ಬಳ್ಳಾರಿ
ಬಳ್ಳಾರಿ ತಾಲೂಕಿನ ರೈತರಿಗೆ ಮಲ್ಲಿಗೆ ಹೂವಿನ ಇಳುವರಿ ಸಂತಸ ತಂದಿದ್ದು,ಆದರೆ ದಲ್ಲಾಳಿಗಳ ಹಾವಳಿಯಿಂದ ನಷ್ಟ ಅನುಭವಿಸುವಂತ ಸಂಗತಿ ಉಂಟಾಗಿದೆ.
ಗಣಿನಾಡಿನಲ್ಲಿ ಮಲ್ಲಿಗೆ ಹೂವಿನ ಪರಿಮಳ ಸೂಸುತ್ತಿದೆ. ಭೀಕರ ಬರ ಹಾಗೂ ಬೇಸಿಗೆಯಿಂದ ಕಂಗಾಲಾದ ರೈತರು ಬೆಳೆಯ ಹೊರತಾಗಿ ಮಲ್ಲಿಗೆ ಹೂವಿನ ಇಳುವರಿಗೆ ಮುಂದಾಗಿದ್ದಾರೆ. ಅದಕ್ಕೆ ತಕ್ಕಂತೆ ಬೆಳೆಯನ್ನು ತೆಗೆದಿದ್ದಾರೆ. ಆದರೆ, ಮಧ್ಯವರ್ತಿಗಳ ಹಾವಳಿಯಿಂದ ಲಾಭಾಂಶವನ್ನು ಕಳೆದುಕೊಳ್ಳುವಂತಾಗಿದೆ.
ಇಳುವರಿ ಚೆನ್ನಾಗಿದ್ದರೂ ಕೈಗೆಟುಕದ ಬೆಂಬಲ ಬೆಲೆ, ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಅಗತ್ಯ ಧಾರಣೆ ಸಿಗುತ್ತಿಲ್ಲ ಎನ್ನಲಾಗಿದೆ.ಗಡಿನಾಡು ಬಳ್ಳಾರಿ ತಾಲೂಕಿನಲ್ಲಿ ಮಲ್ಲಿಗೆ ಪರಿಮಳ ಹೌದು, ಗಣಿನಾಡು ಬಳ್ಳಾರಿ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆಯುವ ಮಲ್ಲಿಗೆ ಹೂವಿನ ಬೆಳೆಗಾರರು ದಲ್ಲಾಳಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಳ್ಳಾರಿ ತಾಲೂಕಿನ ಯಾಳ್ವಿ, ಕಗ್ಗಲ್ ಮತ್ತು ಲಿಂಗದೇವನಹಳ್ಳಿ ಗ್ರಾಮಗಳ ಸುತ್ತಲೂ ಸುಮಾರು 2 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಮಲ್ಲಿಗೆ ಹೂವಿನ ಬೆಳೆ ಬೆಳೆಯಲಾಗಿದೆ. ಸಣ್ಣ ಮತ್ತು ಅತೀ ಸಣ್ಣ ರೈತರು ಹೂವಿನ ಬೆಳೆಯನ್ನ ಬೆಳೆಸಿ, ಸಾವಿರಾರು ಕೂಲಿಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡುತ್ತಾ ಬಂದಿದ್ದಾರೆ. ಗಣಿ ಅಕ್ರಮದ ವಾಸನೆ ಇಡೀ ದೇಶವ್ಯಾಪಿ ಪಸರಿಸಿದರೂ ಸತತ 35 ವರ್ಷಗಳಿಂದ ಈ ಗ್ರಾಮಗಳಲ್ಲಿ ಮಾತ್ರ ಮಲ್ಲಿಗೆ ಹೂವಿನ ಘಮಲು ಕರಗಿಲ್ಲ.
ಉತ್ತಮ ಇಳುವರಿ ಬಂದರೂ ಕೂಡ ಈ ಭಾಗದ ರೈತಾಪಿ ವರ್ಗ ಮಾತ್ರ ತೃಪ್ತಿಕರವಾಗಿಲ್ಲ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮಲ್ಲಿಗೆ ಹೂವನ್ನು ಅಣತಿ ದೂರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಹೂವಿನ ದಾಸ್ತಾನನ್ನು ಸಾಗಣೆ ಮಾಡಲಾಗುತ್ತಿದೆ. ಒಂದು ಶೇರಿಗೆ ಕೇವಲ 30 ರೂ.ಗಳಂತೆ ಹೂವನ್ನು ದಲ್ಲಾಳಿಗಳು ಖರೀದಿಸುತ್ತಾರೆ. ಗ್ರಾಹಕರಿಗೆ 80-100 ರೂ.ಗಳಂತೆ ಮಾರಾಟ ಮಾಡುತ್ತಾರೆ ಎಂದು ಕೂಲಿ ಕಾರ್ಮಿಕ ನಾಗರಾಜ ಹೇಳಿದ್ದಾರೆ.
ಕೂಲಿ ಜಾಸ್ತಿಯಾಗಿದೆ, ಅಗತ್ಯ ಧಾರಣೆ ಇಲ್ಲ,ಅಲ್ಲದೇ ಖರ್ಚು ವೆಚ್ಚವು ಕೂಡ ಹೆಚ್ಚಾಗಿದೆ, ಮಧ್ಯವರ್ತಿಗಳ ಹಾವಳಿ ಹೂವಿನ ರೈತರಿಗೆ ಹೆಚ್ಚು ಕಂಡು ಬರುತ್ತದೆ. ಆದರೂ ಇದರ ಹಾವಳಿಯನ್ನು ಎಪಿಎಂಸಿ ತಡೆಗಟ್ಟಲು ಮಾರುಕಟ್ಟೆ ವಿಫಲವಾಗಿದೆ.ಇನ್ನಾದರು ಇತ್ತ ಕಡೆ ಗಮನ ಹರಿಸಿ ಹಾವಳಿಯನ್ನು ತಡೆಗಟ್ಟಲು ಮುಂದಾಗಬೇಕು, ಎಂದು ರೈತರ ಅಳಲು,ಅಗತ್ಯ ಧಾರಣೆ ನಿಗದಿ ಪಡಿಸಿ ಹೂವಿನ ಬೆಳೆಗಾರರು ಎದುರಿಸುವ ಸಂಕಷ್ಟಕ್ಕೆ ನೆರವಾಗಬೇಕು ಎಂದು ಕೂಲಿ ಕಾರ್ಮಿಕರು ಆಗ್ರಹಿಸಿದರು.