗಾರಿಕೆ ಇಲಾಖೆಯಿಂದ ಮೀನು ಕೃಷಿ ಹೊಂಡ, ರೇಷ್ಮೆ ಇಲಾಖೆಯಿಂದ ಹಿಪ್ಪು ನೆರಳೆ ನರ್ಸರಿ, ಹಿಪ್ಪು ನೆರಳೆ ನಾಟಿ ಜೋಡಿಸಾಲು ಪದ್ಧತಿ, ಹಿಪ್ಪು ನೆರಳೆ ಮರಗಡ್ಡಿ ವಿಧಾನ, ಕೃಷಿ ಇಲಾಖೆಯಿಂದ ಎರೆಹುಳು ತೊಟ್ಟಿ, ಭೂ ಅಭಿವೃದ್ಧಿ, ಕೃಷಿ ಹೊಂಡ ನಿರ್ಮಾಣಕ್ಕೆ ಅವಕಾಶವಿದೆ.
ಈ ಯೋಜನೆಯ ಮಾಹಿತಿ ಹಾಗೂ ಕಾಮಗಾರಿಗಳ ವಿವರಗಳಿಗಾಗಿ ಹಾವೇರಿ ಜಿಲ್ಲಾ ಪಂಚಾಯತಿ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರ ಮೊ:94820 30936, ಜಿ.ಪಂ. ಶಿಕ್ಷಣ ಮತ್ತು ಸಂಹವನ ಸಂಯೋಜಕರ ಮೊ:94820 55243, ಬ್ಯಾಡಗಿ ಶಿಕ್ಷಣ ಮತ್ತು ಸಂಹವನ ಸಂಯೋಜಕರ ಮೊ:94820 48617, ಹಾನಗಲ್ ಶಿಕ್ಷಣ ಮತ್ತು ಸಂಹವನ ಸಂಯೋಜಕರ ಮೊ:94820 48792, ಹಾವೇರಿ ಶಿಕ್ಷಣ ಮತ್ತು ಸಂಹವನ ಸಂಯೋಜಕರ ಮೊ:94820 49318, ಹಿರೇಕೆರೂರು ಶಿಕ್ಷಣ ಮತ್ತು ಸಂಹವನ ಸಂಯೋಜಕರ ಮೊ:94820 49501, ರಾಣೇಬೆನ್ನೂರು ಶಿಕ್ಷಣ ಮತ್ತು ಸಂಹವನ ಸಂಯೋಜಕರ ಮೊ:94820 49675, ಸವಣೂರು ಶಿಕ್ಷಣ ಮತ್ತು ಸಂಹವನ ಸಂಯೋಜಕರ ಮೊ:94820 50292 ಹಾಗೂ ಶಿಗ್ಗಾಂವ ಶಿಕ್ಷಣ ಮತ್ತು ಸಂಹವನ ಸಂಯೋಜಕರ ಮೊ:94820 50822ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
