ದಾವಣಗೆರೆ
ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ರಾಶ್ರಯದಲ್ಲಿ ಇಂದಿನಿಂದ (ಮೇ 17ರಿಂದ) ಮೇ 23ರ ವರೆಗೆ ನಗರದ ಹೊರ ವಲಯದ ಗಾಜಿನ ಮನೆಯಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದ್ದಾರೆ.
ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ನೈಸರ್ಗಿಕವಾಗಿ ಮಾಗಿಸಿದ ಮಾವಿನಹಣ್ಣುಗಳನ್ನು ಯೋಗ್ಯ ಬೆಲೆಗೆ ತಲುಪಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 3500 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಸುಮಾರು 30 ಸಾವಿರ ಟನ್ ಇಳುವರಿ ಬರುತ್ತಿದೆ. ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯ ಬಹುತೇಕ ಪ್ರದೇಶಗಳಲ್ಲಿ ಬಾದಾಮಿ, ರಸಪುರಿ, ಮಲ್ಲಿಕಾ, ಮಲಗೋವಾ, ತೋತಾಪುರಿ, ದಶೆಹರಿ, ಕೇಸರ್, ಬೆನಿಷಾನ್ ಮತ್ತು ಸಿಂಧೂರ ಮಾವಿನ ತಳಿಯನ್ನು ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಮಾವು ಮೇಳದಲ್ಲಿ ಪಾಲ್ಗೊಳ್ಳಲು ದಾವಣಗೆರೆ, ರಾಮನಗರ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಸೇರಿದಂತೆ ಇತರೆ ಜಿಲ್ಲೆಗಳ 25ಕ್ಕೂ ಹೆಚ್ಚು ಮಾವು ಬೆಳೆಗಾರರು ಹೆಸರು ನೋಂದಾಯಿಸಿದ್ದು, ಈ ಮೇಳಕ್ಕಾಗಿ ಗಾಜಿನ ಮನೆಯಲ್ಲಿ 30 ಮಳಿಗೆಗಳನ್ನು ನಿರ್ಮಿಸಿ, ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಯೋಗ್ಯ ಬೆಲೆಗೆ ತಲುಪಿಸಬೇಕೆಂಬ ಉದ್ದೇಶದಿಂದ ಮಾವು ಮೇಳ ಆಯೋಜಿಸಲಾಗಿದ್ದು, ಕಾಲ್ಸಿಯಂ ಕಾರ್ಬೈಡ್‍ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ಇರುವ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನೇ ಮಾರಾಟಕ್ಕೆ ಇಡಲಾಗುವುದು. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಬೆಳೆಯುವ ಸುಮಾರು 50ರಿಂದ 60ಕ್ಕೂ ಹೆಚ್ಚು ಮಾವಿನ ತಳಿಗಳು ಪ್ರದರ್ಶನದಲ್ಲಿ ಲಭ್ಯ ಇರಲಿವೆ ಎಂದರು.
ರಾಸಾಯನಿಕ ಬಳಸಿ ಹಣ್ಣು ಮಾಗಿಸುವಿಕೆಯಿಂದ ಆಗುವ ದುಷ್ಪರಿಣಾಮ ಹಾಗೂ ನೈಸರ್ಗಿಕವಾಗಿ ಹಣ್ಣು ಮಾಗಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ, ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಕುರಿತು ಮತ್ತು ಅದನ್ನು ಸೇವಿಸುವುದರಿಂದ ಆಗುವ ಲಾಭಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮಾಹಿತಿ ನೀಡಲಾಗುವುದು. ಅಲ್ಲದೇ, ಮಾವು ಮಂಡಳಿಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆಯೂ ಅರಿವು ಮೂಡಿಸಲಾಗುವುದು ಎಂದು ಅವರು ವಿವರಿಸಿದರು.
ಮೇಳದಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ, ರೈತರೇ ನೇರವಾಗಿ ಮಾವು ಮಾರಾಟ ಮಾಡುವುದರಿಂದ ರೈತರಿಗೂ ಲಾಭವಾಗಲಿದೆ ಹಾಗೂ ಗ್ರಾಹಕರಿಗೂ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಇಲ್ಲಿ ಮಾವು ದೊರೆಯಲಿವೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾವು ಮೇಳಕ್ಕೆ ಆಗಮಿಸಿ, ಹಣ್ಣುಗಳ ರಾಜ ಮಾವಿನ ಹಣ್ಣಿನ ಸವಿ ಸವಿಯಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿ ಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಎಚ್.ಬಸವರಾಜೇಂದ್ರ, ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನವರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್ ಮತ್ತಿತರರು ಹಾಜರಿದ್ದರು.