ಬೆಂಗಳೂರು
ಕೊಲೆ,ಕೊಲೆಯತ್ನ ಸುಲಿಗೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸ್ಥಳೀಯರಲ್ಲಿ ತನ್ನ ಕೃತ್ಯಗಳ ಮೂಲಕ ಆತಂಕ ಸೃಷ್ಠಿಸಿ ಪರಾರಿಯಾಗಿಯಾಗಿದ್ದ ಕುಖ್ಯಾತ ರೌಡಿ ವಿನೋದ್ ಅಲಿಯಾಸ್ ಪಚ್ಚೆಗೆ ಅಶೋಕ್ನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಎಡ ಹಾಗೂ ಬಲಗಾಲಿಗೆ ಗಾಯಗೊಂಡಿರುವ ಕೊಲೆಯತ್ನ, ಬೆದರಿಕೆ, ಸುಲಿಗೆ, ಡಕಾಯಿತಿ ಯತ್ನ, ಸೇರಿ 8 ಪ್ರಕರಣಗಳಲ್ಲಿ ಬೇಕಾಗಿದ್ದ ಆನೆಪಾಳ್ಯದ ಪಚ್ಚೆ (24) ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳೆದ ಮೇ 14 ರಂದು ಆನೆಪಾಳ್ಯದಲ್ಲಿ ಚಾರ್ಬಿ ಎಂಬಾತನಿಗೆ ಹಣ ನೀಡುವಂತೆ ಬೆದರಿಕೆ ಹಾಕಿದ್ದು, ಇದಕ್ಕೆ ಪ್ರತಿರೋಧ ತೋರಿದ ಆತನ ಕೈ ಬೆರಳನ್ನು ಕತ್ತರಿಸಿದ್ದ. ರಕ್ಷಣೆಗೆ ಬಂದ ಚಾರ್ಬಿ ತಂದೆ, ತಾಯಿ ಅಲ್ಲದೆ, ಸ್ನೇಹಿತರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ.ಈ ಸಂಬಂಧ ಪ್ರಕರಣ ದಾಖಲಿಸಿದ್ದ ಅಶೋಕ್ ನಗರ ಪೊಲೀಸರು, ಪಚ್ಚೆಯ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದರು.
ತಲೆಮರೆಸಿಕೊಂಡಿದ್ದ ಪಚ್ಚೆ, ಆನೆಪಾಳ್ಯ ಜಂಕ್ಷನ್ನಿಂದ ಬನ್ನೇರುಘಟ್ಟ ಕಡೆಗೆ ಹೋಗುವ ಕ್ರಿಶ್ಚಿಯನ್ ಸೆರೆಮನಿ ಒಳಗೆ ಅವಿತಿರುವ ಮಾಹಿತಿ ಆಧರಿಸಿ ಇಂದು ಮುಂಜಾನೆ 4ರ ವೇಳೆ ಅಶೋಕ್ ನಗರ ಇನ್ಸ್ಪೆಕ್ಟರ್ ಶಶಿಧರ್, ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪಚ್ಚೆಯನ್ನು ಬಂಧಿಸಲು ಬೆನ್ನಟ್ಟಿ ಹೋದಾಗ ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಇನ್ಸ್ಪೆಕ್ಟರ್ ಶಶಿಧರ್ ಅವರು ಎಚ್ಚರಿಕೆ ನೀಡಿದರೂ, ಮತ್ತೆ ಮಚ್ಚು ಹಿಡಿದು ಪೊಲೀಸರತ್ತ ನುಗ್ಗಿದ ಆತನ ಮೇಲೆ ಆತ್ಮರಕ್ಷಣೆಗಾಗಿ ಮತ್ತೆರಡು ಸುತ್ತು ಗುಂಡು ಹಾರಿಸಿದ್ದಾರೆ.
ಅದರಲ್ಲಿ ಒಂದು ಗುಂಡು ಪಚ್ಚೆಯ ಎರಡೂ ಕಾಲುಗಳಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಆತನನ್ನು ಬಂಧಿಸಿ, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಪಾಳ್ಯದ ಪೆನ್ಷನ್ ಟೌನ್ನಲ್ಲಿ ವಾಸಿಸುತ್ತಿದ್ದ ಪಚ್ಚೆ, ಪೇಂಟಿಂಗ್ ಕೆಲಸ ಮಾಡುತ್ತಿದ್ದು, ನಾಲ್ಕೈದು ವರ್ಷಗಳಿಂದ ಅಪರಾಧ ಕೃತ್ಯಕ್ಕೆ ಇಳಿದಿದ್ದ.
ಕೊಲೆಯತ್ನ, ಬೆದರಿಕೆ, ಸುಲಿಗೆ, ಡಕಾಯಿತಿ ಯತ್ನ, ಅಪಹರಣ ಸೇರಿದಂತೆ, 8ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಚ್ಚೆಯನ್ನು ಅಶೋಕ್ ನಗರ ಲೀಸ್ ಠಾಣೆಯ ರೌಡಿಪಟ್ಟಿಗೆ ಸೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








